ಸರಕಾರ ಶೀಘ್ರವೇ ಪುಸ್ತಕ ನೀತಿ ಜಾರಿಗೊಳಿಸಬೇಕು: ಡಾ.ಸಿದ್ದಲಿಂಗಯ್ಯ

Update: 2019-11-21 18:32 GMT

ಬೆಂಗಳೂರು, ನ.21: ಪುಸ್ತಕೋದ್ಯಮಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ರಾಜ್ಯ ಸರಕಾರವು ಶೀಘ್ರವೇ ಪುಸ್ತಕ ನೀತಿ ಜಾರಿಗೊಳಿಸಬೇಕು ಎಂದು ಕವಿ ಡಾ. ಸಿದ್ದಲಿಂಗಯ್ಯ ಒತ್ತಾಯಿಸಿದರು.

ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷನ್ಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ‘ಅಂಕಿತ ಪುಸ್ತಕ’ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಈ ಹಿಂದೆ ಪುಸ್ತಕ ಪ್ರಾಧಿಕಾರದಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನೇಕರು ರಾಜ್ಯದಲ್ಲಿ ಪುಸ್ತಕೋದ್ಯಮ ಅಭಿವೃದ್ಧಿಗೆ ಸಾಕಷ್ಟು ಶಿಪಾರಸ್ಸುಗಳನ್ನು ಮಾಡಿದ್ದಾರೆ. ಅವುಗಳಲ್ಲಿ ಪ್ರಮುಖವಾಗಿ ಪ್ರಕಾಶಕರಿಗೆ ಸಬ್ಸಿಡಿ ದರದಲ್ಲಿ ಕಾಗದ ಪೂರೈಸಬೇಕು, ಒಂದು ಪುಸ್ತಕದ 500 ಪ್ರತಿಗಳನ್ನಾದರೂ ಗ್ರಂಥಾಲಯ ಇಲಾಖೆ ಖರೀದಿಸಬೇಕು ಎಂಬ ಶಿಫಾರಸ್ಸುಗಳಿವೆ. ಇಂತಹ ಶಿಫಾರಸ್ಸುಗಳನ್ನು ಒಳಗೊಂಡ ಪುಸ್ತಕ ನೀತಿಯನ್ನು ಸರಕಾರ ಶೀಘ್ರ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ತಮಿಳುನಾಡಿನಲ್ಲಿರುವ ಏಷ್ಯಾದ ಅತ್ಯಂತ ದೊಡ್ಡ ಗ್ರಂಥಾಲಯ ಮಾದರಿಯಲ್ಲಿ ರಾಜ್ಯದಲ್ಲಿಯೂ ಗ್ರಂಥಾಲಯ ನಿರ್ಮಿಸಬೇಕು. ಕಲಾಗ್ರಾಮ ಅಥವಾ ಅಗತ್ಯವಾದ ಜಾಗದಲ್ಲಿ ‘ಪುಸ್ತಕ ಉದ್ಯಾನ’ ನಿರ್ಮಿಸಿ ಪ್ರಾರಂಭದಲ್ಲಿ ಪ್ರಕಟವಾದ ಪುಸ್ತಕಗಳಿಂದ ಇಂದಿನವರೆಗೂ ಪ್ರಕಟವಾದ ಎಲ್ಲ ಬಗೆಯ ಪುಸ್ತಕಗಳನ್ನು ಪ್ರದರ್ಶನಕ್ಕಿಡಬೇಕು. ಕವಿ, ಸಾಹಿತಿ, ಲೇಖಕರ ಭಾವಚಿತ್ರ ಸಹಿತ ಪರಿಚಯ ಮಾಡಿಕೊಡುವ ಕಾರ್ಯ ಆಗಬೇಕು. ಇನ್ನು ಕನ್ನಡ ಮತ್ತು ಸಾಹಿತ್ಯದ ವಿಚಾರದಲ್ಲಿ ಸಾಹಿತಿಗಳು ಪ್ರತಿಷ್ಠೆ ಬಿಡಬೇಕು. ಕನ್ನಡ ಸಂಬಂಧಿ ಸಭೆ ಸಮಾರಂಭಗಳಲ್ಲಿ ಹೆಚ್ಚೆಚ್ಚು ಭಾಗವಹಿಸಬೇಕು. ಪ್ರಮುಖವಾಗಿ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯಕ್ರಮ ಎಂದಾಗ ಕರೆಯದಿದ್ದರೂ ಪಾಲ್ಗೊಳ್ಳಬೇಕು ಎಂದರು.

ಮೈಸೂರಿನ ‘ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ’ಯ ಮುಖ್ಯಸ್ಥ ಟಿ.ಎಸ್.ಛಾಯಾಪತಿ ಅವರಿಗೆ ಅತ್ಯುತ್ತಮ ಪ್ರಕಾಶನ ಸಂಸ್ಥೆಗೆ ನೀಡಿ ಗೌರವಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News