ಉಪ ಚುನಾವಣಾ ಕರ್ತವ್ಯ ನಿರತ ಆರು ಅಧಿಕಾರಿ/ಸಿಬ್ಬಂದಿಯ ಅಮಾನತು

Update: 2021-03-12 12:29 GMT

ಬೆಂಗಳೂರು, ನ.27: ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಚೆಕ್ ಪೋಸ್ಟ್ ಗಳಲ್ಲಿ ಚುನಾವಣಾ ಕರ್ತವ್ಯ ನಿರತ ಅಧಿಕಾರಿ/ಸಿಬ್ಬಂದಿಯ ಪೈಕಿ ಆರು ಮಂದಿಯನ್ನು ಮಾದರಿ ನೀತಿಸಂಹಿತೆ ಉಲ್ಲಂಘನೆಯ ಕಾರಣಕ್ಕೆ ಅಮಾನತುಗೊಳಿಸಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ.

ಚುನಾವಣಾ ಕರ್ತವ್ಯ ನಿರತ ಅಧಿಕಾರಿ/ಸಿಬ್ಬಂದಿಯ ಕರ್ತವ್ಯಲೋಪದ ಕುರಿತು ಸುದ್ದಿ ಮಾಧ್ಯಮದ ವರದಿಯನ್ನು ಗಂಭೀರವಾಗಿ ಪರಿಗಣಿಸಿ,  ವಿಚಾರಣೆಯ  ನಡೆಸಿ ಈ ಕ್ರಮ ಕೈಗೊಳ್ಳಲಾಗಿದೆ.

ನಗರದ ವಿವಿಧ ಚೆಕ್ ಪೋಸ್ಟ್ ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದ ಟಿ.ಸಿ.ಪಾಳ್ಯ ಚೆಕ್ ಪೋಸ್ಟ್ ನಲ್ಲಿ ಒಬ್ಬರು, ಯಶವಂತಪುರದ ಮಾಗಡಿ ನೈಸ್ ರಸ್ತೆಯ ದೊಡ್ಡ ಗೊಲ್ಲರಹಟ್ಟಿ ಚೆಲ್ ಪೋಸ್ಟ್ ನಲ್ಲಿ ಒಬ್ಬರು, ತಾವರಕೆರೆ ಚೆಕ್ ಪೋಸ್ಟ್ ಒಬ್ಬರು ಮತ್ತು ಶಿವಾಜಿ ನಗರದ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಹಲಸೂರು ಚೆಕ್ ಪೋಸ್ಟ್ ನಲ್ಲಿ ಇಬ್ಬರು ಸೇರಿ ಒಟ್ಟು 6 ಅಧಿಕಾರಿ/ಸಿಬ್ಬಂದಿಗಳನ್ನು ಅಮಾನತ್ತುಗೊಳಿಸಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ.

ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಚುನಾವಣಾ ಆಯೋಗ ತಕ್ಷಣದಿಂದ ಹಿರಿಯ ಐಎಎಸ್ ಅಧಿಕಾರಿ ಮೊನಿಷ್‌ ಮುದುಗಲ್‌ ಅವರನ್ನು ಉಪ ಚುನಾವಣೆ ನಡೆಯುತ್ತಿರುವ 15 ವಿಧಾನಸಭಾ ಕ್ಷೇತ್ರಗಳ ಚೆಕ್ ಪೋಸ್ಟ್ ಗಳ ಮೇಲ್ವಿಚಾರಣಾಧಿಕಾರಿಯಾಗಿ ನೇಮಿಸಿ ಆದೇಶ ಹೊರಡಿಸಿದೆ. ಪ್ರತಿ ಚೆಕ್ ಪೋಸ್ಟ್ ಗಳಲ್ಲಿ ಸಿಸಿಟಿವಿ ವೆಬ್  ಕಾಸ್ಟಿಂಗ್ ತಂತ್ರಜ್ಞಾನದ‌ ಮೇಲ್ವಿಚಾರಣೆ ಕೇಂದ್ರಗಳನ್ನು ಆರಂಭಿಸಿದೆ. ಇದರಿಂದ ಹಿರಿಯ ಅಧಿಕಾರಿಗಳು ಚೆಕ್ ಪೋಸ್ಟ್ ಗಳ ವೀಡಿಯೋಗಳನ್ನು  ನೇರಪ್ರಸಾರದಲ್ಲಿ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News