ಬೆಂಗಳೂರು: ಸುಗಮ ಚುನಾವಣೆಗೆ ಪೊಲೀಸ್ ಭದ್ರತೆ, ಬಿಗಿ ಬಂದೋಬಸ್ತ್ ವ್ಯವಸ್ಥೆ

Update: 2019-12-02 18:30 GMT

ಬೆಂಗಳೂರು, ಡಿ.2: ಉಪ ಚುನಾವಣೆ ಹಿನ್ನೆಲೆ ರಾಜಧಾನಿ ಬೆಂಗಳೂರಿನ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದ್ದು, ಈ ಸಂದರ್ಭದಲ್ಲಿ ಸಂಭವನೀಯ ಅಕ್ರಮ ತಡೆಯಲು ನಗರ ಪೊಲೀಸ್ ಆಯುಕ್ತಾಲಯ ಸಜ್ಜಾಗಿದ್ದು, ಈ ನಿಟ್ಟಿನಲ್ಲಿ ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡಿದೆ.

ಸೋಮವಾರ ಈ ಕುರಿತು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಇಲ್ಲಿನ ಕೆಆರ್‌ಪುರ, ಯಶವಂತಪುರ, ಮಹಾಲಕ್ಷ್ಮೀಔಟ್, ಶಿವಾಜಿನಗರ ಕ್ಷೇತ್ರದಲ್ಲಿ ಚುನಾವಣೆ ಜರುಗಲಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದರು.

ಚುನಾವಣೆ ಪ್ರಕ್ರಿಯೆ ಶಾಂತಿಯುತವಾಗಿ ನಡೆಸಲು ಇಬ್ಬರು ಹೆಚ್ಚುವರಿ ಪೊಲಿಸ್ ಆಯುಕ್ತರು, 7 ಡಿಸಿಪಿ, 14 ಎಸಿಪಿ, 30 ಪೊಲೀಸ್ ಇನ್ಸ್‌ಪೆಕ್ಟರ್, 68 ಪಿಎಸ್ಸೈ, 160 ಎಎಸ್ಸೈ, 1,666 ಮುಖ್ಯ ಪೇದೆ, ಪೇದೆಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಇವರ ಜೊತೆಗೆ 951 ಮಂದಿ ಗೃಹ ರಕ್ಷಕ ದಳದ ಸಿಬ್ಬಂದಿ ಭದ್ರತೆ ಕೈಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

ಚುನಾವಣೆಯ ಸೆಕ್ಟರ್ ಮೊಬೈಲ್ ನಲ್ಲಿ 14 ಎಸಿಪಿಗಳು, 30 ಇನ್ಸ್‌ಪೆಕ್ಟರ್‌ಗಳು ಸೇರಿದಂತೆ 102 ಸಿಬ್ಬಂದಿಗಳು ಇರಲಿದ್ದು, ಜೊತೆಗೆ ಕೇಂದ್ರ ಪಡೆಯ 10, ರಾಜ್ಯ ಮೀಸಲು ಪಡೆಯ 38, ಸಿಆರ್ 40, ಆರ್‌ಐವಿ 4, ಕ್ಯೂಆರ್‌ಟಿಯ 3 ತುಕಡಿಗಳು ಭದ್ರತೆ ಕೈಗೊಳ್ಳಲಿವೆ ಎಂದು ವಿವರಿಸಿದರು.

ಉಪ ಚುನಾವಣೆ ನಡೆಯುವ 1,064 ಮತಗಟ್ಟೆಗಳಲ್ಲಿ 238 ಸೂಕ್ಷ್ಮ, 826 ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದ್ದು, ಸೂಕ್ಷ್ಮ ಮತಗಟ್ಟೆಗೆ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಿ ಭದ್ರತೆ ಕೈಗೊಳ್ಳಲಾಗಿದೆ.ಅದೇ ರೀತಿ, ಚುನಾವಣೆ ಹಿನ್ನೆಲೆ ಅಹಿತಕರ ಘಟನೆಗಳು ನಡೆಯದಂತೆ ಅಪರಾಧ ಹಿನ್ನೆಲೆಯ 620 ಮಂದಿಯನ್ನು ಠಾಣೆಗೆ ಕರೆದು, ಎಚ್ಚರಿಕೆ ನೀಡಲಾಗಿದೆ ಎಂದರು.

ಈಗಾಗಲೇ ಅಕ್ರಮ ಶಸ್ತ್ರಾಸ್ತ್ರಗಳನ್ನು ಜಪ್ತಿ ಮಾಡಿರುವ ಪೊಲೀಸರು, ರೌಡಿಗಳು, ಪುಡಿ ರೌಡಿಗಳ ಮೇಲೆ ನಿಗಾವಹಿಸಿ ವಾಹನಗಳ ತಪಾಸಣೆಯನ್ನು ಚುರುಕುಗೊಳಿಸಲಾಗಿದೆ. ಉಪ ಚುನಾವಣೆ ಹಿನ್ನೆಲೆ ನೀತಿ ಸಂಹಿತೆ ಉಲ್ಲಂಘಿಸಿರುವ ವ್ಯಕ್ತಿಗಳ ವಿರುದ್ಧ 27 ಪ್ರಕರಣಗಳನ್ನು ದಾಖಲಿಸಲಾಗಿದೆ. ದಾಖಲಾತಿಗಳಿಲ್ಲದೇ ಸಾಗಿಸುತ್ತಿದ್ದ 15 ಲಕ್ಷ 92 ಸಾವಿರದ 857 ರೂ.ಗಳನ್ನು ಜಪ್ತಿ ಮಾಡಲಾಗಿದೆ ಎಂದು ಭಾಸ್ಕರ್ ರಾವ್ ತಿಳಿಸಿದರು.

ಮತ ಎಣಿಕೆ ನಡೆಯುವ ನಗರದ ಮೌಂಟ್ ಕಾರ್ಮೆಲ್ ಕಾಲೇಜು, ಸೇಂಟ್ ಜೋಸಫ್ ಹೈಸ್ಕೂಲ್, ಆರ್.ವಿ.ಕಾಲೇಜು, ದೇವನಹಳ್ಳಿಯ ಆಕಾಶ್ ಇಂಟರ್ ನ್ಯಾಷನಲ್ ಶಾಲೆ ವ್ಯಾಪ್ತಿಯಲ್ಲೂ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು, ಸುತ್ತಮುತ್ತ ನಿಷೇಧಾಜ್ಞೆ ವಿಧಿಸಲಾಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News