ಮಾತೃಭಾಷೆಯೊಂದಿಗೆ ಇಂಗ್ಲಿಷ್ ಶಿಕ್ಷಣ ಮುಖ್ಯ: ಆಂಧ್ರಪ್ರದೇಶ ಸಚಿವ ಆಡಿಮುಲಪು ಸುರೇಶ್

Update: 2019-12-02 18:26 GMT

ಬೆಂಗಳೂರು, ಡಿ.2: ಇಂದಿನ ವಿದ್ಯಾರ್ಥಿಗಳಿಗೆ ಮಾತೃಭಾಷೆಯ ಶಿಕ್ಷಣದ ಜತೆಗೆ ಆಂಗ್ಲ ಕಲಿಕೆಯೂ ಅತಿಮುಖ್ಯ ಎಂದು ಆಂಧ್ರಪ್ರದೇಶದ ಶಿಕ್ಷಣ ಸಚಿವ ಡಾ.ಆಡಿಮುಲಪು ಸುರೇಶ್ ಅಭಿಪ್ರಾಯಪಟ್ಟಿದ್ದಾರೆ.

ನಗರದ ಖಾಸಗಿ ಹೊಟೇಲ್‌ನಲ್ಲಿ ವರ್ಲ್ಡ್ ಫೋರಂ ಫಾರ್ ಎಜುಕೇಷನ್ ಆಯೋಜಿಸಿದ್ದ ಎರಡು ದಿನಗಳ ಅಂತರ್‌ರಾಷ್ಟ್ರೀಯ ಆವಿಷ್ಕಾರ ಮತ್ತು ಕ್ರಿಯಾಶೀಲತೆ ಸಮಾವೇಶದಲ್ಲಿ ಸೋಮವಾರ ಭಾಗವಹಿಸಿ ಮಾತನಾಡಿದ ಅವರು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜತೆಗೆ, ಇಂಗ್ಲಿಷ್ ಶಿಕ್ಷಣ ಹಾಗೂ ಕೌಶಲ್ಯಾಧಾರಿತ ಶಿಕ್ಷಣ ಬಹಳ ಮುಖ್ಯ ಎಂದು ನುಡಿದರು.

ನಮ್ಮ ರಾಜ್ಯದಲ್ಲಿ ಬರುವ ಶೈಕ್ಷಣಿಕ ವರ್ಷದಿಂದ ಪ್ರಾಥಮಿಕ ಶಿಕ್ಷಣ ಆಂಗ್ಲ ಮಾದ್ಯಮದಲ್ಲೇ ನೀಡಲಾಗುವುದು. ಅಲ್ಲಿನ ಶಿಕ್ಷಣದಲ್ಲಿ ಬಹಳಷ್ಟು ಬದಲಾವಣೆಗಳನ್ನು ತರುವ ಕಡೆಗೆ ಚಿಂತನೆ ಮಾಡಿದ್ದೇವೆ ಎಂದು ಸಚಿವ ಸುರೇಶ್ ತಿಳಿಸಿದರು.

ಮುಂದಿನ ವರ್ಷದಿಂದ 1ರಿಂದ 6ನೇ ತರಗತಿವರೆಗೆ ಆಂಗ್ಲ ಮಾದ್ಯಮ ಶಿಕ್ಷಣ ಪರಿಚಯಿಸಲಾಗುತ್ತಿದೆ. ಈ ಮೂಲಕ ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿಗೆ ತಕ್ಕಂತೆ ಪ್ರಾಥಮಿಕ ಹಂತದಲ್ಲೇ ಮಕ್ಕಳನ್ನು ತಯಾರು ಮಾಡಲಾಗುವುದು. ಇದು ಭವಿಷ್ಯದ ದೃಷ್ಟಿಯಿಂದ ಕ್ರಾಂತಿಕಾರಿ ಹೆಜ್ಜೆ ಆಗಲಿದೆ ಎಂದು ಹೇಳಿದರು.

ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆ ತರಲು ಯೋಜನೆ ರೂಪಿಸಲಾಗಿದೆ. ಅಮ್ಮ ಬಡಿ ಹೆಸರಿನಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಪೋಷಕರಿಗೆ ಮನವಿ ಮಾಡಲಾಗುತ್ತಿದೆ. ಅಲ್ಲದೆ, ಇದರಡಿ, ಪೋಷಕರಿಗೆ 15 ಸಾವಿರ ರೂ. ಪ್ರೋತ್ಸಾಹ ಧನವನ್ನು ನೀಡಲಾಗುತ್ತಿದೆ ಎಂದು ಹೇಳಿದರು.

ಸರಕಾರದ ಅನೇಕ ಯೋಜನೆಗಳಿಂದ ಇದೀಗ ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಅಧಿಕವಾಗುತ್ತಿದೆ. 70 ಲಕ್ಷ ಮಕ್ಕಳು ಪ್ರಸ್ತುತ ನೋಂದಣಿ ಮಾಡಿಸಿಕೊಂಡಿದ್ದಾರೆ. 3 ಲಕ್ಷ ಶಿಕ್ಷಕರಿದ್ದಾರೆ. ಇದು ಮತ್ತೊಂದೆಡೆ ಬಾಲ ಕಾರ್ಮಿಕ ಸಮಸ್ಯೆ ನಿವಾರಣೆಗೂ ಸಹಾಯವಾಗಿದೆ. ಯಾಕೆಂದರೆ, ಶಾಲೆ ಬಿಟ್ಟ ಮಕ್ಕಳು ಕೆಲಸಕ್ಕೆ ಹೋಗುತ್ತಿದ್ದರು ಎಂದು ಸಚಿವ ಆಡಿಮುಲಪು ಸುರೇಶ್ ಮಾಹಿತಿ ನೀಡಿದರು.

ಕೌಶಲ್ಯಾಧಾರಿತ ಶಿಕ್ಷಣ ಇಂದಿನ ಅತ್ಯಂತ ತುರ್ತು ಅಗತ್ಯವಿದೆ. ಇಂದಿನ ಆಧುನಿಕ ಕಾಲಘಟ್ಟಕ್ಕೆ ತಕ್ಕಂತೆ ಮುಂದಿನ ದಿನಗಳಲ್ಲಿ ನಮ್ಮ ರಾಜ್ಯದಲ್ಲಿ ಕೌಶಲ್ಯಾಧಾರಿತ ವಿಶ್ವವಿದ್ಯಾಲಯ ಸ್ಥಾಪಿಸಲು ಉದ್ದೇಶಿಸಲಾಗಿದೆ. ಅದರಡಿಯಲ್ಲಿ ಪ್ರತಿ ಲೋಕಸಭಾ ಕ್ಷೇತ್ರಕ್ಕೆ ಒಂದರಂತೆ ಕೌಶಲ್ಯಾಭಿವೃದ್ಧಿ ಕಾಲೇಜು ಆರಂಭಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ವರ್ಲ್ಡ್ ಫೋರಂ ಫಾರ್ ಎಜುಕೇಷನ್ ಮುಖ್ಯಸ್ಥ ಭರತ್ ಲಾಲ್ ಮೀನಾ, ರೊಮಾನಿಯಾ ರಾಯಭಾರಿ ಕಚೇರಿಯ ಎಚ್.ಇ. ವಿಜಯ್ ಮೆಹ್ತ, ಬೋಸ್ನಿಯಾ ರಾಯಭಾರಿ ಎಚ್.ಇ. ಮುಹಮ್ಮದ್ ಸೆಂಜಿಕ್, ಎನ್‌ಎಂಸಿ ಗ್ರೂಪ್ ಅಧ್ಯಕ್ಷ ಡಾ.ಬಿ.ಆರ್. ಶೆಟ್ಟಿ, ಜಲ ತಜ್ಞ ಡಾ. ರಾಜೇಂದ್ರ ಸಿಂಗ್ ಸೇರಿದಂತೆ ಹಲವರಿದ್ದರು.

ಅನ್ವೇಷಣೆ ಹಾಗೂ ಸೃಜನಶೀಲತೆ, ಸಂಸ್ಕೃತಿ, ಪರಂಪರೆ ಹಾಗೂ ಅಂತರ ಸಾಂಸ್ಕೃತಿಕ ಸಂಪರ್ಕಗಳು, ಆಡಳಿತ- ಸಚಿವಾಲಯಗಳು ಹಾಗೂ ರಾಜಕೀಯ, ಶೈಕ್ಷಣಿಕ ಸುಧಾರಣೆಗಳು, ಉದ್ಯಮ ಚತುರತೆ-ಸ್ಟಾರ್ಟ್ ಅಪ್‌ಗಳು ಹಾಗೂ ಮಾರುಕಟ್ಟೆಗಳು ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆಯಾಗಲಿದೆ. ಇಲ್ಲಿಂದ ಬರುವ ಸಲಹೆ-ಶಿಫಾರಸುಗಳು ಕ್ರೋಡೀಕರಿಸಿ ಸೂಕ್ತವಾದವುಗಳನ್ನು ಪಟ್ಟಿಮಾಡಿ, ಕೇಂದ್ರದ ಮಾನವ ಸಂಪನ್ಮೂಲ ಸಚಿವಾಲಯಕ್ಕೆ ಕಳುಹಿಸಲಾಗುವುದು.

-ಭರತ್ ಲಾಲ್ ಮೀನಾ, ವರ್ಲ್ಡ್ ಫೋರಂ ಫಾರ್ ಎಜುಕೇಷನ್ ಮುಖ್ಯಸ್ಥ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News