4ನೇ ತರಗತಿ ಪರೀಕ್ಷೆಗೆ ಹಾಜರಾದ 105 ವರ್ಷದ ಅಜ್ಜಿ!

Update: 2019-11-20 08:52 GMT
ಸಾಂದರ್ಭಿಕ ಚಿತ್ರ

ತಿರುವನಂತಪುರಂ :  ರಾಜ್ಯ ಸಾಕ್ಷರತಾ ಆಯೋಗ ನಡೆಸುವ ನಾಲ್ಕನೇ ತರಗತಿ ತತ್ಸಮಾನ ಪರೀಕ್ಷೆಗೆ ಕೇರಳದ 105 ವರ್ಷದ ಅಜ್ಜಿ ಹಾಜರಾಗಿ ಎಲ್ಲರನ್ನೂ ಚಕಿತಗೊಳಿಸಿದ್ದಾರೆ.

ಕಲಿಯಬೇಕೆಂಬ ತುಡಿತ ಹೊಂದಿರುವ ಭಾಗೀರಥಿ ಅಮ್ಮ ಎಂಬವರ ತಾಯಿ ಅವರು ಚಿಕ್ಕವರಿರುವಾಗಲೇ ಮೃತಪಟ್ಟ ನಂತರ ಸೋದರ ಸೋದರಿಯರನ್ನು ನೋಡಿಕೊಳ್ಳುವ ಜವಾಬ್ದಾರಿ ಅವರ ಹೆಗಲ ಮೇಲೆ ಬಿದ್ದ ಕಾರಣ  ಕಲಿಯಬೇಕೆಂಬ ಆಕೆಯ  ಕನಸು ಕನಸಾಗಿಯೇ ಉಳಿದಿತ್ತು. ಮುಂದೆ ಮದುವೆಯಾಗಿ ಆರು ಮಕ್ಕಳನ್ನು ಹೆತ್ತ ಆಕೆ ತನ್ನ ಪತಿಯನ್ನೂ ಬಹಳ ಬೇಗನೇ ಕಳೆದುಕೊಂಡಿದ್ದರು.

ಸಾಕ್ಷರತಾ ಮಿಷನ್ ಪರೀಕ್ಷೆಯನ್ನು ಅವರು ಕೊಲ್ಲಂ ನಗರದ ತಮ್ಮ ನಿವಾಸದಲ್ಲಿಯೇ ಬರೆದು  ಕೇರಳ ಸಾಕ್ಷರತಾ ಮಿಷನ್ ಅಂಗವಾಗಿ ಶಿಕ್ಷಣ ಪಡೆದ  ಅತ್ಯಂತ ಹಿರಿಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆಂದು ಸಾಕ್ಷರತಾ ಮಿಷನ್ ನಿರ್ದೇಶಕಿ ಪಿ ಎಸ್ ಶ್ರೀಕಲಾ ಹೇಳಿದ್ದಾರೆ.

ಭಾಗೀರಥಿ ಅಮ್ಮ ಅವರಿಗೆ ಬರೆಯಲು ಸ್ವಲ್ಪ ಕಷ್ಟವಾಗಿದ್ದರಿಂದ ಪರಿಸರ, ಗಣಿತ ಹಾಗೂ ಮಲಯಾಳಂ ಪ್ರಶ್ನೆ ಪತ್ರಿಕೆಗಳಿಗೆ ತಮ್ಮ  ಕಿರಿಯ ಪುತ್ರಿಯ ಸಹಾಯದಿಂದ ಉತ್ತರಿಸಲು ಆಕೆ ಮೂರು ದಿನ ತೆಗೆದುಕೊಂಡರು.

ಈ ಇಳಿ ವಯಸ್ಸಿನಲ್ಲೂ ಆಕೆಯ ಸ್ಮರಣಶಕ್ತಿ ಉತ್ತಮವಾಗಿದ್ದು, ದೃಷ್ಟಿ ಕೂಡ ಉತ್ತಮವಾಗಿದೆ. ಹಾಡನ್ನು ಹಾಡುವ ಆಕೆಗಿರುವ ಒಂದೇ ಕೊರಗು ಎಂದರೆ ಆಕೆಗೆ ವಿಧವಾ ಹಾಗೂ ವೃದ್ಧಾಪ್ಯ ವೇತನ ದೊರಕುತ್ತಿಲ್ಲ ಎಂಬುದಾಗಿದೆ. ಆಕೆಯ ಬಳಿ ಆಧಾರ್ ಕಾರ್ಡ್ ಇಲ್ಲದಿರುವುದೇ ಇದಕ್ಕೆ ಕಾರಣ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News