ಇಳಿಗುಂಡಿಗಳ ಸ್ವಚ್ಛತೆಗೆ ಮನುಷ್ಯರ ಬಳಕೆ ಅಮಾನವೀಯ: ಜಿ.ಕುಮಾರ ನಾಯಕ್

Update: 2019-11-19 17:55 GMT

ಬೆಂಗಳೂರು, ನ.19: ನೂತನ ಪದ್ಧತಿಗಳನ್ನು ಅಳವಡಿಸಿಕೊಳ್ಳದೇ ಇಳಿಗುಂಡಿಗಳನ್ನು ಮನುಷ್ಯರಿಂದಲೇ ಸ್ವಚ್ಛಗೊಳಿಸುವ ಪದ್ಧತಿ ಅನುಸರಿಸುತ್ತಿರುವುದು ಅಮಾನವೀಯ ಎಂದು ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜಿ.ಕುಮಾರ ನಾಯಕ್ ಹೇಳಿದ್ದಾರೆ.
ನಗರದಲ್ಲಿಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಖಾಸಗಿ ನಿರ್ಮಲೀಕರಣ ಕೆಲಸಗಾರರಿಗೆ ಸುರಕ್ಷತಾ ಕ್ರಮಗಳ ಕುರಿತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಅಪಾರವಾಗಿ ಬೆಳೆದಿದೆ. ನೂತನ ತಂತ್ರಜ್ಞಾನವನ್ನು ಬಳಸಿಕೊಂಡು ಅನೇಕ ಸಾಧನೆಗಳನ್ನು ಮಾಡುತ್ತಿದ್ದೇವೆ. ಇತ್ತೀಚಿಗೆ ಹೊಸ ಆವಿಷ್ಕಾರದ ಮೂಲಕ ಚಂದ್ರಯಾನವನ್ನು ಕೈಗೊಂಡಿದ್ದೇವೆ. ಆದರೆ, ಇಂದಿಗೂ ಇಳಿಗುಂಡಿಗಳನ್ನು ಸ್ವಚ್ಛಗೊಳಿಸಲು ಮಾನವರನ್ನೇ ಬಳಕೆ ಮಾಡುತ್ತಿರುವುದು ಸಲ್ಲ ಎಂದು ತಿಳಿಸಿದರು.

ರಾಜ್ಯದಲ್ಲಿ ಮಲಗುಂಡಿಗಳನ್ನು ಸ್ವಚ್ಛಗೊಳಿಸಲು ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು. ಅಲ್ಲದೆ, ಅದನ್ನು ವ್ಯಾಪಕವಾಗಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಆ ಮೂಲಕ ಇಳಿಗುಂಡಿಗಳಿಗೆ ಇಳಿದು ಪ್ರಾಣ ಕಳೆದುಕೊಳ್ಳುವವರನ್ನು ರಕ್ಷಿಸಿದಂತಾಗುತ್ತದೆ ಎಂದು ಅವರು ಪ್ರತಿಪಾದಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಎಸ್ಸಿಎಸ್ಪಿ ಮತ್ತು ಟಿಎಸ್ಪಿ ನೋಡಲ್ ಏಜೆನ್ಸಿ ಅಧಿಕಾರಿ ಡಾ.ಇ.ವೆಂಕಟಯ್ಯ ಮಾತನಾಡಿ, ನಮ್ಮ ಸಂಸ್ಥೆಯು ಈಗಾಗಲೇ ಹಲವು ನೌಕರರಿಗೆ ತರಬೇತಿ ನೀಡಲಾಗಿದೆ. ಯಂತ್ರಗಳ ಬಳಕೆ ಮಾಡುವುದರ ಮೂಲಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ನಮ್ಮ ಉದ್ದೇಶವಾಗಿದೆ ಎಂದರು.

ಇಳಿಗುಂಡಿಗಳನ್ನು ಶುಚಿಗೊಳಿಸುವ ಯಂತ್ರಗಳನ್ನು ಖರೀದಿಸಲು ಸರಕಾರವು ಸಬ್ಸಿಡಿ ದರದಲ್ಲಿ ಸಾಲ ನೀಡಲು ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಸಾರ್ವಜನಿಕರು ಇದರ ಬಗ್ಗೆ ಅರಿವು ಪಡೆಯಬೇಕು. ಮನುಷ್ಯರಿಂದ ಇಳಿಗುಂಡಿಗಳು ಸ್ವಚ್ಛತೆ ಮಾಡಿಸುವುದಕ್ಕೆ ಇತಿಶ್ರೀ ಹಾಡಬೇಕು ಎಂದು ನುಡಿದರು.

ಜಲಮಂಡಳಿಯ ಅಧ್ಯಕ್ಷ ತುಷಾರ್ ಗಿರಿನಾಥ್ ಮಾತನಾಡಿ, ಈಗಾಗಲೇ ಜಲಮಂಡಳಿ ವತಿಯಿಂದ ಇಳಿಗುಂಡಿಗಳನ್ನು ಶುಚಿಗೊಳಿಸಲು 30 ಯಂತ್ರಗಳನ್ನು ಖರೀದಿಸಿದ್ದು, ಒಂದು ಯಂತ್ರಕ್ಕೆ 30 ಲಕ್ಷ ರೂ.ಗಳನ್ನು ಖರ್ಚು ಮಾಡಲಾಗಿದೆ. ಈ ಯಂತ್ರಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ಪ್ರತ್ಯೇಕ ನೌಕರರ ಅಗತ್ಯವಿರಲ್ಲ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಫಾಯಿ ಕರ್ಮಚಾರಿ ಆಯೋಗದ ಕಾರ್ಯದರ್ಶಿ ಆರ್.ರಮಾ, ಡಾ.ಬಾಬು ಜಗಜೀವನ್ ರಾವ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ಎಚ್.ನಟರಾಜು, ಜಳಮಂಡಳಿ ನೌಕರರ ಸಂಘದ ಅಧ್ಯಕ್ಷ ರುದ್ರೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News