'ನೀವು ಮಹಿಳೆಯಲ್ಲದಿದ್ದರೆ'...: ನ್ಯಾಯಾಧೀಶೆಗೆ ಬೆದರಿಕೆ ಹಾಕಿದ ವಕೀಲರು!

Update: 2019-11-29 08:55 GMT

ತಿರುವನಂತಪುರಂ: ಆರೋಪಿಯೊಬ್ಬನಿಗೆ ಜಾಮೀನು ನೀಡದ ಮಹಿಳಾ ನ್ಯಾಯಾಧೀಶೆಗೆ  ಬೆದರಿಕೆಯೊಡ್ಡಿದ 12 ವಕೀಲರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ನ್ಯಾಯಾಧೀಶೆಯ ಚೇಂಬರಿನ ಬಾಗಿಲು ಹಾಕಿ ನಂತರ ವಕೀಲರು ಆಕೆಗೆ ಬೆದರಿಕೆಯೊಡ್ಡಿದ್ದರು ಎಂದು ದೂರಲಾಗಿದೆ.

 ತಿರುವನಂತಪುರಂನ ಜೆಎಫ್‍ಸಿಎಂ ನ್ಯಾಯಾಲಯದ  ನ್ಯಾಯಾಧೀಶೆ ದೀಪಾ ಮೋಹನ್ ಈ ಬಗ್ಗೆ ದೂರು ನೀಡಿದ್ದು, ರಾಜ್ಯ ಸಾರಿಗೆ ಸಂಸ್ಥೆಯ ಚಾಲಕನಿಗೆ ಪ್ರಕರಣವೊಂದರಲ್ಲಿ ಜಾಮೀನು ನೀಡದೇ ಇರುವುದಕ್ಕೆ ತನಗೆ ಥಳಿಸುವುದಾಗಿ ಹೇಳಿ ವಕೀಲರು ಬೆದರಿಕೆಯೊಡ್ಡಿದ್ದಾರೆ ಎಂದು  ಆರೋಪಿಸಿದ್ದಾರೆ.

"ನೀವೊಬ್ಬರು ಮಹಿಳೆ, ಇಲ್ಲದೇ ಇದ್ದರೆ ನಿಮ್ಮನ್ನು ನಿಮ್ಮ ಚೇಂಬರಿನಿಂದ ಹೊರಕ್ಕೆಳೆದು  ಥಳಿಸುತ್ತಿದ್ದೆವು, ನೀವು ಚೇಂಬರಿನಿಂದ ಹೇಗೆ ಹೊರಕ್ಕೆ ಬರುತ್ತೀರೆಂದು ನಾವು ನೋಡುತ್ತೇವೆ"  ಎಂದು ಆರೋಪಿಗಳು ತಿಳಿಸಿದ್ದರೆಂದು ನ್ಯಾಯಾಧೀಶೆ ತಮ್ಮ ದೂರಿನಲ್ಲ  ಹೇಳಿದ್ದಾರೆ.

"ಇಂದು ಈ ವಿಚಾರದಲ್ಲಿ ತೀರ್ಮಾನ ಕೈಗೊಳ್ಳದೇ ಇದ್ದರೆ ನ್ಯಾಯಾಲಯ ಕಾರ್ಯಾಚರಿಸುವುದಿಲ್ಲ'' ಎಂದೂ ಹೇಳಿ  ಆರೋಪಿಗಳು ನ್ಯಾಯಾಧೀಶೆಯ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದರೆಂದು ತಿಳಿದು ಬಂದಿದೆ. ಆರೋಪಿಗಳ ಪೈಕಿ ಬಾರ್ ಅಸೋಸಿಯೇಶನ್ ಅಧ್ಯಕ್ಷ ಹಾಗೂ ಕಾರ್ಯದರ್ಶಿಯೂ ಸೇರಿದ್ದಾರೆ.

ಘಟನೆ ಕುರಿತಂತೆ ಕೇರಳ ಹೈಕೋರ್ಟ್ ಮಧ್ಯ ಪ್ರವೇಶಿಸಿದ ನಂತರ ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News