ಜನಸಾಮಾನ್ಯರ ಆರ್ಥಿಕ ಪ್ರಗತಿಗೆ ಕೆನರಾ ಬ್ಯಾಂಕ್ ಸ್ಥಾಪನೆ: ವೆಂಕಟೇಶ ಶೇಷಾದ್ರಿ

Update: 2019-11-19 17:54 GMT

ಬೆಂಗಳೂರು, ನ.19: ಜನಸಾಮಾನ್ಯರಿಗೆ ಬ್ಯಾಂಕಿಂಗ್ ವ್ಯವಸ್ಥೆಗಳು ಮರೀಚಿಕೆಯಾಗಿದ್ದ ದಿನಗಳಲ್ಲಿ ಕೆನರಾ ಬ್ಯಾಂಕ್ ಅನ್ನು ಪ್ರಾರಂಭಿಸಿದ ಅಮ್ಮೆಂಬಳ ಸುಬ್ಬರಾವ್ ಪೈ, ಆರ್ಥಿಕ ಕ್ರಾಂತಿಯನ್ನು ಮಾಡುವಲ್ಲಿ ಯಶಸ್ವಿಯಾದರು ಎಂದು ಬೆಂಗಳೂರಿನ ಕೆನರಾ ಬ್ಯಾಂಕ್ ಮಾಹಿತಿ ತಂತ್ರಜ್ಞಾನ ತರಬೇತಿ ಸಂಸ್ಥೆಯ ನಿರ್ದೇಶಕ ವೆಂಕಟೇಶ ಶೇಷಾದ್ರಿ ತಿಳಿಸಿದ್ದಾರೆ.

ಬೆಂಗಳೂರಿನ ಕೆನರಾ ಬ್ಯಾಂಕ್ ಮಾಹಿತಿ ತಂತ್ರಜ್ಞಾನ ತರಬೇತಿ ಸಂಸ್ಥೆಯ ವತಿಯಿಂದ ಕೆನರಾ ಬ್ಯಾಂಕ್ ಸಂಸ್ಥಾಪಕ ಅಮ್ಮೆಂಬಳ ಸುಬ್ಬರಾವ್ ಪೈ ಜನ್ಮ ದಿನಾಚರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, 1906ರಲ್ಲಿ ಸ್ಥಾಪಿತವಾದ ಕೆನರಾ ಬ್ಯಾಂಕ್ ಇಂದು ಹೆಮ್ಮರವಾಗಿ ಬೆಳೆದು ದೇಶದ ಶ್ರೇಷ್ಠ ಬ್ಯಾಂಕ್ ಎನಿಸಿಕೊಂಡಿದೆ ಎಂದರು.

ಭಾರತಕ್ಕೆ ಸ್ವತಂತ್ರ ಬರುವುದಕ್ಕಿಂತ ಐದು ದಶಕಗಳ ಹಿಂದೆಯೇ ಅಮ್ಮೆಂಬಳ ಸುಬ್ಬರಾವ್ ಪೈ, ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಬೇಕೆಂಬ ಸದುದ್ದೇಶದಿಂದ ಮಂಗಳೂರಿನಲ್ಲಿ ಹೆಣ್ಣು ಮಕ್ಕಳಿಗಾಗಿಯೇ ಶಾಲೆಯನ್ನು ಸ್ಥಾಪಿಸಿದರು. ಹಾಗೂ ಜನಸಾಮಾನ್ಯರ ಆರ್ಥಿಕ ಸ್ವಾವಲಂಬನೆಗಾಗಿ ಕೆನರಾ ಬ್ಯಾಂಕ್ ಸ್ಥಾಪಿಸಿದರು ಎಂದು ಅವರು ಹೇಳಿದರು.

ರಾಷ್ಟ್ರೀಯ ರುಡ್ ಸೆಟ್ ಅಕಾಡೆಮಿಯ ಉಪನ್ಯಾಸಕ ಟಿ.ಪಿ.ಜಗದೀಶ್ ಮೂರ್ತಿ ಮಾತನಾಡಿ, ಸಂಸ್ಥಾಪಕರ ಆಶಯದಂತೆ ಕೆನರಾ ಬ್ಯಾಂಕ್ ತನ್ನ ತರಬೇತಿ ಸಂಸ್ಥೆಯ ಮೂಲಕ ಲಕ್ಷಾಂತರ ನಿರುದ್ಯೋಗಿ ಯುವಕ-ಯುವತಿಯರಿಗೆ ವೃತ್ತಿ ಶಿಕ್ಷಣವನ್ನು ನೀಡುವುದರ ಜೊತೆಗೆ, ಸಾಲದ ಸೌಲಭ್ಯವನ್ನೂ ನೀಡುವ ಮೂಲಕ ಸ್ವಾವಲಂಬಿಗಳಾಗಲು ಅನುವು ಮಾಡಿಕೊಟ್ಟಿದೆ ಎಂದರು.

ಸಂಸ್ಥೆಯ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕವನಗಳನ್ನು ವಾಚಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರಾದ ವೆಂಕಟೇಶ್ ಬಾಬು, ಕೆ.ಅನುಶ್ರೀ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News