ಸಿಎಂ ಯಡಿಯೂರಪ್ಪ - ರೋಷನ್ ಬೇಗ್ ಭೇಟಿ

Update: 2019-11-19 13:25 GMT

ಬೆಂಗಳೂರು, ನ.19: ಬಿಜೆಪಿ ಸೇರ್ಪಡೆಗೆ ತಡೆ, ಉಪ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನಿರಾಕರಣೆಯಿಂದಾಗಿ ತೀವ್ರ ಬೇಸರಗೊಂಡಿರುವ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಅನರ್ಹ ಶಾಸಕ ಆರ್.ರೋಷನ್ ಬೇಗ್, ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಮಂಗಳವಾರ ಬೆಳಗ್ಗೆ ನಗರದ ಡಾಲರ್ಸ್‌ ಕಾಲನಿಯಲ್ಲಿರುವ ಮುಖ್ಯಮಂತ್ರಿಯ ನಿವಾಸದಲ್ಲಿ ಉಭಯ ಮುಖಂಡರ ನಡುವೆ ನಡೆದ ಮಾತುಕತೆ ವೇಳೆ, ರೋಷನ್ ಬೇಗ್‌ರನ್ನು ಸಮಾಧಾನಪಡಿಸಲು ಯಡಿಯೂರಪ್ಪ ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ.

ಬಿಜೆಪಿ ಸೇರ್ಪಡೆ ಹಾಗೂ ಟಿಕೆಟ್ ನಿರಾಕರಣೆಗೆ ಎದುರಾಗಿದ್ದ ಸಮಸ್ಯೆಗಳ ಕುರಿತು ರೋಷನ್ ಬೇಗ್‌ಗೆ, ಯಡಿಯೂರಪ್ಪ ವಿವರಿಸಿದ್ದಾರೆ. ಆದರೆ, ಈ ಬಾರಿಯ ಉಪ ಚುನಾವಣೆಯಲ್ಲಿ ಶಿವಾಜಿನಗರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಇದೇ ವೇಳೆ ಯಡಿಯೂರಪ್ಪ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಈಗಿನ ಪರಿಸ್ಥಿತಿಯಲ್ಲಿ ನಿಮ್ಮನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಸಾಧ್ಯವಾಗದೇ ಇರಬಹುದು, ಆದರೆ, ನಮಗೆ ಹಾಗೂ ನಮ್ಮ ಪಕ್ಷಕ್ಕೆ ನೀವು ಕೊಟ್ಟಿರುವ ಸಹಕಾರವನ್ನು ಮರೆಯಲು ಸಾಧ್ಯವಿಲ್ಲ. ಯಾವುದೇ ಕಾರಣಕ್ಕೂ ನಿಮ್ಮನ್ನು ಕೈ ಬಿಡುವುದಿಲ್ಲ. ರಾಜ್ಯದಲ್ಲಿ ನಮ್ಮ ಸರಕಾರ ಅಧಿಕಾರದಲ್ಲಿ ಇರುವವರೆಗೆ ಯಾವ ಚಿಂತನೆಯೂ ಮಾಡಬೇಡಿ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಶಿವಾಜಿನಗರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸರವಣ ಪರ ಕೆಲಸ ಮಾಡುವಂತೆ ನಿಮ್ಮ ಬೆಂಬಲಿಗ ಬಿಬಿಎಂಪಿ ಸದಸ್ಯರು ಹಾಗೂ ಮುಖಂಡರಿಗೆ ಸೂಚನೆ ನೀಡುವಂತೆ ಯಡಿಯೂರಪ್ಪ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ನಿನ್ನೆಯಷ್ಟೇ ಉಪ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾಗಿದ್ದು, ಬಿಜೆಪಿ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ರೋಷನ್ ಬೇಗ್, ಪಕ್ಷೇತರ ಸದಸ್ಯರಾಗಿ ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ, ಅಂತಿಮ ಕ್ಷಣದಲ್ಲಿ ಅವರು ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದರು. ಅಲ್ಲದೇ, 35 ವರ್ಷಗಳ ಕಾಲ ನನ್ನ ರಾಜಕೀಯ ಜೀವನದಲ್ಲಿ ಸಹಕಾರ, ಬೆಂಬಲ ನೀಡಿದ್ದಕ್ಕೆ ಕ್ಷೇತ್ರದ ಜನರಿಗೆ ಅವರು ಕೃತಜ್ಞತೆಗಳನ್ನು ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News