ಕಾರ್ಟೊಸ್ಯಾಟ್ -3, ಇತರ 13 ನ್ಯಾನೊ ಉಪಗ್ರಹಗಳ ಉಡಾವಣೆ

Update: 2019-11-27 16:37 GMT

ಶ್ರೀಹರಿಕೋಟಾ, ನ.27: ಇಸ್ರೋ ಬುಧವಾರ ತನ್ನ ಅತ್ಯಂತ ಸಂಕೀರ್ಣ ಮತ್ತು ಅತ್ಯಾಧುನಿಕ ಭೂ ಚಿತ್ರಣ ಉಪಗ್ರಹ ಕಾರ್ಟೊಸ್ಯಾಟ್-3 ಅನ್ನು ಯಶಸ್ವಿಯಾಗಿ ಉಡಾವಣೆಗೊಳಿಸಿತು. ಮಿಲಿಟರಿ ಉದ್ದೇಶಗಳಿಗಾಗಿಯೂ ಈ ಉಪಗ್ರಹ ಬಳಕೆಯಾಗಲಿದೆ.

ಕಾರ್ಟೊಸ್ಯಾಟ್-3 ಮೂರನೇ ಪೀಳಿಗೆಯ ಚುರುಕುಮತಿಯ ಅತ್ಯಾಧುನಿಕ ಉಪಗ್ರಹವಾಗಿದ್ದು ಅತ್ಯಂತ ಸ್ಪಷ್ಟ ಚಿತ್ರಣದ ಸಾಮರ್ಥ್ಯವನ್ನು ಹೊಂದಿದೆ. ಉಪಗ್ರಹದ ಯಶಸ್ವಿ ಉಡಾವಣೆಯನ್ನು ‘ಅದ್ಭುತ’ಎಂದು ಇಸ್ರೋ ಮುಖ್ಯಸ್ಥ ಕೆ.ಶಿವನ್ ಬಣ್ಣಿಸಿದರು.

ಇಲ್ಲಿಯ ಉಪಗ್ರಹ ಉಡಾವಣಾ ಕೇಂದ್ರದಿಂದ ಬೆಳಿಗ್ಗೆ 9:28ಕ್ಕೆ ಮೋಡಗಳು ಕವಿದಿದ್ದ ವಾತಾವರಣದಲ್ಲಿ ರಾಜಗಾಂಭೀರ್ಯದಿಂದ ನಭಕ್ಕೇರಿದ 44 ಮೀ.ಎತ್ತರದ ಪಿಎಸ್‌ಎಲ್‌ವಿ ಸಿ47 ರಾಕೆಟ್ ಕಾರ್ಟೊಸ್ಯಾಟ್-3 ಮತ್ತು ಅಮೆರಿಕದ 13 ನ್ಯಾನೊ ಉಪಗ್ರಹಗಳನ್ನು 509 ಕಿ.ಮೀ.ಎತ್ತರದ ಕಕ್ಷೆಗೆ ಯಶಸ್ವಿಯಾಗಿ ಸೇರಿಸಿತು.

ಈ ಯಶಸ್ಸಿಗಾಗಿ ಇಸ್ರೋ ವಿಜ್ಞಾನಿಗಳನ್ನು ಪ್ರಶಂಸಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು,ಇಸ್ರೋ ಮತ್ತೊಮ್ಮೆ ಭಾರತಕ್ಕೆ ಹೆಮ್ಮೆಯನ್ನುಂಟು ಮಾಡಿದೆ ಎಂದು ಟ್ವೀಟಿಸಿದ್ದಾರೆ.

ರಾಕೆಟ್ ಉಡಾವಣೆಗೊಂಡ 17 ನಿಮಿಷ ಮತ್ತು 46 ಸೆಕೆಂಡ್‌ಗಳಲ್ಲಿ ಕಾರ್ಟೊಸ್ಯಾಟ್-3ನ್ನು ಮತ್ತು 26 ನಿಮಿಷ 56 ಸೆಕೆಂಡ್‌ಗಳಲ್ಲಿ ಅಮೆರಿಕದ 13 ಪುಟಾಣಿ ಉಪಗ್ರಹಗಳನ್ನು ನಿಗದಿತ ಕಕ್ಷೆಗಳಿಗೆ ಸೇರಿಸಿತು. ಇದಾದ ಬಳಿಕ ಬೆಂಗಳೂರಿನಲ್ಲಿರುವ ಇಸ್ರೋದ ಟೆಲಿಮೆಟ್ರಿ ಟ್ರಾಕಿಂಗ್ ಆ್ಯಂಡ್ ಕಮಾಂಡ್ ನೆಟ್‌ವರ್ಕ್ ಉಪಗ್ರಹವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತು.

ಮಾರ್ಚ್ 2020ರವರೆಗೆ ಇಸ್ರೋ ಆರು ಉಪಗ್ರಹಗಳ ಉಡಾವಣೆ ಸೇರಿದಂತೆ 13 ಯೋಜನೆಗಳನ್ನು ಕಾರ್ಯಗತಗೊಳಿಸಲಿದೆ ಎಂದು ಶಿವನ್ ತಿಳಿಸಿದರು.

1625 ಕೆ.ಜಿ.ತೂಕದ ಕಾರ್ಟೊಸ್ಯಾಟ್ ಬೃಹತ್ ಪ್ರಮಾಣದ ನಗರ ಯೋಜನೆ,ಗ್ರಾಮೀಣ ಸಂಪನ್ಮೂಲ ಮತ್ತು ಮೂಲಸೌಕರ್ಯ ಅಭಿವೃದ್ಧಿ,ಕರಾವಳಿ ಪ್ರದೇಶ ಬಳಕೆ ಇತ್ಯಾದಿಗಳಿಗಾಗಿ ಹೆಚ್ಚುತ್ತಿರುವ ಬಳಕೆದಾರ ಬೇಡಿಕೆಗಳನ್ನು ಪೂರೈಸಲಿದೆ. ಅದು ಮಿಲಿಟರಿ ಉದ್ದೇಶಗಳಿಗೂ ಬಳಕೆಯಾಗಲಿದೆ ಎಂದು ಇಸ್ರೋ ತಿಳಿಸಿದೆ.

ಇದು ಪಿಎಸ್‌ಎಲ್‌ವಿ ಉಡಾವಣಾ ವಾಹನದ 21ನೇ ಯಾನವಾಗಿದೆ. ಕಾರ್ಟೊಸ್ಯಾಟ್-3 ಕಾರ್ಟೊಸ್ಯಾಟ್ ಸರಣಿಯಲ್ಲಿ ಒಂಭತ್ತನೆಯದಾಗಿದ್ದು,ಬುಧವಾರದ ಉಡಾವಣೆ 2019ರಲ್ಲಿ ಇಸ್ರೋ ನಡೆಸಿದ ಐದನೇ ಉಡಾವಣೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News