85ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಎಚ್.ಎಸ್.ವೆಂಕಟೇಶಮೂರ್ತಿ ಆಯ್ಕೆ

Update: 2019-12-04 12:50 GMT

ಬೆಂಗಳೂರು, ಡಿ.4: ಕಲಬುರ್ಗಿಯಲ್ಲಿ ಫೆ.5ರಿಂದ 7ರವರೆಗೆ ನಡೆಯುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಕವಿ ಹಾಗೂ ಹಿರಿಯ ಸಾಹಿತಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಆಯ್ಕೆಯಾಗಿದ್ದಾರೆ.

ಬುಧವಾರ ನಗರದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್‌ನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಎಚ್.ಎಸ್.ವೆಂಕಟೇಶಮೂರ್ತಿಯನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. 2020ರ ಫೆ.5 ರಿಂದ 7ರವರೆಗೆ ಗುಲ್ಬರ್ಗಾ ವಿವಿ ಆವರಣದಲ್ಲಿ ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದು ಕಸಾಪ ಅಧ್ಯಕ್ಷ ಡಾ. ಮನು ಬಳಿಗಾರ್ ತಿಳಿಸಿದರು.

ಸಮ್ಮೇಳನಾಧ್ಯಕ್ಷರ ಪಟ್ಟಿಯಲ್ಲಿ ಸಾಹಿತಿಗಳಾದ ಗೊ.ರು.ಚನ್ನಬಸಪ್ಪ, ವೈದೇಹಿ, ಸಾರಾ ಅಬೂಬಕರ್, ಕುಂ.ವೀರಭದ್ರಪ್ಪ, ಜಿ.ಎಸ್. ಆಮೂರ, ದೊಡ್ಡರಂಗೇಗೌಡ, ವೀಣಾ ಶಾಂತೇಶ್ವರ, ಬಿ.ಟಿ. ಲಲಿತಾ ನಾಯಕ್, ಲತಾ ರಾಜಶೇಖರ್ ಸೇರಿದಂತೆ 10-12 ಮಂದಿಯ ಹೆಸರುಗಳು ಚರ್ಚೆಯಾದವು. ಎಲ್ಲರೂ ಯೋಗ್ಯರಾಗಿದ್ದರು. ಆದರೆ, ಕವಿತೆ, ಕಾದಂಬರಿ, ನಾಟಕ, ಕವನ, ಮಕ್ಕಳ ಸಾಹಿತ್ಯ ಸೇರಿದಂತೆ ಸಾಹಿತ್ಯದ ಎಲ್ಲಾ ಕ್ಷೇತ್ರಗಳಲ್ಲೂ ಸೇವೆ ಸಲ್ಲಿಸಿದ ಎಚ್.ಎಸ್.ವೆಂಕಟೇಶಮೂರ್ತಿ ಹೆಸರನ್ನು ಅಂತಿಮವಾಗಿ ಕಾರ್ಯಕಾರಿ ಸಮಿತಿಯು ಸೂಚಿಸಿತು. ಹೀಗಾಗಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿದೆವು ಎಂದರು.

ಸಮ್ಮೇಳನಕ್ಕೆ 12 ಕೋಟಿ ಖರ್ಚು: ಸಾಹಿತ್ಯ ಸಮ್ಮೇಳನದ ಕಾರ್ಯ ಸಿದ್ಧತೆಗಳು ಆರಂಭವಾಗಿದ್ದು, ಸಮ್ಮೇಳನಕ್ಕೆ 10 ರಿಂದ 12 ಕೋಟಿ ರೂ. ಹಣದ ಖರ್ಚನ್ನು ಅಂದಾಜಿಸಲಾಗಿದೆ. ಸರಕಾರ ಈಗಾಗಲೇ ಎರಡು ಕಂತುಗಳಲ್ಲಿ ಒಂದಷ್ಟು ಹಣ ನೀಡಿದೆ. ಉಳಿದ ಅನುದಾನಕ್ಕೆ ಯಾವುದೇ ಆತಂಕವಿಲ್ಲ. ಸುಮಾರು 1.50 ಲಕ್ಷಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಅವರು ಮಾಹಿತಿ ನೀಡಿದರು..

ಗೋಷ್ಠಿಗಳಿಗಾಗಿ ಸದಸ್ಯರ ನೇಮಕ: ಸಾಹಿತ್ಯ ಸಮ್ಮೇಳನದ ಗೋಷ್ಠಿಗಳ ಸ್ವರೂಪ ಹಾಗೂ ವಿಷಯಗಳ ಆಯ್ಕೆಗೆ ಸಮಿತಿ ರಚಿಸಲಾಗಿದೆ. ಸಾಹಿತಿಗಳಾದ ಡಾ.ವಸಂತ ಕುಷ್ಠಗಿ, ಎಸ್.ಆರ್.ವಿಜಯಶಂಕರ್, ಡಾ.ಎಚ್.ಎಲ್.ಪುಷ್ಪಾ, ಸುಬ್ಬು ಹೊಲೆಯಾರ್, ಡಾ.ರಂಗರಾಜ ವನದುರ್ಗ ಹಾಗೂ ಮಾಜಿ ಕುಲಪತಿ ಡಾ.ಚಿನ್ನಪ್ಪಗೌಡ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳಗೆ ಪೂರ್ವಭಾವಿ ಸಿದ್ಧತೆಗಳ ಬಗ್ಗೆ ಮನವರಿಕೆ ಮಾಡಲಾಗಿದೆ ಎಂದು ಅವರು ಹೇಳಿದರು.

700 ಮಳಿಗೆಗಳು: ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಮೂರು ವೇದಿಕೆಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಗುಲಬರ್ಗಾ ವಿವಿ ಆವರಣದಲ್ಲಿ ಪ್ರಧಾನ ವೇದಿಕೆ ಹಾಗೂ ಅಂಬೇಡ್ಕರ್ ಭವನ ಮತ್ತು ಮಹಾತ್ಮ ಗಾಂಧಿ ಭವನದಲ್ಲಿ ಸಮಾನಾಂತರ ವೇದಿಕೆಗಳು ಇರಲಿವೆ. ಸಮ್ಮೇಳನದಲ್ಲಿ 500 ಪುಸ್ತಕ ಮಳಿಗೆಗಳು ಹಾಗೂ 200 ವಾಣಿಜ್ಯ ಮಳಿಗೆಗಳು ಸೇರಿ ಒಟ್ಟು 700 ಮಳಿಗೆಗಳನ್ನು ತೆರೆಯಲಾಗುವುದು. ಮಹಾನಗರದಿಂದ ವಿಶ್ವವಿದ್ಯಾಲಯದವರೆಗೂ ಉಚಿತ ವಾಹನ ವ್ಯವಸ್ಥೆ ಕಲ್ಪಿಸಲು ಕೆಎಸ್ಸಾರ್ಟಿಸಿ ಜತೆ ಚರ್ಚಿಸಲಾಗಿದೆ ಎಂದು ಮನು ಬಳಿಗಾರ್ ತಿಳಿಸಿದರು.

ಪತ್ರಿಕಾ ಗೋಷ್ಟಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಕೆ.ರಂಗಪ್ಪ, ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ, ಸಾಹಿತಿ ಬಿ.ಟಿ. ಲಲಿತಾ ನಾಯಕ್, ಕಸಾಪದ ಗೌರವ ಕಾರ್ಯದರ್ಶಿ ವ.ಚ.ಚನ್ನೇಗೌಡ, ಗೌರವ ಕೋಶಾಧ್ಯಕ್ಷ ಪಿ.ಮಲ್ಲಿಕಾರ್ಜುನಪ್ಪ, ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಗೋವಾ, ಕೇರಳ, ಬೆಂಗಳೂರು ನಗರ ಜಿಲ್ಲಾ ಕಸಾಪ ಮತ್ತಿತರ ಘಟಕಗಳ ಅಧ್ಯಕ್ಷರುಗಳು ಭಾಗವಹಿಸಿದ್ದರು.

ಅಭಿನಂದನೆ: ನಾಡಿನ ಹಿರಿಯ ಕವಿ ಎಚ್.ಎಸ್.ವೆಂಕಟೇಶ ಮೂರ್ತಿ ಸಮ್ಮೇನಾಧ್ಯಕ್ಷರಾಗಿ ಆಯ್ಕೆಯಾಗಿರುವುದಕ್ಕೆ ಆರೋಗ್ಯ ಸಚಿವ ಶ್ರೀರಾಮುಲು ಅಭಿನಂದನೆ ಸಲ್ಲಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿಯೂ ಸಾಹಿತಿಗಳು, ಕನ್ನಡ ಪರ ಕಾರ್ಯಕರ್ತರು, ಸಂಘ, ಸಂಸ್ಥೆಗಳು ಅಭಿನಂದನಾ ನುಡಿಗಳನ್ನು ಬರೆದಿದ್ದಾರೆ.

ಸಮ್ಮೇಳನಾಧ್ಯಕ್ಷರ ಅಭಿಪ್ರಾಯ

85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇನಾಧ್ಯಕ್ಷನಾಗಿ ಆಯ್ಕೆಯಾಗಿರುವುದು ಕನ್ನಡ ಭಾಷೆ ಮತ್ತು ಕನ್ನಡಿಗರ ಆಶೀರ್ವಾದವಾಗಿದೆ. ಇದನ್ನು ಅತ್ಯಂತ ಪ್ರೀತಿ, ಗೌರವ, ಸಂತೋಷ ಮತ್ತು ವಿನಯದಿಂದ ಸ್ವೀಕರಿಸುತ್ತಿದ್ದೇನೆ. ಕನ್ನಡ ನಾಡು, ನುಡಿ, ಭಾಷೆ, ಸಂಸ್ಕೃತಿಗಳಲ್ಲಿ ತುರ್ತಾಗಿ ಆಗಬೇಕಾದ ಕೆಲಸಗಳೇನು ಎಂಬುದನ್ನು ಸಮ್ಮೇಳನದಲ್ಲಿ ಒತ್ತು ನೀಡಲು ನಾನು ಆಲೋಚಿಸುತ್ತಿದ್ದೇನೆ.

-ಡಾ.ಎಚ್.ಎಸ್.ವೆಂಕಟೇಶಮೂರ್ತಿ, 85ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷರು

ಕಾವ್ಯಜೀವಿ ಎಚ್.ಎಸ್.ವೆಂಕಟೇಶಮೂರ್ತಿ ಕವಿತೆ, ನಾಟಕ, ಪ್ರಬಂಧ, ಕಾದಂಬರಿ, ಮಕ್ಕಳ ಸಾಹಿತ್ಯ, ಅನುವಾದ, ವಿಮರ್ಶೆ, ಮೊದಲಾದ ಪ್ರಕಾರಗಳಲ್ಲಿ ತಮ್ಮ ಕೊಡುಗೆಯನ್ನು ಕೊಟ್ಟು ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿ ಕನ್ನಡ ಸಾಹಿತ್ಯ ವಲಯದಲ್ಲಿ ಕಾವ್ಯಜೀವಿ ಎಂದೇ ಗುರುತಿಸಿಕೊಂಡವರು. ಶಿವಮೊಗ್ಗ ಜಿಲ್ಲೆಯ ಹೋದಿಗೆರೆ ಗ್ರಾಮದಲ್ಲಿ 1944 ಜೂ. 23ರಂದು ಜನಿಸಿದ ವೆಂಕಟೇಶಮೂರ್ತಿಯವರ ತಂದೆ ನಾರಾಯಣ ಭಟ್ಟರು, ತಾಯಿ ನಾಗರತ್ನಮ್ಮ. ಪ್ರಾಥಮಿಕ ಶಿಕ್ಷಣವನ್ನು ಹೋದಿಗೆರೆ, ಹೊಳಲ್ಕೆರೆಗಳಲ್ಲಿ ಮುಗಿಸಿ, ಕಾಲೇಜಿನ ವಿದ್ಯಾಭ್ಯಾಸವನ್ನು ಚಿತ್ರದುರ್ಗದಲ್ಲಿ ಮಾಡಿದರು. ಭದ್ರಾವತಿಯಲ್ಲಿ ಡಿಪ್ಲೊಮ ಪಡೆದು ಮಲ್ಲಾಡಿ ಹಳ್ಳಿಯ ಪ್ರೌಢಶಾಲೆಯ ಕ್ರಾಫ್ಟ್ ಟೀಚರ್ ಆಗಿ ಉದ್ಯೋಗ ಆರಂಭಿಸಿದರು. ಉನ್ನತ ವ್ಯಾಸಂಗ ಮಾಡಬೇಕೆಂಬ ಬಯಕೆಯಿಂದ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿಎ, ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂಎ ಪದವಿ ಪಡೆದರು.

ಕನ್ನಡದಲ್ಲಿ ಕಥನ ಕವನಗಳು ಮಹಾಪ್ರಬಂಧ ಮಂಡಿಸಿ ಪಿಎಚ್.ಡಿ ಪದವಿಯನ್ನೂ ಪಡೆದರು. ವೆಂಕಟೇಶಮೂರ್ತಿಯವರು ಮಲ್ಲಾಡಿ ಹಳ್ಳಿಯ ಶಾಲೆಯಲ್ಲಿ ಶಿಕ್ಷಕರಾಗಿದ್ದು ಬಹು ಬೇಗ ಜನಪ್ರಿಯರಾದರು. ಇಲ್ಲಿಯ ಪರಿಸರ ಅವರ ಸಾಹಿತ್ಯದ ಓದಿಗೂ ರಚನೆಗೂ ಉತ್ತಮವಾಗಿತ್ತು. ಗುರುಗಳಾದ ನರಸಿಂಹಶಾಸ್ತ್ರಿಗಳ ಪ್ರೋತ್ಸಾಹದ ಜೊತೆಗೆ ತಾಯಿಯ ಮನೆಯಲ್ಲಿ ನಡೆಯುತ್ತಿದ್ದ ಗಮಕ ವಾಚನ, ನಾಟಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರಭಾವದಿಂದ ಕವನ ಬರೆಯಲು ಪ್ರೇರಣೆಯೊದಗಿಸಿತ್ತು. ಅದರ ಬಲದಿಂದ ತಮ್ಮ ಮೊದಲ ಕವನ ಸಂಕಲನ ಪರಿವೃತ್ತವನ್ನು ರಚಿಸಿದ ಮೂರ್ತಿಯವರು, ಅದನ್ನು ಗುರುಗಳಾದ ನರಸಿಂಹ ಶಾಸ್ತ್ರಿಗಳಿಗೇ ಅರ್ಪಿಸಿದರು. ಎಂಎ ಮತ್ತು ಪಿಎಚ್.ಡಿ ಪಡೆದ ನಂತರ ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಸುಮಾರು 30 ವರ್ಷ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ಹೋದಿಗೆರೆಯ ಹಳ್ಳಿಯ ಪರಿಸರವೇ ನನ್ನ ವ್ಯಕ್ತಿತ್ವವನ್ನು ರೂಪಿಸಿ, ಸೃಜನಶೀಲತೆಯ ಸ್ವರೂಪದ ಮೇಲೆ ಗಾಢವಾದ ಪ್ರಭಾವ ಬೀರಿದೆ ಎನ್ನುವ ವೆಂಕಟೇಶಮೂರ್ತಿಯವರು, ಕವಿ ನಿಸಾರ್ ಅಹಮದ್‌ರವರನ್ನು ತಮ್ಮ ಮೊದಲ ಕಾವ್ಯ ಗುರು ಎಂದು ಕೃತಜ್ಞತೆಯಿಂದ ನೆನೆಯುತ್ತಾರೆ.

ವೆಂಕಟೇಶಮೂರ್ತಿಯವರು ಇಲ್ಲಿಯವರೆಗೆ 17 ಕವನ ಸಂಕಲನಗಳನ್ನು, 7 ನಾಟಕಗಳನ್ನು, 4 ಮಕ್ಕಳ ಸಾಹಿತ್ಯವನ್ನು, 4 ಕಾದಂಬರಿಗಳನ್ನು, 4 ಸಾಹಿತ್ಯ ವಿಮರ್ಶಾ ಕೃತಿಗಳನ್ನು, 2 ಕಥಾ ಸಂಕಲನಗಳನ್ನು, 5 ಜೀವನ ಚರಿತ್ರೆಗಳನ್ನು ಹಾಗೂ ಒಂದೊಂದು ಸಾಹಿತ್ಯ ಚರಿತ್ರೆ, ಅನುವಾದ ಕಥನ, ಸಂಪಾದನೆ, ಸಂಶೋಧನಾ ಪ್ರಬಂಧಗಳನ್ನೂ ರಚಿಸಿದ್ದಾರೆ. ಬಿಡುವಿಲ್ಲದ ಬರವಣಿಗೆಯ ನಡುವೆ ಚಲನಚಿತ್ರ ಮತ್ತು ರಂಗಭೂಮಿಯೊಡನೆ ನಿರಂತರ ಸಂಪರ್ಕವಿರಿಸಿಕೊಂಡಿರುವ ವೆಂಕಟೇಶಮೂರ್ತಿಯವರು, ಚಿನ್ನಾರಿಮುತ್ತ, ಕೊಟ್ರೇಶಿಯ ಕನಸು, ಕ್ರೌರ್ಯ, ಕೊಟ್ಟ, ಮತದಾನ ಚಲನಚಿತ್ರಗಳಿಗೆ ಹಾಡುಗಳು ಹಾಗೂ ಸಂಭಾಷಣೆಯನ್ನು ರಚಿಸಿದ್ದಾರೆ. ದೂರದರ್ಶನ ಧಾರಾವಾಹಿಗಳಾದ ಯಾವ ಜನ್ಮದ ಮೈತ್ರಿ, ಸವಿಗಾನ, ಮುಕ್ತಗಳಿಗೆ ಶೀರ್ಷಿಕೆ ಗೀತೆಯನ್ನು ರಚಿಸಿ ಜನಪ್ರಿಯರಾಗಿದ್ದಾರೆ. ಇದಲ್ಲದೆ ಬಣ್ಣದ ಹಕ್ಕಿ, ಮಕ್ಕಳ ಗೀತೆಗಳು, ಅನಂತ ನಮನ, ತೂಗುಮಂಚ, ಸುಳಿಮಿಂಚು, ಅಪೂರ್ವ ರತ್ನ, ಭಾವಭೃಂಗ-ಭಾವಗೀತೆಗಳ ಧ್ವನಿ ಸುರಳಿಗಳನ್ನೂ ಹೊರತಂದಿದ್ದಾರೆ. ವೆಂಕಟೇಶಮೂರ್ತಿಯವರಿಗೆ 5 ಬಾರಿ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ದಿನಕರ ದೇಸಾಯಿ ಪ್ರತಿಷ್ಠಾನ ಪ್ರಶಸ್ತಿ, ಬಿ.ಎಚ್. ಶ್ರೀಧರ ಪ್ರಶಸ್ತಿ, ಆರ್ಯಭಟ ಸಾಹಿತ್ಯ ಪ್ರಶಸ್ತಿ, ಮೈಸೂರು ಅನಂತಸ್ವಾಮಿ ಪ್ರಶಸ್ತಿಗಳು ಸೇರಿ ಇನ್ನೂ ಅನೇಕ ಪ್ರಶಸ್ತಿಗಳು ಇವರನ್ನು ಹುಡುಕಿಕೊಂಡು ಬಂದು ತಮ್ಮ ಘನತೆಯನ್ನು ಹೆಚ್ಚಿಸಿಕೊಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News