ಡಿ.2ರಿಂದ ಬೆಂಗಳೂರು ರೇಸ್‌ಕೋರ್ಸ್ ಚಟುವಟಿಕೆ ಸ್ಥಗಿತ: ಎಚ್.ಕೆ.ಪಾಟೀಲ್

Update: 2019-11-19 17:43 GMT

ಬೆಂಗಳೂರು, ನ.19: ಪ್ರಸಕ್ತ ಸಾಲಿನ ಡಿಸೆಂಬರ್ 1ರೊಳಗಾಗಿ ರೇಸ್‌ಕೋರ್ಸ್ ಸಂಸ್ಥೆಯು ರಾಜ್ಯ ಸರಕಾರಕ್ಕೆ ನೀಡಬೇಕಾದ ಬಾಕಿ 32.86 ಕೋಟಿ ರೂ.ವಸೂಲಿಗೆ ಕ್ರಮ ಕೈಗೊಳ್ಳಬೇಕು. ಅಲ್ಲದೇ, ಅಲ್ಲಿ ನಡೆಯುವ ಎಲ್ಲ ಚಟುವಟಿಕೆಗಳನ್ನು ಡಿ.2ರಿಂದ ಸ್ಥಗಿತಗೊಳಿಸಬೇಕೆಂದು ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿದೆ ಎಂದು ರಾಜ್ಯ ವಿಧಾನಸಭೆಯ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸರ್ವೋಚ್ಚ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣವನ್ನು ಇತ್ಯರ್ಥ ಪಡಿಸಿಕೊಳ್ಳಲು ಅಗತ್ಯವಾದ ಎಲ್ಲ ಕಾನೂನು ಕ್ರಮಗಳನ್ನು ಒಂದು ತಿಂಗಳ ಒಳಗಾಗಿ ಕೈಗೊಳ್ಳಬೇಕೆಂದು ಅಪರ ಮುಖ್ಯಕಾರ್ಯದರ್ಶಿಗೆ ನಿರ್ದೇಶನ ನೀಡಲಾಗಿದೆ ಎಂದರು.

ಬೆಂಗಳೂರು ನಗರದ ಹೃದಯಭಾಗದಲ್ಲಿರುವ ರೇಸ್ ಕ್ಲಬ್‌ಗೆ ಕಡಿಮೆ ಬಾಡಿಗೆಯನ್ನು ನಿಗದಿ ಪಡಿಸಿರುವುದು, ರೇಸ್ ಕೋರ್ಸ್ ಸಂಸ್ಥೆಯನ್ನು ತೆರವುಗೊಳಿಸುವುದು, ಭಾರತದ ಲೆಕ್ಕ ನಿಯಂತ್ರಕರು ಮತ್ತು ಲೆಕ್ಕ ಪರಿಶೋಧಕರು ನೀಡಿದ್ದ ವರದಿಯ ಕುರಿತು ಇಂದಿನ ಸಭೆಯಲ್ಲಿ ಪರಿಶೀಲನೆ ನಡೆಸಲಾಯಿತು ಎಂದು ಅವರು ಹೇಳಿದರು.

ರಾಜ್ಯ ಸರಕಾರಕ್ಕೆ ಬೆಂಗಳೂರು ಟರ್ಫ್ ಕ್ಲಬ್ ಸಂಸ್ಥೆಯು ತನ್ನ ಒಟ್ಟಾರೆ ಆದಾಯದ ಶೇ.2ರಷ್ಟು ವಾರ್ಷಿಕ ಬಾಡಿಗೆ ಆಧಾರದಲ್ಲಿ 2010-11 ರಿಂದ 2017-18 ರವರೆಗೆ 32,86,99,102 ರೂಪಾಯಿಗಳ ಮೊತ್ತವನ್ನು ಪಾವತಿ ಮಾಡಬೇಕಾಗಿದೆ ಎಂದು ಅಂದಾಜಿಸಲಾಗಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.

1989 ರಿಂದ 98 ರವರೆಗೆ ಪಾವತಿಸಬೇಕಾದ ಬಾಡಿಗೆಯನ್ನ ಸಹ ರೇಸ್ ಕೋರ್ಸ್ ಸಂಸ್ಥೆಯು ಪಾವತಿಸದೇ ಕೇವಲ ವಾರ್ಷಿಕ 5 ಲಕ್ಷ ರೂ.ಗಳ ಬಾಡಿಗೆಯನ್ನು ಮಾತ್ರ ಪಾವತಿಸುತ್ತಾ ಬಂದಿದೆ. ಇದರಿಂದ ಸರಕಾರಕ್ಕೆ ಅಪಾರ ಪ್ರಮಾಣದ ನಷ್ಟವಾಗಿದೆ ಎಂದು ಸಿಎಜಿ ವರದಿ ಮತ್ತು ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ವರದಿಗಳು ಗಂಭೀರವಾದ ಮತ್ತು ತೀವ್ರ ಸ್ವರೂಪದ ಆಕ್ಷೇಪಗಳನ್ನು ವ್ಯಕ್ತಪಡಿಸಿದ್ದವು ಎಂದು ಅವರು ಹೇಳಿದರು.

2009ಕ್ಕೆ ರೇಸ್ ಕೋರ್ಸ್ ಲೀಸ್(ಭೋಗ್ಯ) ಅವಧಿಯು ಪೂರ್ಣಗೊಂಡಿದ್ದರೂ ಹಳೆಯ ದರದಲ್ಲಿ ರೇಸ್ ಸಂಸ್ಥೆಯವರು ಕೇವಲ 25.94 ಲಕ್ಷ ರೂ.ಗಳನ್ನು ವಾರ್ಷಿಕವಾಗಿ ಪಾವತಿಸುತ್ತಿರುವುದನ್ನು ಸಭೆಯು ಗಂಭೀರವಾಗಿ ಪರಿಗಣಿಸಿದೆ ಎಂದು ಅವರು ತಿಳಿಸಿದರು.

2009 ರಿಂದ ಇಲ್ಲಿಯವೆಗೆ ರೇಸ್ ಕೋರ್ಸ್ ಸಂಸ್ಥೆಯು ಲೀಸ್ ಅವಧಿ ಮುಗಿದಿದ್ದರು ಈ ಸ್ಥಳವನ್ನು ಅಕ್ರಮವಾಗಿ ಯಾವುದೇ ಕಾನೂನಾತ್ಮಕ ಅವಕಾಶವಿಲ್ಲದಿದ್ದರು ಮುಂದುವರೆದುಕೊಂಡು ಬಂದಿದೆ. 1968ರಿಂದ ಈವರೆಗಿನ ಎಲ್ಲ ಸರಕಾರಗಳು ಈ ಜಾಗವನ್ನು ಮರಳಿ ಸರಕಾರದ ಸುಪರ್ದಿಗೆ ಪಡೆದುಕೊಳ್ಳಬೇಕೆಂದು ನಿರ್ಣಯಿಸುತ್ತಲೆ ಬಂದಿವೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.

2010ರಲ್ಲಿ ಹೈಕೋರ್ಟ್ ಸರಕಾರದ ಪರವಾಗಿ ಆದೇಶ ಮಾಡಿ, ಈ ಜಾಗವನ್ನು ಸರಕಾರದ ವಶಕ್ಕೆ ನೀಡಿದೆ. ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣ ಬಾಕಿ ಇದೆ ಎಂದು ಸಬೂಬು ಹೇಳುತ್ತಾ, ಅಧಿಕಾರಿಗಳು ಕ್ರಮ ಕೈಗೊಳ್ಳುವುದನ್ನು ವಿಳಂಬ ಮಾಡಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಸಾರ್ವಜನಿಕ ಲೆಕ್ಕ ಪತ್ರ ಸಮಿತಿಯು ಸರ್ವಾನುಮತದಿಂದ ಕೈಗೊಂಡಿರುವ ನಿರ್ಣಯಗಳ ಆಧಾರದಲ್ಲಿ ಸರಕಾರದ ಅಪರ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನಗಳನ್ನು ನೀಡಲಾಗಿದೆ. ಡಿಸೆಂಬರ್ ಅಂತ್ಯದ ವೇಳೆಗೆ ಕೈಗೊಂಡಿರುವ ಎಲ್ಲ ಕ್ರಮಗಳ ಸವಿಸ್ತಾರವಾದ ವರದಿಯನ್ನು ಸಮಿತಿಯ ಸಭೆಯಲ್ಲಿ ಮಂಡಿಸುವಂತೆ ಸೂಚಿಸಲಾಗಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.

ಸಭೆಯಲ್ಲಿ ಲೋಕೋಪಯೋಗಿ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ರಜನೀಶ್ ಗೋಯಲ್, ಕಾನೂನು ಇಲಾಖೆಯ ಕಾರ್ಯದರ್ಶಿ ವಸ್ತ್ರದ ಮಠ, ಕಾರ್ಯದರ್ಶಿ ಬಿ.ಗುರುಪ್ರಸಾದ್ ಮತ್ತು ಮುಖ್ಯ ಅಭಿಯಂತರ ರಮೇಂದ್ರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News