ಎರಡು ಕೋಟಿ ಯುವಕರಿಗೆ ಕೌಶಲ್ಯ ತರಬೇತಿ ಗುರಿ: ಸಚಿವ ಜಗದೀಶ್ ಶೆಟ್ಟರ್

Update: 2019-11-26 17:36 GMT

ಬೆಂಗಳೂರು, ನ.26: ಕರ್ನಾಟಕದಲ್ಲಿ ಮುಂದಿನ 11 ವರ್ಷಗಳ ಅವಧಿಯಲ್ಲಿ ಎರಡು ಕೋಟಿ ಯುವಕರಿಗೆ ಕೌಶಲ್ಯಾಭಿವೃದ್ಧಿ ತರಬೇತಿಯ ಮೂಲಕ ಕೌಶಲ್ಯವಂತರನ್ನಾಗಿ ರೂಪಿಸುವ ಗುರಿಯನ್ನಿಟ್ಟುಕೊಳ್ಳಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.

ಮಂಗಳವಾರ ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿರುವ ಮೂರು ದಿನಗಳ ಕಾಲ ಅಂತರ್‌ರಾಷ್ಟ್ರೀಯ ಸೇವಾ ಕ್ಷೇತ್ರದ ವಸ್ತು ಪ್ರದರ್ಶನ(ಜಿಐಎಸ್)ಗಳ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ರಾಜ್ಯ ಸರಕಾರವು ಕೌಶಲ್ಯಾಧಾರಿತ ತರಬೇತಿಗಳಿಗೆ ಬೆಂಬಲ ನೀಡಲು ಸದಾಕಾಲವೂ ಸಿದ್ಧವಿದೆ. ಇದಕ್ಕೆ ಅಗತ್ಯವಾದ ಮೂಲಸೌಕರ್ಯಗಳನ್ನು ಸರಕಾರ ನೀಡುತ್ತಿದೆ. ನಮ್ಮಲ್ಲಿಂದು 1700 ಕ್ಕೂ ಅಧಿಕ ಐಟಿಐಗಳು ಮತ್ತು 290 ಪಾಲಿಟೆಕ್ನಿಕ್‌ಗಳು ಯುವಕರಿಗೆ ಕೌಶಲ್ಯ ತರಬೇತಿಯನ್ನು ನೀಡುತ್ತಿವೆ ಎಂದು ಮಾಹಿತಿ ನೀಡಿದರು.

ಏರೋಸ್ಪೇಸ್, ಕೃಷಿ, ವ್ಯಾಪಾರ, ಬಯೋಟೆಕ್, ಮೂಲಸೌಕರ್ಯ, ಮಾಹಿತಿ ತಂತ್ರಜ್ಞಾನ ಮತ್ತು ಸ್ಟಾರ್ಟಪ್ ಕಂಪನಿಗಳ ಉನ್ನತಿಗೆ ಪೂರಕವಾದ ನೀತಿಗಳನ್ನು ಪ್ರಕಟಿಸುವ ಮೂಲಕ ಕೈಗಾರಿಕೀಕರಣದ ಪ್ರತಿಯಲ್ಲಿ ಸೇವಾ ವಲಯ ಪ್ರಮುಖ ಪಾತ್ರವಹಿಸಿದ್ದು, ಈ ನಿಟ್ಟಿನಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವ ರಾಜ್ಯವಾಗಿದೆ ಎಂದರು.

ಹಲವಾರು ವೈದ್ಯಕೀಯ ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಕರ್ನಾಟಕ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ನಾಯಕನ ಸ್ಥಾನದಲ್ಲಿ ನಿಂತಿದೆ. ಬೆಂಗಳೂರು ವೈದ್ಯಕೀಯ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿರುವ ನಗರವಾಗಿದೆ. ಇಲ್ಲಿ ಹಲವಾರು ಸುಸಜ್ಜಿತವಾದ ಖಾಸಗಿ ಆಸ್ಪತ್ರೆಗಳು ಮತ್ತು ನುರಿತ ವೈದ್ಯರ ತಂಡಗಳಿವೆ. ಈ ಮೂಲಕ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಹೆಸರನ್ನು ಗಳಿಸಿವೆ ಎಂದು ನುಡಿದರು.

ಕೇಂದ್ರ ಹಾಗೂ ರಾಜ್ಯ ಸರಕಾರದ ಜಂಟಿಯಾಗಿ ಜಾರಿಗೊಳಿಸಿರುವ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯು ಅಭೂತಪೂರ್ವ ಯಶಸ್ವಿಯಾಗಿದ್ದು, ಇದರಿಂದ ಅಸಂಖ್ಯಾತ ಜನರಿಗೆ ಪ್ರಯೋಜನವಾಗುತ್ತಿದೆ ಎಂದು ಜಗದೀಶ್ ಶೆಟ್ಟರ್ ಹೇಳಿದರು.

ಎನ್‌ಎಲ್‌ಎಸ್‌ಐಯು, ಐಐಎಸ್‌ಸಿ, ಐಐಎಂ ಮತ್ತು ಐಐಟಿಯಂತಹ ಖ್ಯಾತ ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಕರ್ನಾಟಕ ಅಸಂಖ್ಯಾತ ಪ್ರತಿಭಾನ್ವಿತ ವಿಮಾನಶಕ್ತಿಯನ್ನು ಸೃಷ್ಟಿ ಮಾಡುತ್ತಿದೆ. ಶೇ.26 ಕ್ಕಿಂತಲೂ ಅಧಿಕ ಅಂತರ್‌ರಾಷ್ಟ್ರೀಯ ವಿದ್ಯಾರ್ಥಿಗಳು ಭಾರತಕ್ಕೆ ಬರುತ್ತಿದ್ದು, ವಿಶೇಷವಾಗಿ ಕರ್ನಾಟಕವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ಜಯಭಾಸ್ಕರ್ ಮಾತನಾಡಿ, ಕರ್ನಾಟಕದಲ್ಲಿನ ಸೇವಾ ಕ್ಷೇತ್ರವು ರಾಜ್ಯದ ಜಿಎಸ್‌ಡಿಪಿಗೆ ಶೇ.68 ಕ್ಕಿಂತಲೂ ಅಧಿಕ ಕೊಡುಗೆ ನೀಡುತ್ತಿದೆ. ಕರ್ನಾಟಕದ ಆರ್ಥಿಕ ಸಮೀಕ್ಷೆ ಪ್ರಕಾರ 2018-19 ನೇ ಹಣಕಾಸು ಸಾಲಿನಲ್ಲಿ ಸೇವಾ ಕ್ಷೇತ್ರವು ಶೇ.12.3 ರಷ್ಟು ಪ್ರಗತಿ ಕಾಣಲಿದೆ ಎಂದು ಹೇಳಿದರು.

ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ ಮಾತನಾಡಿ, ರಾಜ್ಯದ ಒಟ್ಟು ದೇಸೀಯ ಉತ್ಪನ್ನಕ್ಕೆ ಶೇ.68 ರಷ್ಟು ಕೊಡುಗೆ ನೀಡುತ್ತಿರುವ ಸೇವಾ ವಲಯವು ಭಾರತದ ಸೇವಾ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಇಲ್ಲಿ ಅಧಿಕ ಮಾನವ ಸಂಪನ್ಮೂಲವಿದ್ದು, ಈ ಮೂಲಕ ದೇಶದಲ್ಲಿ ಕಾರ್ಮಿಕ ಉತ್ಪಾದಕತೆಯಲ್ಲಿ ಎರಡನೇ ಸ್ಥಾನವನ್ನು ಪಡೆದಿದೆ ಎಂದು ಹೇಳಿದರು.

ಆಯುಷ್ ಪ್ರವಾಸೋದ್ಯಮ, ನಾಗರಿಕ ವಿಮಾನಯಾನ, ವಸತಿ ಮತ್ತು ನಗರ ವ್ಯವಹಾರಗಳು, ದೂರಸಂಪರ್ಕ ಇಲಾಖೆಗಳು ಇದರಲ್ಲಿ ಭಾಗಿಯಾಗಿವೆ. ಕರ್ನಾಟಕ, ಉತ್ತರಾಖಂಡ, ಉತ್ತರ ಪ್ರದೇಶ, ಮಹಾರಾಷ್ಟ್ರ, ಕೇರಳ, ತೆಲಂಗಾಣ, ಗುಜರಾತ್ ಸೇರಿದಂತೆ ಮತ್ತಿತರೆ ರಾಜ್ಯಗಳು ತಮ್ಮ ಸೇವಾ ವಲಯಕ್ಕೆ ಸಂಬಂಧಿಸಿದ ಪ್ರಾತ್ಯಕ್ಷಿಕೆಗಳನ್ನು ಇಲ್ಲಿ ನೀಡುತ್ತಿವೆ. ದೇಶದ 300 ಕ್ಕೂ ಹೆಚ್ಚು ಖರೀದಿದಾರರು, 55 ದೇಶಗಳ ಪ್ರತಿನಿಧಿಗಳು, 80 ಉಪನ್ಯಾಸಕರು ಸೇರಿದಂತೆ ದೇಶ ದೇಶಗಳ ಗಣ್ಯರು ಪಾಲ್ಗೊಳ್ಳುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News