ಪ್ರತಿ ತಿಂಗಳು ದಿಲ್ಲಿಯ ಹೋಟೆಲ್‍ ಗೆ 50 ಲಕ್ಷ ರೂ. ಬಾಡಿಗೆ ಪಾವತಿಸುತ್ತಿರುವ ಲೋಕಪಾಲರು

Update: 2019-12-01 17:36 GMT

ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ಖಾಯಂ ಕಚೇರಿ ಇಲ್ಲದ ಕಾರಣ, ದೇಶದ ಅತ್ಯುನ್ನತ ಭ್ರಷ್ಟಾಚಾರ ವಿರೋಧಿ ಅಧಿಕಾರಿ ಲೋಕಪಾಲರು ಸರ್ಕಾರಿ ಮಾಲಕತ್ವದ ಅಶೋಕ ಹೋಟೆಲ್‍ ಗೆ ತಿಂಗಳಿಗೆ 50 ಲಕ್ಷ ರೂಪಾಯಿ ಬಾಡಿಗೆ ಪಾವತಿಸುತ್ತಿರುವುದು ಬೆಳಕಿಗೆ ಬಂದಿದೆ.

ಸಾರ್ವಜನಿಕ ಸೇವಕರ ವಿರುದ್ಧದ ಭ್ರಷ್ಟಾಚಾರ ಆರೋಪಗಳ ಬಗ್ಗೆ ದೂರು ನೀಡುವ ಸಲುವಾಗಿ ಲೋಕಪಾಲ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ಪ್ರಶ್ನೆಯೊಂದಕ್ಕೆ ನೀಡಿದ ಉತ್ತರದಲ್ಲಿ ಈ ಅಂಶ ಬಹಿರಂಗವಾಗಿದೆ.

"ಲೋಕಪಾಲ ಕಚೇರಿ ಅಶೋಕ ಹೋಟೆಲ್‍ನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಇದು ಪಾವತಿಸುವ ಮಾಸಿಕ ಬಾಡಿಗೆ ಸುಮಾರು 50 ಲಕ್ಷ ರೂಪಾಯಿ. 2019ರ ಮಾರ್ಚ್ 22ರಿಂದ ಅಕ್ಟೋಬರ್ ಅಂತ್ಯದವರೆಗೆ 3.85 ಕೋಟಿ ರೂಪಾಯಿ ಪಾವತಿಸಲಾಗಿದೆ. ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಈ ಬಾಡಿಗೆ ನಿಗದಿಪಡಿಸಿದೆ" ಎಂದು ವಿವರಿಸಲಾಗಿದೆ.

ಸುಪ್ರೀಂಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಪಿ.ಸಿ.ಘೋಷ್ ಅವರನ್ನು ಸರ್ಕಾರ ಭಾರತದ ಮೊಟ್ಟಮೊದಲ ಲೋಕಪಾಲರನ್ನಾಗಿ ಕಳೆದ ಮಾರ್ಚ್‍ನಲ್ಲಿ ನೇಮಕ ಮಾಡಿತ್ತು. ಅಂತೆಯೇ ನಾಲ್ವರು ನ್ಯಾಯಾಂಗ ಹಾಗೂ ನಾಲ್ವರು ನ್ಯಾಯಾಂಗೇತರ ಸದಸ್ಯರು ಸೇರಿ ಒಂಬತ್ತು ಹುದ್ದೆಗಳನ್ನು ಭರ್ತಿ ಮಾಡಿತ್ತು. ಆ ಬಳಿಕ ಅಶೋಕ ಹೋಟೆಲ್‍ ನ ಎರಡನೇ ಮಹಡಿಯ 12 ಕೊಠಡಿಗಳಲ್ಲಿ ಈ ಕಚೇರಿ ಕಾರ್ಯ ನಿರ್ವಹಿಸುತ್ತಿದೆ.

ಆರ್‍ ಟಿಐ ಕಾರ್ಯಕರ್ತ ಶುಭಂ ಖತ್ರಿ ಎಂಬುವವರು ಲೋಕಪಾಲ ಕಾರ್ಯನಿರ್ವಹಣೆ ಮತ್ತು ದೂರುಗಳ ವಿಲೇವಾರಿ ಬಗ್ಗೆ ಕೇಳಿದ್ದ ಪ್ರಶ್ನೆಗೆ ಪಡೆದ ಉತ್ತರದಲ್ಲಿ ಈ ಅಂಶ ವಿವರಿಸಲಾಗಿದೆ. ಇದುವರೆಗೆ 1160 ದೂರುಗಳು ಸಾರ್ವಜನಿಕ ಸೇವಕರ ವಿರುದ್ಧ ಬಂದಿದ್ದು, ಅವುಗಳಲ್ಲಿ ಯಾವುದೂ ವಿಚಾರಣೆಗೆ ಅರ್ಹವಾಗಿಲ್ಲ ಎಂದು ಉತ್ತರಿಸಲಾಗಿದೆ.

ಈ ಬಗ್ಗೆ ಆರ್‌ಟಿಐ ಅರ್ಜಿ ಸಲ್ಲಿಸಿ ಮಾಹಿತಿ ಪಡೆದಿರುವ 18ರ ಹರೆಯ ವಿದ್ಯಾರ್ಥಿ ಶುಭಂ ಖತ್ರಿ ಸರಕಾರಿ ಬೊಕ್ಕಸದಿಂದ ಇಷ್ಟೊಂದು ಹಣವನ್ನು ಲೋಕಪಾಲ್ ತಿಂಗಳ ಬಾಡಿಗೆಗೆ ನೀಡುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

 ‘‘ಈ ಬಾಡಿಗೆ ನೀಡುವ ಸಂಪೂರ್ಣ ಮೊತ್ತವನ್ನು ಸರಕಾರದ ಬೊಕ್ಕಸದಿಂದ ಪಡೆಯಲಾಗುತ್ತಿದೆ. ಕಳೆದ 8 ತಿಂಗಳಿಂದ ಬಾಡಿಗೆ ನೀಡಲಾಗುತ್ತಿದೆ. ಇದುವರೆಗೆ ಬಾಡಿಗೆ ನೀಡಿದ ಒಟ್ಟು ಮೊತ್ತ 4 ಕೋಟಿ ರೂಪಾಯಿ. ಲೋಕಪಾಲ್ ಪಂಚತಾರ ಹೊಟೇಲ್ ಬಿಟ್ಟು ಬೇರೆ ಎಲ್ಲಿ ಕೂಡ ಕಚೇರಿಗೆ ಬೇಕಾಗುವ ಸ್ಥಳವನ್ನು ಸುಲಭವಾಗಿ ಪಡೆದುಕೊಳ್ಳಬಹುದಿತ್ತು. ಆದರೆ, ಅದು ಹಾಗೆ ಮಾಡಿಲ್ಲ. ಅಲ್ಲದೆ, ಲೋಕಪಾಲ್ ಇದುವರೆಗೆ ಯಾವುದೇ ಪ್ರಕರಣದ ತನಿಖೆ ಆರಂಭಿಸದೇ ಇರುವುದು ಆಘಾತಕಾರಿ ವಿಚಾರ’’ ಎಂದು ಅವರು ಹೇಳಿದ್ದಾರೆ.

  2019 ಅಕ್ಟೋಬರ್ 31ರ ವರೆಗೆ ಸರಕಾರಿ ಅಧಿಕಾರಿಗಳ ವಿರುದ್ಧದ ಭ್ರಷ್ಟಾಚಾರ ಆರೋಪದ 1,160 ದೂರುಗಳನ್ನು ಲೋಕಪಾಲ್ ಸ್ವೀಕರಿಸಿದೆ. ಇದರಲ್ಲಿ 1000 ದೂರುಗಳನ್ನು ಲೋಕಪಾಲ್‌ನ ಪೀಠ ಆಲಿಕೆ ನಡೆಸಿದೆ. ಈ ದೂರುಗಳ ಪ್ರಾಥಮಿಕ ತನಿಖೆ ನಡೆಸಲಾಗಿದೆ. ಆದರೆ, ಯಾವುದೇ ದೂರುಗಳ ಪೂರ್ಣ ತನಿಖೆ ನಡೆದಿಲ್ಲ ಎಂದು ಆರ್‌ಟಿಐ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News