ಸುಪ್ರೀಂ ಕೋರ್ಟ್‌ನ ಸ್ವಾಗತಾರ್ಹ ಆದೇಶ

Update: 2019-11-27 05:18 GMT

ಮಹಾರಾಷ್ಟ್ರ ವಿಧಾನ ಸಭೆಯಲ್ಲಿ 24 ತಾಸುಗಳಲ್ಲಿ ಬಹುಮತ ಸಾಬೀತು ಪಡಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಇದರಿಂದ ಕುದುರೆ ವ್ಯಾಪಾರಕ್ಕೆ ಹೆಚ್ಚು ಕಾಲಾವಕಾಶ ಪಡೆದು ಸರಕಾರ ರಚಿಸಲು ಹೊರಟಿದ್ದ ಬಿಜೆಪಿ ಗೆಮುಖ ಭಂಗವಾಗಿದೆಯೆಂದರೆ ಅತಿಶಯೋಕ್ತಿಯಲ್ಲ. ಸುಪ್ರೀಂ ಕೋರ್ಟ್ ಈ ಆದೇಶ ನೀಡಿದ ಕೂಡಲೇ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಉಪ ಮುಖ್ಯಮಂತ್ರಿಯಾಗಿದ್ದ ಅಜಿತ್ ಪವಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಕೇಂದ್ರದಲ್ಲಿರುವ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಪ್ರತಿಪಕ್ಷಗಳನ್ನೆಲ್ಲ ನಿರ್ನಾಮ ಮಾಡಲು ಹೊರಟಿದ್ದ ಕೋಮುವಾದಿ ಫ್ಯಾಶಿಸ್ಟ್ ಪಕ್ಷ ಸುಪ್ರೀಂ ಕೋರ್ಟಿನ ಈ ಆದೇಶದಿಂದ ದಿಗಿಲುಗೊಂಡಿದೆ. ಆಧುನಿಕ ಚಾಣಕ್ಯನ ಲೆಕ್ಕಾಚಾರವೂ ತಲೆಕೆಳಗಾಗಿದೆ

ಇತ್ತೀಚೆಗೆ ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಬಂದಿರಲಿಲ್ಲ. ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡ ಬಿಜೆಪಿ ಮತ್ತು ಶಿವಸೇನೆಗಳ ನಡುವೆ ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ಚುನಾವಣಾ ಫಲಿತಾಂಶದ ನಂತರ ವೈಮನಸ್ಸು ಉಂಟಾಯಿತು. 56 ಸ್ಥಾನಗಳನ್ನು ಗೆದ್ದಿದ್ದ ಶಿವಸೇನೆ ಮುಖ್ಯಮಂತ್ರಿ ಸ್ಥಾನಕ್ಕಾಗಿ ಪಟ್ಟು ಹಿಡಿಯಿತು. ಸಂಖ್ಯಾಬಲದ ದೃಷ್ಟಿಯಿಂದ ಶಿವಸೇನೆಯ ವಾದವನ್ನು ಬಿಜೆಪಿ ತಿರಸ್ಕರಿಸಿರಬಹುದು. ಆದರೆ ಮಣಿಪುರ ಮತ್ತು ಗೋವಾಗಳಲ್ಲಿ ಅತಿ ದೊಡ್ಡ ಪಕ್ಷವನ್ನು ಕಡೆಗಣಿಸಿ ಅಧಿಕಾರ ಕಬಳಿಸಿದ ಹಾಗೂ ಕರ್ನಾಟಕದಲ್ಲಿ ಜಾತ್ಯತೀತ ಜನತಾದಳ ಮತ್ತು ಕಾಂಗ್ರೆಸ್ ಮೈತ್ರಿ ಸರಕಾರದ ಭಾಗವಾಗಿದ್ದ ಶಾಸಕರಿಂದ ರಾಜೀನಾಮೆ ಕೊಡಿಸಿ ಅಧಿಕಾರ ಸ್ವಾಧೀನ ಪಡಿಸಿಕೊಂಡ ಬಿಜೆಪಿಗೆ ಶಿವಸೇನೆಯ ಬೇಡಿಕೆಯನ್ನು ತಳ್ಳಿ ಹಾಕುವ ನೈತಿಕತೆ ಖಂಡಿತ ಇರಲಿಲ್ಲ .

 ಈ ನಡುವೆ ಶರದ್ ಪವಾರ್‌ರ ರಾಷ್ಟ್ರವಾದಿ ಕಾಂಗ್ರೆಸ್ (ಎನ್‌ಸಿಪಿ) ಮತ್ತು ಕಾಂಗ್ರೆಸ್ ಬೆಂಬಲದೊಂದಿಗೆ ಸರಕಾರ ರಚನೆಗೆ ಶಿವಸೇನೆ ಮುಂದಾಗಿತ್ತು. ಶುಕ್ರವಾರ ರಾತ್ರಿಯ ವೇಳೆಗೆ ಸರಕಾರ ರಚನೆಗೆ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿದ್ದವು.ಆದರೆ ರಾತ್ರೋರಾತ್ರಿ ಎಲ್ಲ ಉಲ್ಟಾ ಆಯಿತು. ಶನಿವಾರ ಮುಂಜಾನೆ ಬಿಜೆಪಿಯ ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗಿ, ಎನ್‌ಸಿಪಿಯ ಅಜಿತ್ ಪವಾರ್‌ಉಪ ಮುಖ್ಯಮಂತ್ರಿಯಾಗಿ ಅಧಿಕಾರದ ಪ್ರಮಾಣ ವಚನ ಸ್ವೀಕರಿಸಿದರು.ರಾಜ್ಯದ ಮೇಲೆ ಹೇರಲಾಗಿದ್ದ ರಾಷ್ಟ್ರಪತಿ ಆಡಳಿತವನ್ನು ಅದಕ್ಕೂ ಮೊದಲು ಅಂದರೆ ಬೆಳಗಿನ ಜಾವ 5:47ಕ್ಕೆ ಹಿಂದೆಗೆದುಕೊಳ್ಳಲಾಯಿತು. ಇದು ಎಷ್ಟು ತರಾತುರಿಯಲ್ಲಿ ನಡೆಯಿತೆಂದರೆ ಕೇಂದ್ರ ಸಚಿವ ಸಂಪುಟದ ಶಿಫಾರಸು ಕೂಡ ಇರಲಿಲ್ಲ. ತುರ್ತು ಸಂದರ್ಭದಲ್ಲಿ ಸಚಿವ ಸಂಪುಟದ ಗಮನಕ್ಕೆ ತಾರದೆ ಇಂಥ ಕ್ರಮ ಕೈಗೊಳ್ಳುವ ಅವಕಾಶವೇನೋ ಪ್ರಧಾನಿಗೆ ಇದೆ. ಆದರೆ ಬಹುಮತವಿಲ್ಲದೇ ಎನ್‌ಸಿಪಿಯನ್ನು ಒಡೆದು ತಮ್ಮ ಪಕ್ಷದ ಸರಕಾರ ರಚನೆ ಮಾಡುವ ತುರ್ತು ಅಗತ್ಯ ಪ್ರಧಾನಿಗಿತ್ತೇ? ಇದು ಜನತಂತ್ರ ವಿರೋಧಿ ಕ್ರಮವಲ್ಲವೇ?

ಬಿಜೆಪಿಯ ಸರಕಾರ ರಚನೆಯ ಈ ಅನೈತಿಕ ಕಸರತ್ತಿನ ಬಗ್ಗೆ ಶಿವಸೇನೆ, ಕಾಂಗ್ರೆಸ್ ಹಾಗೂ ಎನ್‌ಸಿಪಿಗಳು ಸುಪ್ರೀಂ ಕೋರ್ಟ್‌ಗೆ ಮೊರೆ ಹೋದವು. ಆಗ ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶ ಮಾಡಿ ಬಿಜೆಪಿಗೆ ಬೆಂಬಲ ಸೂಚಿಸಿ ಎನ್‌ಸಿಪಿ ರಾಜ್ಯಪಾಲರಿಗೆ ಸಲ್ಲಿಸಿದ ಪತ್ರ ಹಾಗೂ ರಾಜ್ಯಪಾಲರು ನೀಡಿದ ಸರಕಾರ ರಚನೆಯ ಆಹ್ವಾನ ಪತ್ರವನ್ನು ಕೋರ್ಟ್‌ಗೆ ಸಲ್ಲಿಸಬೇಕೆಂದು ಆದೇಶ ನೀಡಿತು. ಎನ್‌ಸಿಪಿಯ ಶಾಸಕಾಂಗ ಪಕ್ಷದ ನಾಯಕರಾಗಿದ್ದ ಅಜಿತ್ ಪವಾರ್ ಪಕ್ಷದೊಳಗೆ ಆಂತರಿಕವಾಗಿ ಚರ್ಚಿಸದೆ ಏಕಪಕ್ಷೀಯವಾಗಿ ಬೆಂಬಲದ ಈ ಪತ್ರ ನೀಡಿದ್ದರು ಎಂದು ಎನ್‌ಸಿಪಿ ಆರೋಪಿಸಿತು. ಈ ಬೆಂಬಲದ ಪತ್ರಕ್ಕೆ ಪ್ರತಿಯಾಗಿ ಅಜಿತ್ ಪವಾರ್ ಮೇಲಿನ ಎಪ್ಪತ್ತು ಸಾವಿರ ಕೋಟಿ ರೂಪಾಯಿಗಳ ನೀರಾವರಿ ಹಾಗೂ ಸಹಕಾರಿ ಬ್ಯಾಂಕುಗಳ ಹಗರಣದ ಪ್ರಕರಣವನ್ನು ವಾಪಸು ಪಡೆದು ಫಡ್ನವೀಸ್ ನಡುರಾತ್ರಿ ಆದೇಶವನ್ನೂ ಮಾಡಿದರು. ಇದಕ್ಕಿಂತ ರಾಜಕೀಯ ಅನೈತಿಕತೆ ಇನ್ನೊಂದಿಲ್ಲ. ಸದಾ ಚಾರಿತ್ರ್ಯ ನಿರ್ಮಾಣದ ಪಾಠ ಮಾಡುವ ಆರೆಸ್ಸೆಸ್‌ನಿಂದ ಬಂದ ಫಡ್ನವೀಸ್ ತಾನು ಮುಖ್ಯ ಮಂತ್ರಿಯಾಗಲು ಇಂಥ ಅಸಹ್ಯತನಕ್ಕೆ ಮುಂದಾದರು.

ಆದರೆ ವಾಸ್ತವವಾಗಿ ಎನ್‌ಸಿಪಿ ಶಾಸಕರಾರೂ ಅಜಿತ್ ಪವಾರ್ ಜೊತೆಗೆ ಹೋಗಿಲ್ಲ. ಆತ ತಾನು ಕೋಟ್ಯಂತರ ರೂಪಾಯಿಗಳ ಹಗರಣದಿಂದ ಬಚಾವ್ ಆಗಲು ಇಂಥ ಪತ್ರ ಕೊಟ್ಟು ಮುಖಭಂಗಕ್ಕೀಡಾದರು. ಏತನ್ಮಧ್ಯೆ ಶಿವಸೇನೆ, ಕಾಂಗ್ರೆಸ್ ಮತ್ತು ಎನ್‌ಸಿಪಿಯ 162 ಶಾಸಕರು ಸೋಮವಾರ ರಾಜ ಭವನದಲ್ಲಿ ಪರೇಡ್ ಮಾಡಿ ಬಹುಮತದ ಬಲ ತೋರಿಸಿದರು.

ಬಿಜೆಪಿಯ ಲೆಕ್ಕಾಚಾರ ಬೇರೆಯೇ ಆಗಿತ್ತು. ಅಜಿತ್ ಪವಾರ್‌ರನ್ನು ಬುಟ್ಟಿಗೆ ಹಾಕಿಕೊಂಡು ಬಹುಮತ ಸಾಬೀತು ಪಡಿಸಲು ಕಾಲಾವಕಾಶ ಪಡೆದು ಎನ್‌ಸಿಪಿ, ಶಿವಸೇನೆ ಹಾಗೂ ಕಾಂಗ್ರೆಸ್ ಶಾಸಕರ ಖರೀದಿಗೆ ಬಲೆ ಹೆಣೆದಿತ್ತು. ಆದರೆ ಸುಪ್ರೀಂ ಕೋರ್ಟ್ ಅದಕ್ಕೆ ಅವಕಾಶ ನೀಡಲಿಲ್ಲ. ಬುಧವಾರ ಸಂಜೆ 5:30 ರೊಳಗೆ ಸದನದಲ್ಲಿ ಬಹುಮತ ಸಾಬೀತು ಪಡಿಸಲು ಆದೇಶಿಸಿತು. ಇದರಿಂದ ಜನತಾಂತ್ರಿಕ ಮೌಲ್ಯಗಳಿಗೆ ಎದುರಾಗಿದ್ದ ಬಹುದೊಡ್ಡ ಗಂಡಾಂತರವೊಂದು ತಪ್ಪಿದಂತಾಗಿದೆ.
ಸುಪ್ರೀಂ ಕೋರ್ಟ್ ನ ಈ ತೀರ್ಪು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಕೊಳ್ಳಿ ಇಡಲು ಹೊರಟವರಿಗೆ ಎಚ್ಚರಿಕೆಯ ಗಂಟೆಯಾಗಿದೆ. ಕಣ್ಣೆದುರೇ ಜನತಾಂತ್ರಿಕ ತತ್ವಗಳು ಸಮಾಧಿಯಾಗುವುದನ್ನು ಸಹಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಈ ಆದೇಶದ ಮೂಲಕ ಸೂಚ್ಯವಾಗಿ ತಿಳಿಸಿದೆ.

ಮಹಾರಾಷ್ಟ್ರ ದಲ್ಲಿ ಅಕ್ರಮವಾಗಿ ರಾಜ್ಯಾಧಿಕಾರ ಹೈಜಾಕ್ ಮಾಡಿದ್ದ ಬಿಜೆಪಿಯ ಫಡ್ನವೀಸ್ ಮತ್ತು ಎನ್‌ಸಿಪಿಯ ಅಜಿತ್ ಪವಾರ್ ಮಂಗಳವಾರ ರಾಜೀನಾಮೆ ಸಲ್ಲಿಸುವ ಮೂಲಕ ತೀವ್ರ ಅಪಹಾಸ್ಯಕ್ಕೆ ಈಡಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News