ಮಮತಾ ಬ್ಯಾನರ್ಜಿ-ಅಸದುದ್ದೀನ್ ಉವೈಸಿ ನಡುವೆ ವಾಕ್ಸಮರ

Update: 2019-11-19 13:28 GMT

ಕೊಲ್ಕತ್ತಾ, ನ.19: 'ಸಮುದಾಯಗಳನ್ನು ಒಡೆಯುವ ಕೆಲಸವನ್ನು ಎಐಎಂಐಎಂ ಮಾಡುತ್ತಿದೆ ಹಾಗೂ ಅಲ್ಪಸಂಖ್ಯಾತರು ತೀವ್ರಗಾಮಿತ್ವದ ಕುರಿತಂತೆ ಎಚ್ಚರಿಕೆಯಿಂದಿರಬೇಕು' ಎಂಬ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿಕೆಗೆ ತಿರುಗೇಟು ನೀಡಿರುವ ಎಐಎಂಐಎಂ ನಾಯಕ ಅಸದುದ್ದೀನ್ ಉವೈಸಿ, "ಯಾವುದೇ ಅಲ್ಪಸಂಖ್ಯಾತ ಸಮುದಾಯಕ್ಕೆ ಹೋಲಿಸಿದಾಗ ಬಂಗಾಳದ ಮುಸ್ಲಿಮರ ಮಾನವ ಅಭಿವೃದ್ಧಿ ಸೂಚ್ಯಂಕಗಳು ಅತ್ಯಂತ ಕನಿಷ್ಠವೆಂದು ಹೇಳುವುದು ಧಾರ್ಮಿಕ ತೀವ್ರವಾದವಲ್ಲ'' ಎಂದಿದ್ದಾರೆ.

ಸೋಮವಾರ ಬಂಗಾಳದ ಕೂಚ್ ಬಿಹಾರ್‍ ನಲ್ಲಿ ರ್ಯಾಲಿಯೊಂದನ್ನುದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ   ಎಐಎಂಐಎಂ ಅಥವಾ ಉವೈಸಿ ಹೆಸರನ್ನು ಎತ್ತದೆಯೇ  ಭಿನ್ನಾಭಿಪ್ರಾಯಗಳನ್ನು ಸೃಷ್ಟಿಸುವವರ ಬಗ್ಗೆ ಎಚ್ಚರಿಕೆಯಿಂದಿರಬೇಕು, ಅವುಗಳನ್ನು ನಂಬಿ ತಪ್ಪು ಮಾಡಬಾರದು, ಇಂತಹವರು ಹೈದರಾಬಾದ್‍ನವರು ಎಂದಿದ್ದರು. ಹಿಂದು ತೀವ್ರಗಾಮಿ ಶಕ್ತಿಗಳ ವಿರುದ್ಧವೂ ಅವರು ಮತದಾರರನ್ನು ಎಚ್ಚರಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಉವೈಸಿ, "ಹೈದರಾಬಾದಿನವರಾದ ನಮ್ಮ ಬಗ್ಗೆ ದೀದಿಗೆ ಕಳವಳವಿದ್ದರೆ ಬಿಜೆಪಿ ಬಂಗಾಳದಲ್ಲಿ 42 ಲೋಕಸಭಾ ಕ್ಷೇತ್ರಗಳ ಪೈಕಿ 18ರಲ್ಲಿ ಹೇಗೆ ಗೆದ್ದಿತೆಂದು ಅವರು ನಮಗೆ ತಿಳಿಸಬೇಕು'' ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News