ದೇಶದ ಬ್ಯಾಂಕ್ ಗಳಿಗೆ ಕೋಟ್ಯಾಂತರ ರೂ. ಬಾಕಿ ಇಟ್ಟವರ ಹೆಸರುಗಳು ಆರ್‌ಟಿಐಯಿಂದ ಬಹಿರಂಗ

Update: 2019-11-21 14:58 GMT

ಹೊಸದಿಲ್ಲಿ, ನ.21: ದೇಶದ ಉದ್ದೇಶಪೂರ್ವಕ ಸುಸ್ತಿದಾರರ ಪಟ್ಟಿಯನ್ನು ಬಹಿರಂಗಗೊಳಿಸಬೇಕೆಂಬ ಸುಪ್ರೀಂಕೋರ್ಟ್‌ನ ಸೂಚನೆಯನ್ನು ನಾಲ್ಕು ವರ್ಷದ ಬಳಿಕ ಪಾಲಿಸಿರುವ ರಿಸರ್ವ್ ಬ್ಯಾಂಕ್, 30 ಪ್ರಮುಖ ಉದ್ದೇಶಪೂರ್ವಕ ಸುಸ್ತಿದಾರರ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.

ಉದ್ದೇಶಪೂರ್ವಕ ಸುಸ್ತಿದಾರರ ಮಾಹಿತಿ ಬಹಿರಂಗಗೊಳಿಸಬೇಕೆಂದು 2019ರ ಮೇ ತಿಂಗಳಿನಲ್ಲಿ 'ದಿ ವೈರ್' ಸುದ್ದಿಸಂಸ್ಥೆ ಆರ್‌ಟಿಐ ಕಾಯ್ದೆಯಡಿ ಅರ್ಜಿ ದಾಖಲಿಸಿತ್ತು. ಈ ಉದ್ದೇಶಪೂರ್ವಕ ಸುಸ್ತಿದಾರರ ಒಟ್ಟು ಸಾಲ (ಇದುವರೆಗೆ ಬ್ಯಾಂಕ್‌ಗಳು ರೈಟ್‌ಆಫ್ ಮಾಡಿರುವ ಮೊತ್ತವೂ ಸೇರಿ) 50000 ಕೋಟಿ ರೂ.ಗೂ ಅಧಿಕವಾಗಿದೆ. ವಿಜಯ್ ಮಲ್ಯ, ಮೆಹುಲ್ ಚೋಕ್ಸಿ, ಜತಿನ್ ಮೆಹ್ತಾ ನಿರ್ದೇಶಕರಾಗಿರುವ ಸಂಸ್ಥೆಗಳು ಈ ಪಟ್ಟಿಯಲ್ಲಿವೆ.

ಉದ್ದೇಶಪೂರ್ವಕ ಸುಸ್ತಿದಾರರ ಪಟ್ಟಿಯನ್ನು ಬಿಡುಗಡೆಗೊಳಿಸುವುದು ದೇಶದ ಆರ್ಥಿಕ ಹಿತಾಸಕ್ತಿಗೆ ಮತ್ತು ಬ್ಯಾಂಕ್‌ಗಳೊಂದಿಗೆ ತಾನು ಹೊಂದಿರುವ ವಿಶ್ವಾಸಾರ್ಹ ಸಂಬಂಧಕ್ಕೆ ವಿರುದ್ಧವಾಗಿದೆ ಎಂದು ವಾದಿಸುತ್ತಿದ್ದ ಆರ್‌ಬಿಐ ಕಳೆದ 10 ವರ್ಷಗಳಿಂದಲೂ ಈ ಕುರಿತ ಆರ್‌ಟಿಐ ಅರ್ಜಿಯನ್ನು ಮಾನ್ಯ ಮಾಡುತ್ತಿರಲಿಲ್ಲ.

ಆದರೆ ಸಾಲ ನೀಡಿದ ಬ್ಯಾಂಕ್‌ಗಳು ಸಾಲ ಬಾಕಿ ಇರಿಸಿಕೊಂಡಿರುವ ಸಂಸ್ಥೆಗಳ ವಿರುದ್ಧ ನ್ಯಾಯಾಲಯದಲ್ಲಿ ದಾವೆ ದಾಖಲಿಸುವಾಗ ಸುಸ್ತಿದಾರ ಸಂಸ್ಥೆಗಳ ವಿವರವನ್ನೂ ಸಲ್ಲಿಸುತ್ತವೆ. ಈ ಅಂಕಿಅಂಶವನ್ನು 'ಟ್ರಾನ್ಸ್‌ಯೂನಿಯನ್ ಸಿಬಿಲ್' ಸಂಯೋಜಿಸಿದೆ. ಈ ಪ್ರಕಾರ, 2018ರ ಡಿಸೆಂಬರ್‌ನವರೆಗೆ, 11000ಕ್ಕೂ ಹೆಚ್ಚು ಸಂಸ್ಥೆಗಳು 1.61 ಲಕ್ಷ ಕೋಟಿ ರೂ.ಗೂ ಅಧಿಕ ಮೊತ್ತವನ್ನು ಉದ್ದೇಶಪೂರ್ವಕವಾಗಿ ಪಾವತಿಸದೆ ಬಾಕಿ ಇರಿಸಿಕೊಂಡಿದೆ.

ವಿದೇಶಕ್ಕೆ ಪರಾರಿಯಾಗಿರುವ ವಜ್ರೋದ್ಯಮಿ ಮೆಹುಲ್ ಚೋಕ್ಸಿಗೆ ಸೇರಿರುವ 3 ಸಂಸ್ಥೆಗಳೂ ಈ ಪಟ್ಟಿಯಲ್ಲಿವೆ. ಗೀತಾಂಜಲಿ ಜೆಮ್ಸ್, ರೊಟೊಮ್ಯಾಕ್ ಗ್ಲೋಬಲ್, ಝೂಮ್ ಡೆವಲಪರ್ಸ್, ಡೆಕ್ಕನ್ ಕ್ರೋನಿಕಲ್ ಆ್ಯಂಡ್ ಹೋಲ್ಡಿಂಗ್ಸ್, ವಿನ್ಸಮ್ ಡೈಮಂಡ್ಸ್, ಆರ್‌ಇಐ ಆಗ್ರೊ, ಸಿದ್ಧಿ ವಿನಾಯಕ್ ಲೊಜಿಸ್ಟಿಕ್ಸ್ , ಕುಡೊಸ್ ಕೆಮೀ, ಎಬಿಸಿ ಶಿಪ್‌ಯಾರ್ಡ್, ರುಚಿ ಸೋಯಾ ಇಂಡಸ್ಟ್ರೀಸ್, ಹ್ಯನುಂಗ್ ಟಾಯ್ಸ್ ಆ್ಯಂಡ್ ಟೆಕ್ಸ್‌ಟೈಲ್ಸ್, ಎಸ್ ಕುಮಾರ್ಸ್‌ ನ್ಯಾಷನ್‌ವೈಡ್ , ಕೆಎಸ್ ಆಯಿಲ್ಸ್ ಲಿ. ಮುಂತಾದ ಸಂಸ್ಥೆಗಳು ಈ ಪಟ್ಟಿಯಲ್ಲಿವೆ. ಇನ್ನೂ ಕೆಲವು ಹೆಸರಾಂತ ಸಂಸ್ಥೆಗಳ ಹೆಸರೂ ಈ ಪಟ್ಟಿಯಲ್ಲಿದ್ದು , ಸಂಸ್ಥೆಯ ನಿರ್ದೇಶಕರು ಮಾಡಿರುವ ತಪ್ಪಿನಿಂದ ಈ ಸಂಸ್ಥೆಯ ಹೆಸರು ಪಟ್ಟಿಯಲ್ಲಿದೆಯೇ ಎಂಬ ಬಗ್ಗೆ ಸ್ಪಷ್ಟನೆಯಿಲ್ಲ.

ಆದರೆ ಈ ಸಂಸ್ಥೆಗಳು ಬಾಕಿ ಇರಿಸಿರುವ ಸಾಲದ ಮೊತ್ತ ಅಥವಾ ಈ ಸಂಸ್ಥೆಗಳ ಲೆಕ್ಕಪತ್ರದಲ್ಲಿ ನಮೂದಿಸಲ್ಪಟ್ಟಿರುವ ಅನುತ್ಪಾದಕ ಆಸ್ತಿಯ ವಿವರ ಈ ಪಟ್ಟಿಯಲ್ಲಿಲ್ಲ. ಆರ್‌ಬಿಐನ ಮಾಜಿ ಗವರ್ನರ್ ರಘುರಾಮ್ ರಾಜನ್ ತಮ್ಮ ಕಾರ್ಯಾವಧಿಯಲ್ಲಿ ಪ್ರಧಾನ ಮಂತ್ರಿ ಕಚೇರಿಗೆ ಕೆಲವು ಸಂಸ್ಥೆಗಳ ಪಟ್ಟಿಯನ್ನು ನೀಡಿದ್ದು ಈ ಕಂಪೆನಿಗಳ ಬಗ್ಗೆ ಶೀಘ್ರ ತನಿಖೆ ನಡೆಸುವಂತೆ ಕೋರಿದ್ದರು. ಈ ಪಟ್ಟಿಯಲ್ಲಿರುವ ಸಂಸ್ಥೆಗಳೂ ಆರ್‌ಬಿಐ ಬಿಡುಗಡೆಗೊಳಿಸಿದ ಪಟ್ಟಿಯಲ್ಲಿ ಸೇರಿವೆ.

ಕೇಂದ್ರೀಕೃತ ಬ್ಯಾಂಕಿಂಗ್ ವ್ಯವಸ್ಥೆಯ ಅಂಕಿಅಂಶ ಸಂಚಯ 'ಸಿಆರ್‌ಐಎಲ್‌ಸಿ' ( ಸೆಂಟ್ರಲ್ ರೆಪೊಸಿಟರಿ ಆಫ್ ಇನ್‌ಫಾರ್ಮೇಶನ್ ಆನ್ ಲಾರ್ಜ್ ಕ್ರೆಡಿಟ್ಸ್) ಒದಗಿಸಿರುವ ಅಂಕಿಅಂಶವನ್ನು ಆಧರಿಸಿ ಆರ್‌ಬಿಐ ಸುಸ್ತಿದಾರರ ಪಟ್ಟಿಯನ್ನು ತಯಾರಿಸಿದೆ. 'ಸಿಆರ್‌ಐಎಲ್‌ಸಿ' ತಪ್ಪುದಾರಿಗೆ ಹೋಗುತ್ತಿರುವ ಸಾಲಗಾರರನ್ನು ಗುರುತಿಸಿ, ಅವರು ಬ್ಯಾಂಕ್‌ಗಳಿಗೆ ವಂಚಿಸುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಇಂತವರ ಬಗ್ಗೆ ಮಾಹಿತಿ ಸಂಗ್ರಹಿಸಿ ಅವನ್ನು ಬ್ಯಾಂಕ್‌ಗಳ ಜೊತೆ ಹಂಚಿಕೊಳ್ಳುವ ವ್ಯವಸ್ಥೆಯಾಗಿದೆ.

ಆರ್‌ಬಿಐಯಿಂದ ಮಾಹಿತಿ ಕೋರಿ 2011ರಲ್ಲಿ ಹಲವು ಆರ್‌ಟಿಐ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಇದನ್ನು ಆರ್‌ಬಿಐ ತಳ್ಳಿಹಾಕಿದಾಗ ಆಗಿನ ಕೇಂದ್ರ ಮಾಹಿತಿ ಆಯುಕ್ತ ಶೈಲೇಶ್ ಗಾಂಧಿ, ಆರ್‌ಟಿಐ ಅರ್ಜಿಯನ್ನು ಮಾನ್ಯ ಮಾಡಿ ಮಾಹಿತಿ ನೀಡುವಂತೆ ಆರ್‌ಬಿಐಗೆ ಸೂಚಿಸಿದ್ದರು. ಆದರೆ ಆರ್‌ಬಿಐ ಪ್ರತಿಕ್ರಿಯಿಸಿರಲಿಲ್ಲ. 2015ರ ಡಿಸೆಂಬರ್‌ನಲ್ಲಿ ಶೈಲೇಶ್ ಗಾಂಧಿಯ ಸೂಚನೆಯನ್ನು ಸುಪ್ರೀಂಕೋರ್ಟ್ ಎತ್ತಿಹಿಡಿಯಿತು. ಆದರೂ ಆರ್‌ಬಿಐ ಉತ್ತರಿಸಲಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂಕೋರ್ಟ್, ಆರ್‌ಟಿಐ ಅರ್ಜಿಗೆ ಉತ್ತರಿಸುವುದು ಆರ್‌ಬಿಐ ಕರ್ತವ್ಯ. ಹೀಗೆ ಮಾಡದಿದ್ದರೆ ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಎಚ್ಚರಿಸಿದ ಬಳಿಕ 'ದಿ ವೈರ್' ಸಲ್ಲಿಸಿದ್ದ ಆರ್‌ಟಿಐ ಅರ್ಜಿಗೆ ಉತ್ತರಿಸಿದೆ.

ಆದರೆ ಈ ಉತ್ತರ ಅಸ್ಪಷ್ಟವಾಗಿದೆ ಎಂದು ಅರ್ಜಿದಾರರು ಹೇಳಿದ್ದಾರೆ. ಅತೀ ಹೆಚ್ಚು ಸಾಲ ಪಡೆದ 30 ಸಂಸ್ಥೆಗಳ ಪಟ್ಟಿ, ಪಾವತಿಗೆ ಬಾಕಿ ಇರುವ ಅತೀ ಹೆಚ್ಚು ಸಾಲದ ವಿವರ, ಅನುತ್ಪಾದಕ ಆಸ್ತಿ ವಿಭಾಗದಲ್ಲಿರುವ 30 ಖಾತೆಯ ವಿವರವನ್ನು ಅರ್ಜಿಯಲ್ಲಿ ಕೋರಲಾಗಿದ್ದು ಇದನ್ನು ಒದಗಿಸಿಲ್ಲ ಎಂದು ಅರ್ಜಿದಾರರು ಹೇಳಿದ್ದಾರೆ.

ಅನುತ್ಪಾದಕ ಆಸ್ತಿಯ ಖಾತೆವಾರು ವಿವರ ತನ್ನಲ್ಲಿಲ್ಲ ಎಂದು ಆರ್‌ಬಿಐ ತಿಳಿಸಿದೆ. ಅಗ್ರ 30 ಸಾಲಗಾರರ ವಿವರದ ಬಗ್ಗೆ ಉತ್ತರಿಸಿರುವ ಆರ್‌ಬಿಐ, ಆರ್‌ಬಿಐ ಕಾಯ್ದೆಯ ಸೆಕ್ಷನ್ 45(ಇ)ಯಡಿ ಹೇಳಲಾಗಿರುವ ಕೆಲವು ಪರಿಸ್ಥಿತಿಯನ್ನು ಹೊರತುಪಡಿಸಿ, ಸಾಲದ ಮಾಹಿತಿ ಒದಗಿಸುವುದನ್ನು ನಿರ್ಬಂಧಿಸಲಾಗಿದೆ ಎಂದು ತಿಳಿಸಿದೆ. ಅಲ್ಲದೆ ಜಯಂತಿಲಾಲ್ ಮಿಸ್ತ್ರಿ ತೀರ್ಪಿನ 77ನೇ ಪ್ಯಾರದಲ್ಲಿ, ಇಂತಹ ಮಾಹಿತಿಯ ಸಾರ್ವಜನಿಕ ಬಹಿರಂಗಪಡಿಸುವಿಕೆಯನ್ನು ನಿರ್ಬಂಧಿಸಲಾಗಿದೆ ಎಂದು ಆರ್‌ಬಿಐ ವಿವರಿಸಿದೆ.

ಉದ್ದೇಶಪೂರ್ವಕ ಸುಸ್ತಿದಾರ

ಆರ್‌ಬಿಐ ವ್ಯಾಖ್ಯಾನದ ಪ್ರಕಾರ ಉದ್ದೇಶಪೂರ್ವಕ ಸುಸ್ತಿದಾರನೆಂದರೆ- ಮರುಪಾವತಿಸುವ ಸಾಮರ್ಥ್ಯವಿದ್ದರೂ ಸಾಲ ಪಾವತಿಸುವ ಬಾಧ್ಯತೆಯನ್ನು ಈಡೇರಿಸದ ಸಂಸ್ಥೆ. ಅಲ್ಲದೆ ಸಾಲ ಪಡೆಯುವಾಗ ಸೂಚಿಸಿದ್ದ ಉದ್ದೇಶಕ್ಕೆ ಬಳಸದೆ, ಸಾಲವನ್ನು ಬೇರೆ ಉದ್ದೇಶಕ್ಕೆ ಬಳಸುವ ಸಂಸ್ಥೆಯೂ ಈ ಗುಂಪಿಗೆ ಸೇರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News