ಬೌದ್ಧದಮ್ಮ ಭಾರತ-ಚೀನಾ ನಡುವೆ ಸಂಬಂಧ ಏರ್ಪಡಿಸಿದೆ: ಬೆಂಗಳೂರು ವಿವಿ ಕುಲಪತಿ ವೇಣುಗೋಪಾಲ್

Update: 2019-11-21 18:34 GMT

ಬೆಂಗಳೂರು, ನ. 21: ಭಾರತದ ಬೌದ್ದ ಧರ್ಮ ಇಂದು ಚೀನಾದಲ್ಲಿ ಹೆಚ್ಚ ಪ್ರಚಲಿತವಾಗಿದೆ. ಬೌದ್ದ ಧರ್ಮವು ಭಾರತ ಮತ್ತು ಚೀನಾ ರಾಷ್ಟ್ರಗಳ ನಡುವೆ ಒಂದು ರೀತಿಯ ಮಾನಸಿಕ ಸಂಬಂಧವನ್ನು ಏರ್ಪಡಿಸಿದೆ ಎಂದು ಬೆಂಗಳೂರು ವಿವಿ ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್ ಅಭಿಪ್ರಾಯಪಟ್ಟಿದ್ದಾರೆ.

ಗುರುವಾರ ಬೆಂಗಳೂರು ವಿವಿಯ ಜ್ಞಾನಭಾರತಿ ಆವರಣದಲ್ಲಿ ಯುಜಿಸಿ ಮಾನವಸಂಪನ್ಮೂಲ ಅಭಿವೃದ್ಧಿ ವಿಭಾಗವು ಚೀನಾ ರಾಷ್ಟ್ರದ ಚೆಯುಂಗ್ ಕಾಂಗ್ ಪದವಿ ಕಾಲೇಜಿನ ಪ್ರವಾಸಿ ವಿದ್ಯಾರ್ಥಿಗಳಿಗೆಂದು ಆಯೋಜಿಸಿದ್ದ ಒಂದು ದಿನದ ಶೃಂಗಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಚೀನಾ ಮತ್ತು ಭಾರತ ಜಾಗತಿಕ ಮಟ್ಟದಲ್ಲಿ ದೊಡ್ಡಗಾತ್ರದ ಆರ್ಥಿಕ ವಹಿವಾಟು ನಡೆಸುತ್ತಿರುವ ರಾಷ್ಟ್ರಗಳಾಗಿದ್ದು ಅಭಿವೃದ್ಧಿ ಪಥದಲ್ಲಿ ಎರಡು ರಾಷ್ಟ್ರಗಳು ಒಂದನ್ನೊಂದು ಎಲ್ಲ ಆಯಾಮದಲ್ಲೂ ಸಹಕಾರಿಯಾಗಿ ಸಾಗಬೇಕೆಂದು ಅವರು ಇದೇ ವೇಳೆ ಹೇಳಿದರು.

ವಿಶ್ವಮಟ್ಟದಲ್ಲಿ ಬೆಂಗಳೂರಿನ ಜ್ಞಾನಸಂಪತ್ತು ಮತ್ತು ಶಾಂತ ವಾತವರಣ ಪ್ರಪಂಚದ ವಿವಿಧ ಭಾಗಗಳ ಹೂಡಿಕೆದಾರರನ್ನು, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನದ ಉದ್ದಿಮೆದಾರರನ್ನು ಆಕರ್ಷಿಸುತ್ತಿದೆ ಎಂದು ವೇಣುಗೋಪಾಲ್ ಹೇಳಿದರು.

ಕುಲಸಚಿವ ಪ್ರೊ.ಬಿ.ಕೆ.ರವಿ ಮಾತನಾಡಿ, ಭಾರತ ಮತ್ತು ಚೀನಾ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಸಹೋದರ ರಾಷ್ಟ್ರಗಳಂತೆ. ಅತಿಥಿ ವಿದ್ಯಾರ್ಥಿ ಮತ್ತು ಶಿಕ್ಷಕರಿಗೆ ಬೆಂಗಳೂರು ವಿವಿ ಸಂಶೋಧನ ವಿದ್ಯಾರ್ಥಿಗಳೊಂದಿಗೆ ವಿಷಯ ಚರ್ಚೆ ಮತ್ತು ವಿನಿಮಯ ಮಾಡಿಕೊಳ್ಳುವಂತೆ ಸೂಚಿಸಿದರು.

ಶೃಂಗಸಭೆಯಲ್ಲಿ ರಾಜ್ಯಶಾಸ್ತ್ರದ ಪ್ರಾಧ್ಯಾಪಕ ಪ್ರೊ.ಎಂ.ಜೆ.ವಿನೋದ್, ಅರ್ಥಶಾಸ್ತ್ರ ವಿಭಾಗದ ಪ್ರೊ.ಎಸ್.ಆರ್.ಕೇಶವ, ಕಂಪ್ಯೂಟರ್ ವಿಜ್ಞಾನ ವಿಭಾಗದ ಪ್ರೊ.ಬಿ.ಎಲ್. ಮುರಳಿಧರ ವಿಷಯ ಮಂಡನೆ ಮಾಡಿದರು. ಈ ವೇಳೆ ಚೆಯುಂಗ್ ಕಾಂಗ್ ಪದವಿ ಕಾಲೇಜಿನ ಪ್ರೊ.ಲೀ ಯಾಂಗ ಮತ್ತು ಪ್ರೊ.ವಾಂಗ್ ಚಿಯಾಂಗ್ ಚೆಯುಂಗ್ ಕಾಂಗ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News