ಸುಪ್ರೀಂನ ವಿಶ್ವಾಸಾರ್ಹತೆಯನ್ನು ತುರ್ತಾಗಿ ಮರುಸ್ಥಾಪಿಸಬೇಕು : ನ್ಯಾ. ಲೋಕುರ್

Update: 2019-11-20 17:49 GMT
PTI 

ಹೊಸದಿಲ್ಲಿ, ನ.20: ಸುಪ್ರೀಂಕೋರ್ಟ್‌ನ ವಿಶ್ವಾಸಾರ್ಹತೆ ಮತ್ತು ಘನತೆಯನ್ನು ತುರ್ತಾಗಿ ಮರುಸ್ಥಾಪಿಸುವ ಕಾರ್ಯಭಾರ ನೂತನ ಸಿಜೆಐ ಎಸ್‌ಎ ಬೊಬ್ಡೆಯವರ ಮೇಲಿದೆ ಎಂದು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಮದನ್ ಬಿ. ಲೋಕುರ್ ಹೇಳಿದ್ದಾರೆ.

ದೇಶದ ನ್ಯಾಯಾಂಗದಲ್ಲಿರುವ ಸಮಸ್ಯೆಯನ್ನು ನೂತನ ಸಿಜೆಐ ಅತ್ಯಂತ ತುರ್ತಾಗಿ, ನಿರುದ್ವಿಗ್ನವಾಗಿ ಮತ್ತು ಸಂಬಂಧಿಸಿದ ಎಲ್ಲರ ನೆರವು ಪಡೆದು ಪರಿಹರಿಸಬೇಕು ಎಂದು ಪತ್ರಿಕೆಯೊಂದರಲ್ಲಿ ಬರೆದಿರುವ ಲೇಖನದಲ್ಲಿ ನ್ಯಾ. ಲೋಕುರ್ ಅಭಿಪ್ರಾಯಪಟ್ಟಿದ್ದಾರೆ.

ಸುಪ್ರೀಂಕೋರ್ಟ್‌ನ ಘನತೆ ಮತ್ತು ವಿಶ್ವಾಸಾರ್ಹತೆಯನ್ನು ಮರುಸ್ಥಾಪಿಸುವ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳದಿದ್ದರೆ, ಇದು ನ್ಯಾಯಾಂಗ ವ್ಯವಸ್ಥೆಯ ಸ್ವಾತಂತ್ರ್ಯದ ಮೇಲೆ ಹೊಡೆಯುವ ಕೊನೆಯ ಮೊಳೆಯಾಗಲಿದೆ . ನೂತನ ಸಿಜೆಐಗೆ ಸಾಕಷ್ಟು ಸಮಯವಿದೆ. ಈ ಅವಕಾಶವನ್ನು ಅವರು ವ್ಯರ್ಥವಾಗಿಸಿದರೆ ಮತ್ತೆ ದೊರಕದು ಎಂದವರು ಹೇಳಿದ್ದಾರೆ.

ಸುಪ್ರೀಂಕೋರ್ಟ್ ವಿಶ್ವದಲ್ಲೇ ಅತ್ಯಂತ ಪ್ರಬಲ, ಪ್ರಭಾವೀ ನ್ಯಾಯಾಲಯ ಎಂಬ ಬಣ್ಣನೆ ಸರಿಯಲ್ಲ. ಸುಪ್ರೀಂಕೋರ್ಟ್ ಇತ್ತೀಚೆಗೆ ನೀಡಿರುವ ಕೆಲವು ತೀರ್ಪು ಹಾಗೂ ಆಡಳಿತಾತ್ಮಕ ನಿರ್ಧಾರಗಳನ್ನು, ಮುಖ್ಯವಾಗಿ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಗಮನಿಸಿದರೆ ನಮ್ಮ ಕೆಲವು ನ್ಯಾಯಾಧೀಶರು ಬೆನ್ನುಮೂಳೆ ಇರುವವರಂತೆ ವರ್ತಿಸಬೇಕು ಎಂಬುದು ಭಾಸವಾಗುತ್ತದೆ. ನ್ಯಾಯಾಧೀಶರಿಗೆ ಸೀಲ್ ಮಾಡಿದ ಲಕೋಟೆಯಲ್ಲಿ ಸಲ್ಲಿಸಿರುವ ಮಾಹಿತಿಯ ಆಧಾರದಲ್ಲಿ ಯಾರನ್ನೂ ಬಂಧನಲ್ಲಿಡುವಂತಿಲ್ಲ. ಅಥವಾ ಸಮಯದ ಅಭಾವದಿಂದ, ತಪ್ಪು ಮಾಹಿತಿಯನ್ನು ಆಧರಿಸಿ, ಜೈಲಿನಲ್ಲಿದ್ದರೇ ಆ ವ್ಯಕ್ತಿ ಸುರಕ್ಷಿತನಾಗಿರುತ್ತಾನೆ ಎಂಬ ಕಾರಣಕ್ಕೆ ಬಂಧನದಲ್ಲಿಡುವಂತಿಲ್ಲ ಎಂದು ಲೋಕುರ್ ಹೇಳಿದ್ದಾರೆ.

ಪ್ರಾಮಾಣಿಕ ನಿರ್ಧಾರ ಪ್ರಕಟಿಸಿದ್ದಕ್ಕೆ ತಮಗೆ ಶಿಕ್ಷೆಯಾಗುವುದಿಲ್ಲ ಎಂಬ ವಿಶ್ವಾಸವನ್ನು ನ್ಯಾಯಾಧೀಶರಲ್ಲಿ ಮೂಡಿಸಬೇಕು. ನ್ಯಾಯಾಧೀಶರು ಭಯ ಅಥವಾ ಪಕ್ಷಪಾತವಿಲ್ಲದೆ ತಮ್ಮ ಜವಾಬ್ದಾರಿ ನಿರ್ವಹಿಸುವ ಧೈರ್ಯವನ್ನು ಅವರಲ್ಲಿ ಸಿಜೆಐ ಬೊಬ್ಡೆ ಮೂಡಿಸಬೇಕು. ದೇಶದ ಕಾನೂನು ಮತ್ತು ಸಂವಿಧಾನಕ್ಕೆ ಅನುಗುಣವಾಗಿ ವೈಯಕ್ತಿಕ ಸ್ವಾತಂತ್ರ್ಯವನ್ನು ರಕ್ಷಿಸಲು ತಾವು ಬದ್ಧ ಎಂಬ ವಿಶ್ವಾಸವನ್ನು ನ್ಯಾಯಾಧೀಶರು ಜನತೆಯಲ್ಲಿ ಮೂಡಿಸಬೇಕು. ನ್ಯಾಯಾಂಗ ಮತ್ತು ಸಾಮಾನ್ಯ ಜನರ ನಡುವಿನ ಸಂವಹನಾ ಮಾಧ್ಯಮವನ್ನು ಸಿಜೆಐ ಮುಕ್ತವಾಗಿರಿಸಬೇಕು. ಪಾರದರ್ಶಕತೆ ಎಂಬುದು ಗಡಿಯಾರದ ಲೋಲಕದಂತಲ್ಲ. ಈ ಹಿಂದೆ ನ್ಯಾಯಾಧೀಶರ ನೇಮಕ ಮಾಡಿಕೊಳ್ಳುವ ಕೊಲಿಜಿಯಂನ ನಿರ್ಧಾರವನ್ನು ಬಹಿರಂಗಗೊಳಿಸಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಇದು ರಹಸ್ಯ ವಿಷಯವಾಗಿಬಿಟ್ಟಿದೆ. ಸಮತೋಲನೆ ಅಗತ್ಯವಾಗಿದೆ ಮತ್ತು ನ್ಯಾಯಾಧೀಶರು ಮುಕ್ತ ಮತ್ತು ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು ಎಂದವರು ಹೇಳಿದ್ದಾರೆ.

ಕೊಲಿಜಿಯಂನ ಕೆಲವೊಂದು ವಿವಾದಾತ್ಮಕ ಆಡಳಿತಾತ್ಮಕ ನಿರ್ಧಾರಗಳು ಹಲವರಲ್ಲಿ ನಿರಾಶೆ ಮೂಡಿಸಿದ್ದು ಇದರ ಹಿಂದೆ ಕಾಣದ ಕೈಯ ಕೈವಾಡವಿದೆ ಎಂದು ಭಾವಿಸುವಂತಾಗಿದೆ. ಕೊಲಿಜಿಯಂನ ಕೆಲವು ಆಯ್ದ ವಿಷಯಗಳನ್ನು ಮಾತ್ರ ಮಾಧ್ಯಮಗಳಿಗೆ ಸೋರಿಕೆ ಮಾಡುವುದನ್ನು ತಡೆಯಲು ಮಾಧ್ಯಮ ಸಲಹೆಗಾರ ಅಥವಾ ವಕ್ತಾರರನ್ನು ನೇಮಿಸುವ ಅಗತ್ಯವಿದೆ. ಗುಣಮಟ್ಟದಲ್ಲಿ ರಾಜಿಯಾಗದೆ , ಮಾನದಂಡವನ್ನು ಉಲ್ಲಂಘಿಸದೆ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಸಾಧ್ಯವಿಲ್ಲ. ಆದರೆ ದೇಶಕ್ಕೆ ಇಷ್ಟೊಂದು ನ್ಯಾಯಾಧೀಶರ ಅಗತ್ಯವಿದೆಯೇ ಎಂಬ ಪ್ರಶ್ನೆಯೂ ಇಲ್ಲಿ ಮೂಡುತ್ತದೆ ಎಂದು ಲೋಕುರ್ ಹೇಳಿದ್ದಾರೆ.

ಸಿಜೆಐ ಹುದ್ದೆಯನ್ನೂ ಆರ್‌ಟಿಐ ಕಾಯ್ದೆಯಡಿ ತರುವ ಇತ್ತೀಚಿನ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಯಾವ ಮಾಹಿತಿಯನ್ನು ಬಹಿರಂಗಗೊಳಿಸಬಹುದು ಎಂಬ ಬಗ್ಗೆ ಜಾಗರೂಕತೆಯಿಂದ ನಿರ್ಧರಿಸಬೇಕು ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News