ಮದ್ಯದಂಗಡಿ ಸ್ಥಳಾಂತರಕ್ಕೆ ಅನುಮತಿ: ಪ್ರಕರಣದ ದಾಖಲೆಗಳನ್ನು ಒದಗಿಸಲು ಹೈಕೋರ್ಟ್ ನಿರ್ದೇಶನ

Update: 2019-11-19 17:56 GMT

ಬೆಂಗಳೂರು, ನ.19: ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಾಗರಪೇಟೆ ಗ್ರಾಮದಲ್ಲಿದ್ದ ಮದ್ಯದಂಗಡಿಯನ್ನು ಬಸವಪಟ್ಟಣ ಗ್ರಾಮಕ್ಕೆ ಸ್ಥಳಾಂತರಿಸಲು ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಪಿಐಎಲ್ ಸಂಬಂಧ ಹೈಕೋರ್ಟ್ ಪ್ರಕರಣಕ್ಕೆ ಸಂಬಂಧಿಸಿ ಎಲ್ಲ ದಾಖಲೆಗಳನ್ನು ಹಾಜರುಪಡಿಸಲು ರಾಜ್ಯ ಸರಕಾರಕ್ಕೆ ನಿರ್ದೇಶಿಸಿದೆ.

ಈ ಕುರಿತು ಚನ್ನಗಿರಿ ತಾಲೂಕಿನ ಬಿ.ಜಿ.ಯೋಗೇಶ್, ಆರ್.ರಾಮಮೂರ್ತಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಪ್ರದೀಪ್‌ಸಿಂಗ್ ಯೆರೂರು ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

ಅರ್ಜಿದಾರರ ಪರ ವಾದಿಸಿದ ವಕೀಲರು, ಸ್ಥಳಾಂತರಕ್ಕೆ ಮನವಿ ಸಲ್ಲಿಸಿದ ದಿನವೇ ಆಕ್ಷೇಪಣೆಗಳನ್ನೂ ಆಲಿಸದೆ ಚನ್ನಗಿರಿ ವಿಭಾಗದ ಅಬಕಾರಿ ಇನ್ ಸ್ಪೆಕ್ಟರ್ ಸಾಗರಪೇಟೆ ಗ್ರಾಮದಲ್ಲಿದ್ದ ಮದ್ಯದಂಗಡಿಯನ್ನು ಬಸವಪಟ್ಟಣ ಗ್ರಾಮಕ್ಕೆ ಸ್ಥಳಾಂತರಿಸಲು ಶಿಫಾರಸು ಮಾಡಿ ವರದಿ ನೀಡಿದ್ದಾರೆ. ಆ ವರದಿ ಆಧರಿಸಿ ಅದೇ ದಿನ ಅಬಕಾರಿ ಉಪ ಆಯುಕ್ತರು ಮದ್ಯದಂಗಡಿ ಸ್ಥಳಾಂತರಕ್ಕೆ ಆದೇಶಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು ಮೇಲ್ನೋಟಕ್ಕೆ ಇಲ್ಲಿ ಕಾನೂನು ಉಲ್ಲಂಘನೆಯಾಗಿರುವುದು ಕಂಡು ಬರುತ್ತಿದೆ. ಮುಂದಿನ ವಿಚಾರಣೆ ವೇಳೆ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಹಾಜರುಪಡಿಸಬೇಕು. ಸ್ಥಳಾಂತರಕ್ಕೆ ಆದೇಶಿಸಿರುವ ಅಧಿಕಾರಿಗಳ ಹೆಸರು ಒದಗಿಸಿ, ಅವರ ವಿರುದ್ಧ ವಿಚಾರಣೆಗೆ ಆದೇಶಿಸಲಾಗುತ್ತದೆ ಎಂದ ನ್ಯಾಯಪೀಠವು ವಿಚಾರಣೆಯನ್ನು ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News