'ಮಹಾರಾಷ್ಟ್ರ ನಂತರ ನಮ್ಮ ಗುರಿ..': ಮತ್ತೊಂದು ಬಿಜೆಪಿ ಆಡಳಿತದ ರಾಜ್ಯದ ಹೆಸರು ಹೇಳಿದ ಶಿವಸೇನೆ

Update: 2019-11-29 12:30 GMT

ಮುಂಬೈ: ಮಹಾರಾಷ್ಟ್ರದ ನಂತರ ಬಿಜೆಪಿ ಆಡಳಿತದ ಗೋವಾದಲ್ಲಿ ಪವಾಡ ನಡೆಯಲಿದೆ ಎಂದು ಶಿವಸೇನೆಯ ನಾಯಕ ಸಂಜಯ್ ರಾವತ್ ಹೇಳಿಕೊಂಡಿದ್ದಾರೆ. ಉದ್ಧವ್ ಠಾಕ್ರೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮರುದಿನವೇ ಅವರ ಹೇಳಿಕೆ ಬಂದಿದೆ. ಗೋವಾದಲ್ಲೂ ಹೊಸ ರಾಜಕೀಯ ಮೈತ್ರಿ ಕೂಟ ರಚನೆಯಾಗಬಹುದೆಂದು ಅವರು ಈ ಮೂಲಕ ಸುಳಿವು ನೀಡಿದ್ದಾರೆ.

"ಗೋವಾದ ಮಾಜಿ ಉಪಮುಖ್ಯಮಂತ್ರಿ, ಗೋವಾ ಫಾರ್ವರ್ಡ್ ಪಾರ್ಟಿಯ ವಿಜಯ್ ಸರ್ದೇಸಾಯಿ  ಶಿವಸೇನೆ ಜತೆ ಸಂಪರ್ಕದಲ್ಲಿದ್ದಾರೆ. ಮಹಾರಾಷ್ಟ್ರದಲ್ಲಿ ನಡೆದಂತೆಯೇ ಗೋವಾದಲ್ಲೂ ಹೊಸ ರಾಜಕೀಯ ಕೂಟ ರಚನೆಯಾಗಲಿದೆ. ಜಲ್ದೀ ಹೀ ಗೋವಾ ಮೇ ಭೀ ಆಪ್ಕೋ ಏಕ್ ಚಮತ್ಕಾರ್ ದಿಖಾಯಿ ದೇಗಾ'' ಎಂದು ರಾವತ್ ಹೇಳಿದ್ದಾರೆ.

"ಅದು ದೇಶಾದ್ಯಂತ ನಡೆಯಲಿದೆ. ಮಹಾರಾಷ್ಟ್ರದ ನಂತರ ಅದು ಗೋವಾ, ನಂತರ ನಾವು ಇತರ  ರಾಜ್ಯಗಳಿಗೆ ಹೋಗುತ್ತೇವೆ.  ಬಿಜೆಪಿಯೇತರ ರಾಜಕೀಯ ರಂಗ ನಮಗೆ ದೇಶದಲ್ಲಿ ಬೇಕಿದೆ'' ಎಂದು ಅವರು ತಿಳಿಸಿದರು.

ತಾವು ಸಂಜಯ್ ರಾವತ್ ಅವರನ್ನು ಭೇಟಿಯಾಗಿದ್ದನ್ನು ವಿಜಯ್ ಸರ್ದೇಸಾಯಿ ದೃಢ ಪಡಿಸಿದ್ದಾರೆ.

``ಸರಕಾರಗಳು ಘೋಷಣೆಯಾದ ಕೂಡಲೇ  ಬದಲಾಗುವುದಿಲ್ಲ. ಅವುಗಳು ದಿಢೀರನೇ ಬದಲಾಗುತ್ತವೆ. ಮಹಾರಾಷ್ಟ್ರದಲ್ಲಾದಂತೆ ಗೋವಾದಲ್ಲೂ ಆಗಬೇಕು. ವಿಪಕ್ಷಗಳು ಜತೆಯಾಗಬೇಕು. ನಾವು ಸಂಜಯ್ ರಾವತ್ ಅವರನ್ನು ಭೇಟಿಯಾಗಿದ್ದೇವೆ. ಮಹಾ ವಿಕಾಸ್ ಅಘಾಟಿ ಗೋವಾಗೂ ವಿಸ್ತರಣೆಯಾಗಬೇಕು,'' ಎಂದರು.

ಗೋವಾದಲ್ಲಿ 2017ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 17 ಸ್ಥಾನಗಳನ್ನು ಪಡೆದ ಹೊರತಾಗಿಯೂ 13 ಸ್ಥಾನಗಳನ್ನು ಪಡೆದ ಬಿಜೆಪಿಗೆ ಸರಕಾರ ರಚಿಸಲು ಗೋವಾ ಫಾರ್ವರ್ಡ್ ಪಾರ್ಟಿ ಸಹಾಯ  ಮಾಡಿತ್ತು.

ಆದರೆ ಸೀಎಂ ಆಗಿದ್ದ ಮನೋಹರ್ ಪರಿಕ್ಕರ್ ನಿಧನಾನಂತರ  ಮಿತ್ರ ಪಕ್ಷಗಳ ಬೇಡಿಕೆಗೆ ಜಗ್ಗದ ಬಿಜೆಪಿ ಗೋವಾ ಫಾರ್ವರ್ಡ್ ಪಾರ್ಟಿ ಸಚಿವರನ್ನು ಕೈಬಿಟ್ಟಿತ್ತಲ್ಲದೆ  10 ಕಾಂಗ್ರೆಸ್ ಶಾಸಕರು ಬಿಜೆಪಿಗೆ ಪಕ್ಷಾಂತರಗೈದ ನಂತರ ಅವರನ್ನು ಸಚಿವರನ್ನಾಗಿಸಿತ್ತು. ಸದ್ಯ 40 ಸದಸ್ಯ ಬಲದ ಗೋವಾ ವಿಧಾನಸಭೆಯಲ್ಲಿ ಬಿಜೆಪಿಗೆ 27 ಸದಸ್ಯರ ಬಲವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News