ಸ್ಮಾರ್ಟ್ ಸಿಟಿ ಯೋಜನೆಯಡಿ ಕಸ ವಿಲೇವಾರಿಗಾಗಿ ಬಿಬಿಎಂಪಿ ವಿಭಿನ್ನ ಪ್ರಯತ್ನ

Update: 2019-12-02 18:20 GMT

ಬೆಂಗಳೂರು, ಡಿ.2: ಬಿಬಿಎಂಪಿಯು ನಗರದ ತ್ಯಾಜ್ಯ ವಿಲೇವಾರಿಗೆ ಹಲವು ಯೋಜನೆಗಳನ್ನು ರೂಪಿಸಿದರೂ ಸಹ ಇದುವರೆಗೂ ಸಮರ್ಪಕ ರೀತಿಯಲ್ಲಿ ಕಸ ವಿಲೇವಾರಿ ಮಾಡುವಲ್ಲಿ ಸಫಲವಾಗಿಲ್ಲ. ಆದರೆ, ಈ ಬಾರಿ ವಿಭಿನ್ನ ಪ್ರಯತ್ನಕ್ಕೆ ಮುಂದಾಗಿರುವ ಬಿಬಿಎಂಪಿ, ಸ್ಮಾರ್ಟ್ ಸಿಟಿ ಯೋಜನೆಯಡಿ ಕಸ ವಿಲೇವಾರಿಗಾಗಿಯೇ ಪ್ರತ್ಯೇಕ ನಿಯಂತ್ರಣ ಕೊಠಡಿ ತೆರೆಯಲು ಮುಂದಾಗಿದೆ.

ಬಿಬಿಎಂಪಿಯು ತ್ಯಾಜ್ಯ ನಿರ್ವಹಣೆಗಾಗಿ ಹೆಚ್ಚು ಒತ್ತು ನೀಡಿದ್ದು, ಅದರ ನಿಯಂತ್ರಣಕ್ಕಾಗಿಯೇ ಪ್ರತ್ಯೇಕವಾಗಿ ಒಂದು ನಿಯಂತ್ರಣ ಕೊಠಡಿ ತೆರೆಯಲು ನಿರ್ಧರಿಸಿದೆ. ಇದಕ್ಕಾಗಿ ಸ್ಮಾರ್ಟ್ ಸಿಟಿ ಯೋಜನೆಯಡಿ 25 ಕೋಟಿ ರೂ. ಅನುದಾನವನ್ನು ಬಿಬಿಎಂಪಿ ಮೀಸಲಿಟ್ಟಿದೆ.

ನಗರದ ಸಾರ್ವಜನಿಕ ಪ್ರದೇಶಗಳಾದ ಪಾರ್ಕ್, ಆಟದ ಮೈದಾನ, ಸರಕಾರಿ ಶಾಲೆ, ದೇವಸ್ಥಾನಗಳ ಆವರಣ ಹೀಗೆ ಖಾಲಿ ಜಾಗಗಳಲ್ಲಿ ನಿತ್ಯ ಕಸ ವಿಂಗಡಣೆ ಪ್ರಕ್ರಿಯೆ ನಡೆಯುತ್ತಿದ್ದರೂ, ಕಸ ವಿಲೇವಾರಿ ಸರಿಯಾಗಿ ನಿರ್ವಹಣೆ ಆಗುತ್ತಿರಲಿಲ್ಲ. ಜತೆಗೆ ಪ್ರತಿನಿತ್ಯ ಕಸ ಸಂಗ್ರಹಕ್ಕೆ ಕಸದ ವಾಹನಗಳು ಮನೆ ಮನೆಗೆ ತೆರಳುತ್ತಿಲ್ಲ ಎಂಬ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಕೇಳಿ ಬರುತ್ತಿವೆ. ಇದಕ್ಕೆಲ್ಲಾ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಬಿಬಿಎಂಪಿಯು, ತ್ಯಾಜ್ಯ ನಿರ್ವಹಣೆಗಾಗಿ ನಿಯಂತ್ರಣ ಕೊಠಡಿ ತೆರೆಯಲು ನಿರ್ಧರಿಸಿದ್ದು, ಸಾರ್ವಜನಿಕರು ನೇರವಾಗಿ ನಿಯಂತ್ರಣ ಕೊಠಡಿಗೆ ಕರೆ ಮಾಡಿ ತಮ್ಮ ದೂರು ನೀಡಬಹುದಾಗಿದೆ.

ಜಿಪಿಎಸ್ ಮೂಲಕ ನಿಯಂತ್ರಣ: ಸದ್ಯ ಬಿಬಿಎಂಪಿಯಲ್ಲಿ ತ್ಯಾಜ್ಯ ನಿರ್ವಹಣೆಗೆ ಬಳಕೆಯಾಗುತ್ತಿರುವ 4 ಸಾವಿರ ಆಟೋ ಮತ್ತು 500 ಕಾಂಪಾಕ್ಟರ್ ಕಸ ವಿಲೇವಾರಿ ಟ್ರಕ್‌ಗಳಿಗೆ ಜಿಪಿಎಸ್ ಅಳವಡಿಸಲಾಗುತ್ತದೆ. ಕಸ ಸಂಗ್ರಹಿಸಲು ಆಟೋಗಳು ಪ್ರತಿ ಮನೆ ಮತ್ತು ಹೊಟೇಲ್‌ಗಳ ಬಳಿ ಹೋಗುತ್ತಿರುವುದನ್ನು ಮತ್ತು ಆಯಾ ವಾಹನಗಳು ಎಷ್ಟು ಕಿ.ಮೀ ಕ್ರಮಿಸುತ್ತಿವೆ ಹಾಗೂ ಎಲ್ಲೆಲ್ಲಿ ಓಡಾಟ ನಡೆಸುತ್ತಿವೆ ಇದೆಲ್ಲದರ ಬಗ್ಗೆ ಜಿಪಿಎಸ್ ಮೂಲಕ ನಿಯಂತ್ರಣ ಕೊಠಡಿಗೆ ಮಾಹಿತಿ ಬರಲಿದೆ. ಈ ಮೂಲಕ ನಗರದಲ್ಲಿರುವ ಕಸದ ಸಮಸ್ಯೆಯನ್ನು ಬಗೆಹರಿಸಲು ಬಿಬಿಎಂಪಿ ನಿರ್ಧರಿಸಿದೆ.

ನಗರದ ತ್ಯಾಜ್ಯ ಸುರಿಯಲಾಗುತ್ತಿರುವ ಸಂಸ್ಕರಣ ಘಟಕಗಳಲ್ಲಿ ವೇ ಬ್ರಿಡ್ಜನ್ನು ನಿರ್ಮಿಸಿ, ವಾರ್ಡ್‌ಗಳಲ್ಲಿ ಸಂಗ್ರಹಿಸುವ ಕಸದ ತೂಕದ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತದೆ. ಕಸ ವಿಂಗಡನೆ ಘಟಕ ಮತ್ತು ಪ್ರೊಸೆಸಿಂಗ್ ಯುನಿಟ್‌ಗಳಲ್ಲಿ ಕಡ್ಡಾಯವಾಗಿ ಸಿ.ಸಿ ಕ್ಯಾಮರಾ ಅಳವಡಿಸಲಾಗುತ್ತದೆ. ಈ ಮೂಲಕ ಕಸ ವಿಲೇವಾರಿಯನ್ನು ಸಮರ್ಪಕವಾಗಿ ನಿರ್ವಹಿಸಲಾಗುವುದು.

-ಡಿ.ರಂದೀಪ್, ಬಿಬಿಎಂಪಿ ವಿಶೇಷ ಆಯುಕ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News