‘ಜೇನಿನ ಬಲೆ’ಯೊಳಗೆ ರಾಜಕೀಯ

Update: 2019-12-04 18:32 GMT

ರಾಜಕೀಯ ದಿನ ದಿನಕ್ಕೆ ಪಾತಾಳಕ್ಕಿಳಿಯುತ್ತಿದೆ. ಒಂದು ಕಾಲದಲ್ಲಿ ಮತದಾರರಿಗೆ ಹಣ, ಹೆಂಡಗಳನ್ನು ಸುರಿದು ಮತಗಳನ್ನು ಬಾಚುವ ಸುದ್ದಿಗಳು ಪತ್ರಿಕೆಗಳ ಮುಖಪುಟಗಳಲ್ಲಿ ವರದಿಯಾಗುತ್ತಿದ್ದವು. ಜೊತೆಗೆ ಮತಗಟ್ಟೆಗಳ ಅಪಹರಣ, ಮತಪೆಟ್ಟಿಗೆಗಳ ಅಪಹರಣಗಳೂ ನಡೆಯುತ್ತಿದ್ದವು. ಆದರೆ ಇಂದು ಕಾಲ ಬದಲಾಗಿದೆ. ತಂತ್ರಜ್ಞಾನಗಳು ಆಧುನಿಕವಾಗುತ್ತಿದ್ದಂತೆಯೇ ಅಕ್ರಮಗಳೂ ಆಧುನಿಕಗೊಂಡಿವೆ. ಇಂದು ಸರಕಾರ ರಚಿಸಲು ಮತದಾನದ ಸಂದರ್ಭದಲ್ಲಿ ಮತದಾರರಿಗೆ ಹಣ ಹೆಂಡ ಸುರಿಯುವ ಅಗತ್ಯ ರಾಜಕಾರಣಿಗಳಿಗಿಲ್ಲ. ಹಣ, ಹೆಂಡಗಳ ದರ್ಬಾರು ಏನಿದ್ದರೂ ಫಲಿತಾಂಶ ಹೊರ ಬಿದ್ದ ಬಳಿಕ. ಮತದಾರರಿಗೆ ಸುರಿಯುವ ಹಣವನ್ನು, ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗೆ ಸುರಿದು, ಆತನನ್ನು ರೆಸಾರ್ಟ್‌ನಲ್ಲಿಟ್ಟು ಬೇಕಾದಷ್ಟು ಹೆಂಡವನ್ನೂ ಕೊಟ್ಟರೆ ಒಂದೇ ಗಂಟಿನಲ್ಲಿ ಮತಗಳನ್ನು ಕೊಂಡುಕೊಳ್ಳುವ ಹೊಸ ತಂತ್ರ ಆರಂಭವಾಗಿದೆ. ಪ್ರತಿ ಮತದಾರನನ್ನು ಹಣ ಕೊಟ್ಟು ಒಲಿಸುವುದಕ್ಕಿಂತ, ಗೆದ್ದ ಅಭ್ಯರ್ಥಿಯನ್ನೇ ಒಲಿಸುವುದು ಹೆಚ್ಚು ಸುಲಭ ಎನ್ನುವುದನ್ನು ಪಕ್ಷಗಳು ಕಂಡುಕೊಂಡಿವೆ. ಆದುದರಿಂದ, ಸದ್ಯಕ್ಕೆ ಯಾವ ಪಕ್ಷ ಶಾಸಕರನ್ನು ಕೊಂಡು ಕೊಳ್ಳುವ ಆರ್ಥಿಕ ಶಕ್ತಿಯನ್ನು ಹೊಂದಿದೆಯೋ ಅದು ಸುಲಭದಲ್ಲಿ ಸರಕಾರ ರಚಿಸಬಹುದು.

ಇತ್ತೀಚಿನ ಕರ್ನಾಟಕದ ರಾಜಕೀಯ ಬೆಳವಣಿಗೆಗಳೇ ಇದಕ್ಕೆ ಸಾಕ್ಷಿ. ಇಡೀ ದೇಶ ಆರ್ಥಿಕವಾಗಿ ಕುಸಿಯುತ್ತಿದ್ದರೂ, ಮಾರುಕಟ್ಟೆಯಲ್ಲಿ ಶಾಸಕರನ್ನು ಕೋಟಿ ಕೋಟಿ ಕೊಟ್ಟು ಕೊಂಡು ಕೊಳ್ಳುವ ಗ್ರಾಹಕರು ಇನ್ನೂ ಇದ್ದಾರೆ. ಅಂದರೆ ರಾಜಕೀಯ ಪಕ್ಷಗಳು ಇನ್ನೂ ಶ್ರೀಮಂತವಾಗಿಯೇ ಇವೆ ಎನ್ನುವುದನ್ನು ಇದು ಹೇಳುತ್ತದೆ. ಇಷ್ಟೊಂದು ದುಡ್ಡು ಯಾವ ಮಾರ್ಗದಲ್ಲಿ ಬಂತು ಎನ್ನುವುದನ್ನು ಕೇಳುವುದು ಮಾತ್ರ ಅಪರಾಧವಾಗಿದೆ. ‘ನೋಟು ನಿಷೇಧ’ ಸಂಪೂರ್ಣವಾಗಿ ವಿಫಲವಾಗಿದ್ದರೂ ಒಂದು ಪಕ್ಷವನ್ನು ವಿಶ್ವದಲ್ಲೇ ಅತಿ ಶ್ರೀಮಂತ ಪಕ್ಷವಾಗಿಸುವಲ್ಲಿ ಯಶಸ್ವಿಯಾಗಿರುವುದನ್ನು ನಾವು ಗಮನಿಸಬೇಕಾಗಿದೆ ಮತ್ತು ಅದೇ ಪಕ್ಷ ಇಂದು ಶಾಸಕರನ್ನು ಕೊಂಡುಕೊಳ್ಳುವಲ್ಲಿ ಮುಂಚೂಣಿಯಲ್ಲಿದೆ. ಇನ್ನು ಮತಗಟ್ಟೆ ಅಪಹರಣ, ಮತ ಪೆಟ್ಟಿಗೆ ಅಪಹರಣಗಳೂ ಹೊಸ ರೂಪವನ್ನು ಪಡೆದುಕೊಂಡಿವೆ. ಮತಗಟ್ಟೆ, ಮತಪೆಟ್ಟಿಗೆಗಳ ಅಪಹರಣವನ್ನು ತಡೆಯಲೆಂದು ಇವಿಎಂನ್ನು ತರಲಾಯಿತು. ಆದರೆ ಇವಿಎಂನ್ನೇ ತಿರುಚಿ ತಮಗೆ ಬೇಕಾದ ಸಂಸದರನ್ನು ವಿವಿಧ ಕಾರ್ಪೊರೇಟ್ ಶಕ್ತಿಗಳು ಆಯ್ಕೆ ಮಾಡುತ್ತಿವೆ ಎನ್ನುವ ಆರೋಪದ ಕಾಲ ಇದು. ಅಂದರೆ ಈಗ ಮತಪೆಟ್ಟಿಗೆ ಅಪಹರಣಕ್ಕೆ ಗೂಂಡಾಗಳ ಅಗತ್ಯವಿಲ್ಲ. ಕೆಲವು ನುರಿತ ತಂತ್ರಜ್ಞಾನಿಗಳಷ್ಟೇ ಸಾಕು. ಅಂದರೆ ಗೂಂಡಾಗಳು ಬೇರೆ ಬೇರೆ ವೇಷದಲ್ಲಿ ಚುನಾವಣ ಕಣವನ್ನು ಆವರಿಸಿಕೊಂಡಿದ್ದಾರೆ. ಅವರೀಗ ಸಮಾಜದಲ್ಲಿ ಸಭ್ಯರೂ, ಜಾಣರೂ, ಮೇಧಾವಿಗಳು ಎಂದೂ ಗುರುತಿಸಿಕೊಳ್ಳುತ್ತಿದ್ದಾರೆ.

ವಿಶ್ವದ ಅತಿ ದೊಡ್ಡ ಪ್ರಜಾಸತ್ತೆಯೆಂದು ಭಾರತ ಗುರುತಿಸಿಕೊಳ್ಳುತ್ತಿದೆ. ಪ್ರಜಾಸತ್ತೆಯ ಅಡಿಗಲ್ಲೇ ಚುನಾವಣೆ. ಆ ಚುನಾವಣೆಯ ಕುರಿತಂತೆಯೇ ಜನರಲ್ಲಿ ಅನುಮಾನಗಳಿವೆ. ಚುನಾವಣೆ ನಡೆದ ಬೆನ್ನಿಗೇ ಮಾಧ್ಯಮಗಳು ಸಮೀಕ್ಷೆಯ ಹೆಸರಿನಲ್ಲಿ ಒಂದು ಪಕ್ಷದ ಪರವಾಗಿ ಫಲಿತಾಂಶವನ್ನು ಘೋಷಿಸುತ್ತದೆ. ಅಂದರೆ ಆ ಮೂಲಕ ಜನರನ್ನು ಮಾನಸಿಕವಾಗಿ ಫಲಿತಾಂಶಕ್ಕೆ ಸಿದ್ಧಪಡಿಸಲಾಗುತ್ತದೆ. ಬಳಿಕ ಅಧಿಕೃತ ಚುನಾವಣಾ ಫಲಿತಾಂಶವನ್ನು ಘೋಷಿಸಲಾಗುತ್ತದೆ. ಆದರೆ ಈ ಫಲಿತಾಂಶದ ಬಗ್ಗೆ ಹೆಚ್ಚಿನ ಪಕ್ಷಗಳೆಲ್ಲ ತಮ್ಮ ಅನುಮಾನಗಳನ್ನು ವ್ಯಕ್ತಪಡಿಸುತ್ತವೆಯಾದರೂ ಅದರ ಕುರಿತಂತೆ ಚುನಾವಣಾ ಆಯೋಗ ತಲೆಕೆಡಿಸಿಕೊಳ್ಳಲು ಹೋಗುವುದೇ ಇಲ್ಲ. ಇಂದಿಗೂ ಈ ದೇಶವನ್ನು ಆಳುತ್ತಿರುವ ಪಕ್ಷ ನಿಜಕ್ಕೂ ಜನಬೆಂಬಲದಿಂದ ಆರಿಸಿ ಬಂದಿದೆಯೋ ಅಥವಾ ಇವಿಎಂ ತಿರುಚುವಿಕೆಯ ಮೂಲಕ ಅಧಿಕಾರಕ್ಕೆ ಬಂದಿದೆಯೋ ಎನ್ನುವ ಅನುಮಾನ ಉಳಿದೇ ಬಿಟ್ಟಿದೆ. ಈ ಸಂಶಯವನ್ನು ನಿವಾರಿಸುವುದು ತನ್ನ ಕರ್ತವ್ಯ ಎನ್ನುವುದು ಚುನಾವಣಾ ಆಯೋಗ ಮರೆತು ಬಿಟ್ಟಿದೆ. ವಿರೋಧ ಪಕ್ಷಗಳು ಇವಿಎಂ ವಿರುದ್ಧ ಧ್ವನಿಯೆತ್ತಿದಾಗೆಲ್ಲ ಆಯೋಗ ಅವರನ್ನು ಬಾಯಿ ಮುಚ್ಚಿಸಿದೆಯೇ ಹೊರತು, ಅವರ ಸಂಶಯ ನಿವಾರಣೆ ಮಾಡಲು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಎಲ್ಲಿಯವರೆಗೆ ಆಯೋಗ ಇದಕ್ಕೆ ಕ್ರಮತೆಗೆದುಕೊಳ್ಳದೆ ‘ಇವಿಎಂ ತಿರುಚಲಾಗುವುದಿಲ್ಲ’ ಎಂಬ ಹೇಳಿಕೆಗೆ ಜೋತು ಬಿದ್ದಿರುತ್ತದೆಯೋ ಅಲ್ಲಿಯವರೆಗೆ ಇವಿಎಂನ್ನು ಅನುಮಾನಿಸುವುದು ಪ್ರಜ್ಞಾವಂತರಿಗೆ ಅನಿವಾರ್ಯವಾಗಿದೆ.

 ಹಣ, ಹೆಂಡ, ತಂತ್ರಜ್ಞಾನಗಳ ಬಳಿಕ ಇದೀಗ ರಾಜಕೀಯದೊಳಗೆ ಇನ್ನೊಂದು ಅನೈತಿಕ ತಂತ್ರ ಕಾಲಿರಿಸಿದೆ. ಅದರ ಹೆಸರೇ ‘ಹನಿ ಟ್ರಾಪ್’. ಒಂದು ರೀತಿಯಲ್ಲಿ ಇದು ಜೇಡರ ಬಲೆಯಲ್ಲ ‘ಜೇನಿನ ಬಲೆ’. ಹಣಕ್ಕೆ ಒಲಿಯದ, ಬಗ್ಗದ ಶಾಸಕರನ್ನು, ಸಂಸದರನ್ನು ತಮ್ಮೆಡೆಗೆ ಸೇರಿಸಲು ಪಕ್ಷಗಳು ಹೆಣ್ಣನ್ನು ಬಹಿರಂಗವಾಗಿ ಬಳಕೆ ಮಾಡುವುದಕ್ಕೆ ತೊಡಗಿವೆ. ಇಲ್ಲಿ ಹೆಣ್ಣಿನ ಬಲೆಗೆ ಬಿದ್ದ ರಾಜಕಾರಣಿ ಮಾತ್ರವಲ್ಲ, ಆತನನ್ನು ಈ ಬಲೆಗೆ ಕೆಡವಲು ಹೆಣ್ಣನ್ನು ದುರುಪಯೋಗ ಪಡಿಸಿಕೊಂಡ ರಾಜಕಾರಣಿಯೂ ನೈತಿಕತೆಯನ್ನು ಕಳೆದುಕೊಂಡವನೇ ಆಗಿದ್ದಾನೆ. ಇಲ್ಲಿ ಹೆಣ್ಣು, ಒಂದು ವಸ್ತುವಾಗಿ ಬಳಕೆಯಾಗುತ್ತಿದ್ದಾಳೆ. ಇತ್ತೀಚಿನ ದಿನಗಳಲ್ಲಿ ರಾಜಕೀಯದಲ್ಲಿ ಹೆಣ್ಣನ್ನು ಮುಂದಿಟ್ಟು ‘ಬ್ಲಾಕ್‌ಮೇಲ್’ ರಾಜಕಾರಣ ಹೆಚ್ಚಾಗುತ್ತಿದೆ. ಇತ್ತೀಚೆಗಷ್ಟೇ ಮಧ್ಯಪ್ರದೇಶದಲ್ಲಿ ಹನಿಟ್ರಾಪ್ ಬಹಿರಂಗವಾಯಿತು. ಹಲವು ಪ್ರಮುಖ ರಾಜಕಾರಣಿಗಳು ಈ ಹನಿಟ್ರಾಪ್‌ಗೆ ಬಲಿಯಾಗಿ, ಹೊರಗೆ ಹೇಳಲು ಆಗದೆ, ಮುಚ್ಚಿಡಲೂ ಆಗದೆ ಒದ್ದಾಡಿದ್ದಾರೆ. ಕೆಲವು ಅಧಿಕಾರಿಗಳನ್ನು ಕೂಡ ಈ ಹನಿಟ್ರಾಪ್‌ಗೆ ಕೆಡವಿ ತಮ್ಮ ಅಕ್ರಮಗಳನ್ನು ಸಕ್ರಮಗೊಳಿಸಿದ ಉದಾಹರಣೆಗಳಿವೆ. ಕೆಲವು ಪೊಲೀಸ್ ಅಧಿಕಾರಿಗಳು ನಡೆಸಿದ ಗಂಭೀರ ತನಿಖೆಯಿಂದ ಪ್ರಕರಣ ಬೆಳಕಿಗೆ ಬಂತು. ರಾತ್ರೋರಾತ್ರಿ ಹಲವು ತರುಣಿಯರನ್ನು, ಅವರ ಬ್ರೋಕರ್‌ಗಳನ್ನು ಪೊಲೀಸ್ ಅಧಿಕಾರಿಗಳು ಬಂಧಿಸಿದರು. ಆದರೆ ಇವರನ್ನು ಬಳಕೆ ಮಾಡಿದ ಮತ್ತು ಅನೈತಿಕತೆಗೆ ಬಲಿಯಾದ ರಾಜಕಾರಣಿಗಳನ್ನು ಸಂಪೂರ್ಣ ರಕ್ಷಿಸಲಾಯಿತು.

ಬೇಹುಗಾರರು ಈ ರೀತಿಯಲ್ಲಿ ಹನಿಟ್ರಾಪ್‌ಗಳನ್ನು ನಡೆಸಿ ದೇಶದ ಭದ್ರತಾ ವಿಷಯಗಳನ್ನು ತಮ್ಮದಾಗಿಸಿಕೊಳ್ಳುವುದನ್ನು ನಾವು ಮಾಧ್ಯಮಗಳಲ್ಲಿ ಓದಿರುತ್ತೇವೆ. ಹಲವು ಸೇನಾಧಿಕಾರಿಗಳು, ಸೈನಿಕರೂ ಇದರ ಬಲಿಪಶುಗಳಾಗಿದ್ದಾರೆ. ಆದರೆ ಇಂದು ರಾಜಕಾರಣದಲ್ಲಿ ಇದು ಅತ್ಯಂತ ಅಸಹ್ಯ ರೀತಿಯಲ್ಲಿ ಇದು ವಿಸ್ತರಿಸಿಕೊಳ್ಳುತ್ತಿದೆ. ಒಂದು ಸರಕಾರವೇ ಹೆಣ್ಣಿನ ದೇಹದ ಮೇಲೆ ಕಟ್ಟಲ್ಪಡುವುದು ಪ್ರಜಾಸತ್ತೆಯ ಅಣಕವೇ ಸರಿ. ಕರ್ನಾಟಕದಲ್ಲಿ ಇತ್ತೀಚೆಗೆ ಬಿಜೆಪಿಯ ಶಾಸಕರೊಬ್ಬರನ್ನು ಇದೇ ರೀತಿ ಹನಿಟ್ರಾಪ್‌ಗೆ ಬೀಳಿಸಲಾಗಿತ್ತು. ಅಷ್ಟೇ ಅಲ್ಲ, ಅವರು ಉಪಮುಖ್ಯಮಂತ್ರಿ ಸ್ಥಾನಕ್ಕೆ ಸ್ಪರ್ಧಿಯಾಗುತ್ತಾರೆ ಎಂದಾಗ ಆ ಆಡಿಯೊವನ್ನು ಬಹಿರಂಗಗೊಳಿಸಲಾಯಿತು. ಅದನ್ನು ಬಹಿರಂಗಗೊಳಿಸುವುದರ ಹಿಂದೆ ಬಿಜೆಪಿ ನಾಯಕರೇ ಇದ್ದರು ಎನ್ನುವುದು ಇನ್ನೊಂದು ವಿಶೇಷ. ಇದೀಗ ಉಪಚುನಾವಣೆ ನಡೆಯುತ್ತಿರುವ ಹೊತ್ತಿನಲ್ಲೇ ‘ಅನರ್ಹ ಶಾಸಕ’ರ ಕಾಮಲೀಲೆಗಳು ಒಂದೊಂದಾಗಿ ಆಡಿಯೊ, ವೀಡಿಯೊ ಮೂಲಕ ಹೊರ ಬೀಳುತ್ತಿವೆ. ಈ ವೀಡಿಯೊಗಳನ್ನು, ಆಡಿಯೋಗಳನ್ನು ನಿರ್ಮಿಸಿದವರು ಯಾರು? ಮತ್ತು ಇದನ್ನು ಚುನಾವಣೆಯ ಹೊತ್ತಿನಲ್ಲಿ ಬಿಡುಗಡೆ ಮಾಡಿದವರು ಯಾರು? ಎನ್ನುವುದು ಮಾತ್ರ ನಿಗೂಢವಾಗಿದೆ. ಕೆಲವು ಆಡಿಯೊಗಳು ಅನರ್ಹರು ರೆಸಾರ್ಟ್‌ನಲ್ಲಿ ಇರುವ ಸಂದರ್ಭದಲ್ಲಿ ಮಾಡಿರುವುದು. ಬಿಜೆಪಿಯ ಕೆಲವು ನಾಯಕರು ಮತ್ತು ವಿರೋಧಪಕ್ಷದ ನಾಯಕರು ಜಂಟಿಯಾಗಿ ಇದರ ಹಿಂದಿದ್ದಾರೆ ಎಂಬ ಆರೋಪಗಳಿವೆ. ಅನರ್ಹ ಶಾಸಕರಿಗೆ ಟಿಕೆಟ್ ನೀಡಿದ ಆಕ್ರೋಶದಲ್ಲಿ ಬಿಜೆಪಿಯೊಳಗಿರುವ ಅತೃಪ್ತ ಟಿಕೆಟ್ ಆಕಾಂಕ್ಷಿಗಳೇ ಇದನ್ನು ಬಿಡುಗಡೆಗೊಳಿಸಿದ್ದಾರೆ ಎನ್ನಲಾಗುತ್ತಿದೆ.

ಆದರೆ ಈ ರಾಜಕೀಯ ತಂತ್ರದಲ್ಲಿ ಒಂದು ಸರಕಾಗಿ ಹೆಣ್ಣು ಅತ್ಯಂತ ಅಶ್ಲೀಲವಾಗಿ ಬಳಕೆಯಾಗಿದ್ದಾಳೆ. ಹೆಣ್ಣಿನೊಂದಿಗೆ ರಾಜಕಾರಣಿಯೊಬ್ಬ ಅತ್ಯಂತ ಅಶ್ಲೀಲವಾಗಿ ಮಾತನಾಡುವುದು ಎಷ್ಟು ಹೀನಾಯವಾಗಿದೆಯೆಂದರೆ, ರಾಜಕೀಯವೆನ್ನುವುದು ವೇಶ್ಯಾವೃತ್ತಿಗಿಂತಲೂ ಕೀಳು ಎಂದು ಜನರು ಭಾವಿಸುವಂತಾಗಿದೆ. ಯಾಕೆಂದರೆ, ಹನಿಟ್ರಾಪ್‌ನಲ್ಲಿ ಬಳಕೆಯಾಗುವ ಹೆಣ್ಣು ಅಸಹಾಯಕತೆ, ಅನಿವಾರ್ಯಗಳಿಂದ ಇಂತಹ ಕೃತ್ಯಕ್ಕೆ ಇಳಿಯುತ್ತಾಳೆ. ಅದರ ಹಿಂದೆಯೂ ಒಬ್ಬ ಪುರುಷನೇ ಇರುತ್ತಾನೆ. ವೇಶ್ಯಾವೃತ್ತಿಗೆ ಪರ್ಯಾಯ ಪದವಾಗಿ ರಾಜಕಾರಣ ರೂಪುಗೊಳ್ಳುತ್ತಿದೆ. ಇಂದು ಹನಿಟ್ರಾಪ್‌ಗೆ ಬಲಿಯಾದ ರಾಜಕಾರಣಿಯ ಅಸಹ್ಯ ಮಾತುಗಳನ್ನು ಕೇಳಿ ಅವನ ಮುಖಕ್ಕೆ ಜನರು ಉಗುಳುತ್ತಿದ್ದಾರೆ. ಇದೇ ಸಂದರ್ಭದಲ್ಲಿ ತನ್ನ ರಾಜಕೀಯ ದುರುದ್ದೇಶಕ್ಕಾಗಿ ಹೆಣ್ಣನ್ನು ಬಳಕೆ ಮಾಡಿದ ರಾಜಕಾರಣಿಗಳಿಗೂ ಉಗಿಯಬೇಕಾಗಿದೆ. ಮುಂದಿನ ದಿನಗಳಲ್ಲಿ ಚುನಾವಣೆಯೆಂದರೆ ಹೆಣ್ಣಿನ ವಸ್ತ್ರಾಪಹರಣಕ್ಕೆ ಇನ್ನೊಂದು ಹೆಸರಾದೀತು. ಇಂತಹ ರಾಜಕಾರಣಿಗಳಿಂದ ರಚಿಸಲಾಗುವ ಸರಕಾರಕ್ಕೆ, ಸಮಾಜದಲ್ಲಿ ನಡೆಯುವ ಅತ್ಯಾಚಾರಗಳನ್ನು ತಡೆಯುವ ನೈತಿಕ ಶಕ್ತಿ ಇರುವುದು ಹೇಗೆ ಸಾಧ್ಯ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News