ಮಹಾರಾಷ್ಟ್ರ ಬಿಜೆಪಿ ಸರಕಾರ ರಚನೆ ಪ್ರಶ್ನಿಸಿ ರಿಟ್ ಅರ್ಜಿ: ನಾಳೆ ಬೆಳಗ್ಗೆ 10:30ಕ್ಕೆ ತೀರ್ಪು ನೀಡಲಿರುವ ಸುಪ್ರೀಂ

Update: 2019-11-25 17:50 GMT

ಹೊಸದಿಲ್ಲಿ, ನ. 25: ಮಹಾರಾಷ್ಟ್ರದಲ್ಲಿ ಸರಕಾರ ರಚಿಸಲು ದೇವೇಂದ್ರ ಫಡ್ನವೀಸ್ ಅವರಿಗೆ ಆಹ್ವಾನ ನೀಡಿದ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರ ನಿರ್ಧಾರ ಪ್ರಶ್ನಿಸಿ ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಸಂಯುಕ್ತವಾಗಿ ಸಲ್ಲಿಸಿದ್ದ ಮನವಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಇಂದು ಕೂಡ ಮುಂದುವರಿಸಿದ್ದು, ತೀರ್ಪನ್ನು ಮಂಗಳವಾರಕ್ಕೆ ಕಾಯ್ದಿರಿಸಿದೆ.

ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರ ನಿರ್ಧಾರ ಪ್ರಶ್ನಿಸಿ ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು 80 ನಿಮಿಷಗಳ ಕಾಲ ನಡೆಸಿದ ನ್ಯಾಯಮೂರ್ತಿಗಳಾದ ಎನ್.ವಿ. ರಮಣ, ಅಶೋಕ್ ಭೂಷಣ್ ಹಾಗೂ ಸಂಜೀವ್ ಖನ್ನಾ ಅವರನ್ನು ಒಳಗೊಂಡ ತ್ರಿಸದಸ್ಯ ಪೀಠ ತೀರ್ಪನ್ನು ನಾಳೆ ಬೆಳಗ್ಗೆ 11.30ಕ್ಕೆ ಕಾಯ್ದಿರಿಸಿತು.

ಇದಕ್ಕೂ ಮುನ್ನ ಕೇಂದ್ರ ಸರಕಾರ, ಮಹಾರಾಷ್ಟ್ರ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಶಿವಸೇನೆ, ಎನ್‌ಸಿಪಿ ಹಾಗೂ ಕಾಂಗ್ರೆಸ್ ಪರ ವಕೀಲರು ವಾದ ಮಂಡಿಸಿದರು. ಹಿರಿಯ ವಕೀಲ ಕಪಿಲ್ ಸಿಬಲ್ ಕಾಂಗ್ರೆಸ್ ಪರವಾಗಿ, ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ಪಡ್ನವೀಸ್ ಪರವಾಗಿ ವಾದ ಮಂಡಿಸಿದರು. ಅಜಿತ್ ಪವಾರ್ ಪರವಾಗಿ ವಕೀಲ ಮಣೀಂದರ್ ಸಿಂಗ್, ಮಹಾರಾಷ್ಟ್ರ ರಾಜ್ಯಪಾಲರ ಕಾರ್ಯದರ್ಶಿ ಪರವಾಗಿ ತುಷಾರ್ ಮೆಹ್ತಾ ವಾದ ಮಂಡಿಸಿದರು.

ಮಹಾರಾಷ್ಟ್ರದಲ್ಲಿ ಸರಕಾರ ರಚಿಸಲು ಬಿಜೆಪಿಗೆ ಎನ್‌ಸಿಪಿಯ ಎಲ್ಲ 54 ಶಾಸಕರ ಬೆಂಬಲ ಇದೆ ಎಂದು ಕೇಂದ್ರ ಸರಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಅಲ್ಲದೆ, ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರ ನಿರ್ಧಾರ ಪ್ರಶ್ನಿಸಿ ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಸಲ್ಲಿಸಿದ ಮನವಿಗೆ ಪ್ರತಿಕ್ರಿಯೆ ನೀಡಲು ಎರಡರಿಂದ ಮೂರು ದಿನಗಳ ಕಾಲಾವಕಾಶ ನೀಡುವಂತೆ ಕೋರಿತು.

ಶಿವಸೇನೆ ಪರವಾಗಿ ಹಾಜರಾಗಿದ್ದ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್, ನಾವು ಮೂರು ಪಕ್ಷಗಳು ನವೆಂಬರ್ 23ರಂದು ಸರಕಾರ ರಚಿಸಲು ಹಕ್ಕು ಮಂಡಿಸುತ್ತಿದ್ದೆವು. ಆದರೆ, ಮುಂಜಾನೆ 5 ಗಂಟೆಗೆ ರಾಷ್ಟ್ರಪತಿ ಆಳ್ವಿಕೆ ಹಿಂದೆ ತೆಗೆದು ತರಾತುರಿ ಪ್ರಮಾಣವಚನ ಸ್ವೀಕರಿಸುವ ಅಗತ್ಯ ಏನಿತ್ತು ಎಂದು ಪ್ರಶ್ನಿಸಿದ್ದಾರೆ.

54 ಶಾಸಕರ ಬೆಂಬಲ ಇದೆ ಎಂದು ಹೇಳುವ ಅಜಿತ್ ಪವಾರ್ ಅವರನ್ನು ಪಕ್ಷದಿಂದ ವಜಾಗೊಳಿಸಲಾಗಿದೆ. ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಮೈತ್ರಿ ಕೂಟದಲ್ಲಿ ಒಟ್ಟು 154 ಶಾಸಕರಿದ್ದಾರೆ ಎಂದು ಅವರು ಹೇಳಿದರು.

ದೇವೇಂದ್ರ ಫಡ್ನವೀಸ್ ಹಾಗೂ ಬಿಜೆಪಿ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಮುಕುಲ್ ರೋಹ್ಟಗಿ, “ಒಬ್ಬ ಪವಾರ್ ನಮ್ಮ ಜೊತೆಗಿದ್ದಾರೆ, ಇನ್ನೊಬ್ಬ ಪವಾರ್ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಇದು ಅವರ ಕೌಟುಂಬಿಕ ಕಲಹ ಅಲ್ಲದೆ ಬೇರೇನು ? ಕುದುರೆ ವ್ಯಾಪಾರದಲ್ಲಿ ತೊಡಗಿದ್ದು ನಾವಲ್ಲ, ಅವರು” ಎಂದು ಹೇಳಿದರು. ರಾಜ್ಯಪಾಲರ ಕ್ರಮ ಸರಿಯಾಗಿದೆ. ಬಹುಮತ ಸಾಬೀತಿಗೆ ಕಾಲಾವಕಾಶ ನೀಡುವುದು ರಾಜ್ಯಪಾಲರಿಗೆ ಬಿಟ್ಟ ವಿಚಾರ. ಇದು ಸುಪ್ರೀಂ ಕೋರ್ಟ್ ವ್ಯಾಪ್ತಿಗೆ ಬರುವುದಿಲ್ಲ. ಅದನ್ನು ನಡೆಸುವ ವಿಶೇಷಾಧಿಕಾರ ಇರುವುದು ಸ್ಪೀಕರ್ ಅವರಿಗೆ ಮಾತ್ರ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News