ವಾಪಸ್ ಬಾರದ ಮುದ್ರಾ ಸಾಲ: ನಿಗಾ ಇಡಲು ಬ್ಯಾಂಕುಗಳಿಗೆ ಸೂಚಿಸಿದ ಆರ್‌ಬಿಐ

Update: 2019-11-27 10:48 GMT

ಮುಂಬೈ: ಮುದ್ರಾ ಯೋಜನೆಯಡಿ ನೀಡಲಾಗುತ್ತಿರುವ ಸಾಲಗಳಲ್ಲಿ ಹೆಚ್ಚುತ್ತಿರುವ ಎನ್‍ಪಿಎಗಳನ್ನು ಪರಿಗಣಿಸಿ ಈ ಸಾಲಗಳ ಮೇಲೆ ಹೆಚ್ಚಿನ ನಿಗಾ  ಇಡುವಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕುಗಳಿಗೆ ಹೇಳಿದೆ. ಮುದ್ರಾ ಸಾಲಗಳನ್ನು ಪಡೆದವರು ಸಾಲ ವಾಪಸ್ ನೀಡದೆ ವಂಚಿಸುತ್ತಿರುವ ಹಿನ್ನೆಲೆಯಲ್ಲಿ ಈ ಕುರಿತಂತೆ ಬ್ಯಾಂಕುಗಳು ಹೆಚ್ಚಿನ ಗಮನಹರಿಸಿಲ್ಲ ಎಂದು ಕೆಲ ತಿಂಗಳುಗಳ ಹಿಂದೆ ಬ್ಯಾಂಕುಗಳ ಜತೆಗಿನ ಸಭೆಯಲ್ಲಿ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅಸಮಾಧಾನ ವ್ಯಕ್ತಪಡಿಸಿದ್ದರು.

2015ರಲ್ಲಿ ಜಾರಿಗೊಳಿಸಲಾದ ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿಯಲ್ಲಿ ಸಣ್ಣ ಮತ್ತು ಮಧ್ಯಮ  ಉದ್ದಿಮೆಗಳಿಗೆ ರೂ. 10 ಲಕ್ಷ ತನಕ ಸಾಲ ನೀಡಲಾಗುತ್ತದೆ. ಆರ್ಥಿಕ ವರ್ಷ 2018-19ರಲ್ಲಿ ಒಟ್ಟು ಅನುತ್ಪಾದಕ ಸಾಲದ ಪ್ರಮಾಣದಲ್ಲಿ ಮುದ್ರಾ ಯೋಜನೆಯ ಪಾಲು ಶೇ 2.68ರಷ್ಟಿತ್ತು. ಅದಕ್ಕಿಂತಲೂ ಹಿಂದಿನ ವರ್ಷ ಈ ಪ್ರಮಾಣ ಶೇ 2.52ರಷ್ಟಿತ್ತು ಎಂದು ಸಂಸತ್ತಿಗೆ ಜುಲೈ ತಿಂಗಳಲ್ಲಿ ನೀಡಲಾದ ಉತ್ತರದಲ್ಲಿ ತಿಳಿಸಲಾಗಿತ್ತು.

ಆರ್ಥಿಕ ವರ್ಷ 2019ರಲ್ಲಿ ಮುದ್ರಾ ಯೋಜನೆಯಡಿ ನೀಡಲಾದ ಸಾಲದ ಪ್ರಮಾಣ ರೂ. 3.1 ಲಕ್ಷ ಕೋಟಿಯಾಗಿರುವಂತೆಯೇ ಸಾಲ ವಾಪಸ್ ನೀಡದಿರುವ ಪ್ರಕರಣಗಳೂ ಹೆಚ್ಚಾಗಿವೆ, ಎಂದು ನವೆಂಬರ್ 18ರಂದು ನೀಡಲಾದ ಇನ್ನೊಂದು ಉತ್ತರದಲ್ಲಿ ಮಾಹಿತಿ ನೀಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News