ಬೆಂಗಳೂರು: ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ಎಐಎಂಎಸ್‌ಎಸ್ ಪ್ರತಿಭಟನೆ

Update: 2019-12-02 18:32 GMT

ಬೆಂಗಳೂರು, ಡಿ.2: ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳನ್ನು ತಗ್ಗಿಸಬೇಕೆಂದು ಒತ್ತಾಯಿಸಿ ಎಐಎಂಎಸ್‌ಎಸ್ ಸದಸ್ಯರು ಪ್ರತಿಭಟನೆ ನಡೆಸಿದರು.

ಸೋಮವಾರ ನಗರದ ಮೈಸೂರು ಮುಂಭಾಗ ಜಮಾಯಿಸಿದ ಎಐಎಂಎಸ್‌ಎಸ್ ಸದಸ್ಯರು, ತೆಲಂಗಾಣ ಹಾಗೂ ತಮಿಳುನಾಡಿನಲ್ಲಿ ಯುವತಿಯರ ಮೇಲೆ ನಡೆದ ಸಾಮೂಹಿಕ ಅತ್ಯಾಚಾರವೆಸಗಿ ಸುಟ್ಟು ಹಾಕಿದ ಘಟನೆ ಖಂಡಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಎಐಎಂಎಸ್‌ಎಸ್ ರಾಜ್ಯ ಕಾರ್ಯದರ್ಶಿ ಎಸ್.ಶೋಭಾ, ಮಹಾರಾಷ್ಟ್ರದಲ್ಲಿ ತಮ್ಮ ಸರಕಾರ ಉಳಿಸಿಕೊಳ್ಳಲು ರಾತ್ರಿಯೆಲ್ಲಾ ಹೆಣಗಾಡುವ ಇವರು ಹೆಣ್ಣುಮಕ್ಕಳನ್ನು ರಕ್ಷಿಸಲು ಸೂಕ್ತ ಕ್ರಮಗಳನ್ನೇಕೆ ಕೈಗೊಳ್ಳುವುದಿಲ್ಲ. ಹೈದರಾಬಾದ್ ಪ್ರಕರಣದಲ್ಲಿ ನಡೆದ ಪ್ರಕರಣ ಸಂಬಂಧ ಅಲ್ಲಿನ ಗೃಹ ಸಚಿವರ ಹೇಳಿಕೆ ಖಂಡನೀಯ ಎಂದು ದೂರಿದರು.

ಕೆಲವರು ಇಂತಹ ದುರ್ಘಟನೆಯನ್ನೂ ಕೂಡ ಕೋಮುವಾದೀಕರಣಗೊಳಿಸಲು ಪ್ರಯತ್ನಿಸುತ್ತಾರೆ. ಇದನ್ನು ವಿರೋಧಿಸಿ ಪ್ರಜ್ಞಾವಂತ ನಾಗರಿಕರು ಸರಿಯಾದ ಉತ್ತರಗಳನ್ನು ನೀಡಿದ್ದಾರೆ ಎಂದ ಅವರು, ಧರ್ಮದ ಹೆಸರಿನಲ್ಲಿ ಜನರನ್ನು ಒಡೆಯುವುದನ್ನು ಸಂಪೂರ್ಣವಾಗಿ ವಿರೋಧಿಸಿದ್ದು, ಅತ್ಯಾಚಾರಿಗಳಿಗೆ ಜಾತಿ, ಮತ, ಧರ್ಮಗಳಿಲ್ಲ. ನಮಗೆ ಬೇಕಿರುವುದು ನಮ್ಮ ಹೆಣ್ಣುಮಕ್ಕಳ ರಕ್ಷಣೆ. ಅದಕ್ಕಾಗಿಯೇ ಒಂದಾಗಿ ಹೋರಾಟ ನಡೆಸಬೇಕಾಗಿದೆ ಎಂದರು.

ಎಐಡಿಎಸ್‌ಒ ಬೆಂ.ಜಿಲ್ಲಾ ಉಪಾಧ್ಯಕ್ಷ ಸುಭಾಷ್ ಮಾತನಾಡಿ, ಹೈದರಾಬಾದ್ ಪ್ರಕರಣದಲ್ಲಿ ಆರೋಪಿಯೊಬ್ಬನ ತಾಯಿಯೇ ತನ್ನ ಮಗ ತಪ್ಪು ಎಸಗಿದ್ದರೆ ಕಠಿಣ ಕಾನೂನು ಕ್ರಮ ಜರುಗಿಸಿ ಎಂದಿದಾರೆ. ಇದೊಂದು ಸಾಮಾಜಿಕ ಸಮಸ್ಯೆ, ವೈಯಕ್ತಿಕವಲ್ಲ ಎಂದರು.

ಈ ಸಂದರ್ಭದಲ್ಲಿ ಎಐಎಂಎಸ್‌ಎಸ್ ಬೆಂ.ಜಿಲ್ಲಾ ಕಾರ್ಯದರ್ಶಿ ಶಾಂತ, ಜಯಣ್ಣ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News