ಅಮೆರಿಕದಿಂದ ಮತ್ತೆ 145 ಮಂದಿ ಭಾರತೀಯರ ಗಡೀಪಾರು

Update: 2019-11-20 03:31 GMT

ಹೊಸದಿಲ್ಲಿ: ವೀಸಾ ನಿಯಮಾವಳಿಯನ್ನು ಉಲ್ಲಂಘಿಸಿ ಅಕ್ರಮ ವಲಸಿಗರು ಎನಿಸಿಕೊಂಡಿದ್ದ 145 ಮಂದಿ ಭಾರತೀಯರನ್ನು ಅಮೆರಿಕ ಗಡೀಪಾರು ಮಾಡಿದ್ದು, ಇವರು ಬಾಂಗ್ಲಾದೇಶ ಮೂಲಕ ವಿಶೇಷ ವಿಮಾನದಲ್ಲಿ ಬುಧವಾರ ದೆಹಲಿಯ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯಲಿದ್ದಾರೆ.

ಈ ವಿಮಾನದಲ್ಲಿ ಬಾಂಗ್ಲಾದೇಶ ಸೇರಿದಂತೆ ದಕ್ಷಿಣ ಏಷ್ಯಾದ ಕೆಲ ಪ್ರಜೆಗಳೂ ಇದ್ದಾರೆ ಎಂದು ವಿಮಾನ ನಿಲ್ದಾಣ ಅಧಿಕಾರಿಗಳು ಹೇಳಿದ್ದಾರೆ.

ಅಮೆರಿಕಕ್ಕೆ ಅಕ್ರಮ ವಿಧಾನದ ಮೂಲಕ ಪ್ರವೇಶ ಗಿಟ್ಟಿಸಿಕೊಡುವುದಾಗಿ ಸ್ಥಳೀಯ ಅಂತರ್ ರಾಷ್ಟ್ರೀಯ ಏಜೆಂಟರ ಭರವಸೆ ಹಿನ್ನೆಲೆಯಲ್ಲಿ ಇವರು ಅಮೆರಿಕಕ್ಕೆ ತೆರಳಿದ್ದರು. ಈ ಪೈಕಿ ಬಹುತೇಕ ಭಾರತೀಯರು ವೀಸಾ ನಿಯಮಾವಳಿಗಳನ್ನು ಉಲ್ಲಂಘಿಸಿ ಅಮೆರಿಕದಲ್ಲಿ ಅವಧಿ ಮೀರಿ ವಾಸ್ತವ್ಯ ಹೂಡಿದ್ದರು ಎಂದು ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

"ವಿಮಾನದಲ್ಲಿ ಕೆಲ ಬಾಂಗ್ಲಾದೇಶಿ ಮತ್ತು ಶ್ರೀಲಂಕಾ ಪ್ರಜೆಗಳು ಇದ್ದಾರೆ ಎಂಬ ಮಾಹಿತಿ ಬಂದಿದೆ. ಗಡೀಪಾರಿಗೆ ಒಳಗಾದವರಲ್ಲಿ ಬಹುತೇಕ ಮಂದಿ 20 ರಿಂದ 35 ವರ್ಷ ವಯಸ್ಸಿನವರು. ಈ ಎಲ್ಲರಿಗೂ ತುರ್ತು ಪ್ರಮಾಣಪತ್ರಗಳನ್ನು ನೀಡಲಾಗಿದ್ದು, ಇದರ ಅನ್ವಯ ಅಮೆರಿಕದಿಂದ ಭಾರತಕ್ಕೆ ಏಕಮುಖ ಯಾನ ಕೈಗೊಳ್ಳಲು ಮಾತ್ರ ಇವರಿಗೆ ಅವಕಾಶವಿರುತ್ತದೆ" ಎಂದು ಸ್ಪಷ್ಟಪಡಿಸಿದ್ದಾರೆ.

ಗಡೀಪಾರಿಗೆ ಒಳಗಾದ ಎಲ್ಲರನ್ನೂ ದೆಹಲಿ ವಿಮಾನ ನಿಲ್ದಾಣದಲ್ಲಿ ಬರ ಮಾಡಿಕೊಳ್ಳಲಾಗುತ್ತದೆ. ಅವರ ದಾಖಲೆಗಳನ್ನು ಪ್ರತ್ಯೇಕವಾಗಿ ನಿರ್ವಹಿಸಿ ದಾಖಲೀಕರಣ ಮಾಡಲಾಗುತ್ತದೆ. ಈ ಹಿಂದೆ ಕೂಡಾ 10-15 ಲಕ್ಷ ರೂಪಾಯಿ ಶುಲ್ಕ ವಿಧಿಸಿ ಅಮೆರಿಕ ಪ್ರವೇಶ ಗಿಟ್ಟಿಸಿಕೊಡುವ ಭರವಸೆಯನ್ನು ಅಂತರ್ ರಾಷ್ಟ್ರೀಯ ಏಜೆಂಟರು ನೀಡಿದ್ದರು. ಗಡೀಪಾರಿಗೆ ಒಳಗಾದವರು ಬಂದ ಬಳಿಕ ಭಾರತದಲ್ಲಿ ಈ ಏಜೆಂಟರಿಗೆ ಯಾರು ನೆರವಾಗುತ್ತಿದ್ದಾರೆ ಎಂಬ ಬಗ್ಗೆಯೂ ಪತ್ತೆ ಮಾಡಲಾಗುತ್ತದೆ. ಬೇರೆ ಬೇರೆ ರಾಜ್ಯಗಳಿಗೆ ಇವರು ಸೇರಿರುವ ಸಾಧ್ಯತೆ ಇದ್ದು, ಆಯಾ ರಾಜ್ಯಗಳಿಗೆ ಮಾಹಿತಿ ನೀಡಲಾಗುತ್ತದೆ ಎಂದು ಹೇಳಿದ್ದಾರೆ. ಅ. 23ರಂದು ಅಮೆರಿಕ 117 ಭಾರತೀಯರನ್ನು ಗಡೀಪಾರು ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News