ನಾನು ಈರುಳ್ಳಿ ಹೆಚ್ಚು ತಿನ್ನುವುದಿಲ್ಲ: ಲೋಕಸಭೆಯಲ್ಲಿ ನಿರ್ಮಲಾ ಸೀತಾರಾಮನ್

Update: 2019-12-05 05:29 GMT

ಹೊಸದಿಲ್ಲಿ, ಡಿ.5: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬುಧವಾರ ಲೋಕಸಭೆಯಲ್ಲಿ ದೇಶದಲ್ಲಿ ಹೆಚ್ಚುತ್ತಿರುವ ಈರುಳ್ಳಿ ಬೆಲೆಗಳ ಕುರಿತು ಮಾತನಾಡುತ್ತಾ, ಈರುಳ್ಳಿ-ಬೆಳ್ಳುಳ್ಳಿಯನ್ನು ಸ್ವತಃ ಹೆಚ್ಚು ಸೇವಿಸುವುದಿಲ್ಲ ಎಂದು ಹೇಳಿದರು.

"ನಾನು ಈರುಳ್ಳಿ-ಬೆಳ್ಳುಳ್ಳಿಯನ್ನು ಹೆಚ್ಚು ತಿನ್ನುವುದಿಲ್ಲ, ಆದ್ದರಿಂದ ಚಿಂತಿಸಬೇಡಿ. ನಾನು ಈರುಳ್ಳಿಯೊಂದಿಗೆ ಹೆಚ್ಚು ಸಂಬಂಧವಿಲ್ಲದ ಕುಟುಂಬದಿಂದ ಬಂದಿದ್ದೇನೆ" ಎಂದು ಸೀತಾರಾಮನ್ ಕೆಲವು ವಿಪಕ್ಷದ ಸದಸ್ಯರು ಈರುಳ್ಳಿ ದರ ಏರಿಕೆ ವಿಚಾರ ಎತ್ತಿ ಅಡ್ಡಿಪಡಿಸಿದ ಸಮಯದಲ್ಲಿ ಪ್ರತಿಕ್ರಿಯೆ ನೀಡಿದರು.

ದೇಶದಲ್ಲಿ ಹೆಚ್ಚುತ್ತಿರುವ ಈರುಳ್ಳಿ ಬೆಲೆಗಳ ಬಿಕ್ಕಟ್ಟನ್ನು ಪರಿಹರಿಸಲು ಸರಕಾರ ಕ್ರಮ ಕೈಗೊಂಡಿದೆ ಎಂದರು.

ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಸಂಸದ ಸುಪ್ರಿಯಾ ಸುಳೆ ಅವರು ಈರುಳ್ಳಿ ದರ ಏರಿಕೆಯ ವಿಚಾರವನ್ನು ಎತ್ತಿದರು. "ಈರುಳ್ಳಿ ಉತ್ಪಾದನೆಯು ಏಕೆ ಕಡಿಮೆಯಾಗಿದೆ? ನಾವು ಅಕ್ಕಿ ಮತ್ತು ಹಾಲು ಮತ್ತು ಇತರ ಅನೇಕ ಉತ್ಪನ್ನಗಳನ್ನು ರಫ್ತು ಮಾಡುತ್ತೇವೆ. ಈರುಳ್ಳಿ ಬೆಳೆಗಾರ ಸಣ್ಣ ರೈತ ಮತ್ತು ಅವನನ್ನು ನಿಜವಾಗಿಯೂ ರಕ್ಷಿಸಬೇಕಾಗಿದೆ" ಎಂದು ಸುಳೆ ಹೇಳಿದರು.

ಪಶ್ಚಿಮ ಬಂಗಾಳದ ವಿವಿಧ ಮಾರುಕಟ್ಟೆಗಳಲ್ಲಿ ಈರುಳ್ಳಿ ಬೆಲೆ ಕೆ.ಜಿ.ಗೆ 140 ರೂ.ಗೆ ಏರಿದರೆ, ಹೈದರಾಬಾದ್‌ನಲ್ಲಿ ಪ್ರತಿ ಕೆ.ಜಿ.ಗೆ 150 ರೂ. ಈರುಳ್ಳಿ ಬೆಲೆ ಗಗನಕ್ಕೇರಿರುವುದರಿಂದ ಈರುಳ್ಳಿ ಕಳ್ಳತನವೂ ದೇಶದ ವಿವಿಧ ಭಾಗಗಳಿಂದ ವರದಿಯಾಗಿದೆ. ಇತ್ತೀಚೆಗಷ್ಟೇ, ಮಧ್ಯಪ್ರದೇಶದ ಮಾಂಡ್‌ಸೌರ್‌ನ ರೈತ 30,000 ರೂ. ಮೌಲ್ಯದ  ಈರುಳ್ಳಿ ತನ್ನ ಹೊಲದಿಂದ ಕಳ್ಳತನವಾಗಿದೆ  ಎಂದು ದೂರು ನೀಡಿದ್ದಾರೆ.

ಈರುಳ್ಳಿಯ ಬೆಲೆ ಏರಿಕೆಯ ಆತಂಕದ ಮಧ್ಯೆ, ಸರ್ಕಾರವು ಮಂಗಳವಾರ ಸರಕುಗಳಿಗೆ ಅನುಮತಿಸುವ ಸ್ಟಾಕ್ ಮಿತಿಗಳನ್ನು ತಕ್ಷಣದಿಂದ ಜಾರಿಗೆ ತಂದಿದೆ. ಈಜಿಪ್ಟ್‌ನಿಂದ 6,090 ಮೆ.ಟನ್ ಜೊತೆಗೆ ಟರ್ಕಿಯಿಂದ 11,000 ಮೆಟ್ರಿಕ್ ಟನ್ (ಎಂಟಿ) ಈರುಳ್ಳಿಯನ್ನು ಆಮದು ಮಾಡಿಕೊಳ್ಳುವುದಾಗಿ ಕೇಂದ್ರ ಪ್ರಕಟಿಸಿದೆ. ಡಿಸೆಂಬರ್ ಎರಡನೇ ವಾರದಲ್ಲಿ ಈಜಿಪ್ಟ್‌ನಿಂದ ಭಾರತಕ್ಕೆ ಬರಲಿದ್ದು, ಟರ್ಕಿಯಿಂದ ಈರುಳ್ಳಿ 2020 ರ ಜನವರಿಯಲ್ಲಿ ತಲುಪಲಿದೆ.

ದೇಶೀಯ ಪೂರೈಕೆಯನ್ನು ಸುಧಾರಿಸಲು ಕಳೆದ ತಿಂಗಳು ಕೇಂದ್ರ ಸಚಿವ ಸಂಪುಟ 1.2 ಲಕ್ಷ ಟನ್ ಈರುಳ್ಳಿ ಆಮದು ಮಾಡಿಕೊಳ್ಳಲು ಅನುಮೋದನೆ ನೀಡಿತು. ರಫ್ತುಗಳನ್ನು ಈಗಾಗಲೇ ನಿಷೇಧಿಸಲಾಗಿದೆ ಮತ್ತು ಸಗಟು ವ್ಯಾಪಾರಿಗಳು ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ ಅನಿರ್ದಿಷ್ಟ ಅವಧಿಯವರೆಗೆ ಸ್ಟಾಕ್-ಹೋಲ್ಡಿಂಗ್‌ಗೆ ಮಿತಿಯನ್ನು ವಿಧಿಸಲಾಗಿದೆ.

ಇದೀಗ ಈರುಳ್ಳಿಯ ಧಾರಣೆ ಭಾರತದ ಹೆಚ್ಚಿನ ನಗರಗಳಲ್ಲಿ ಕೆಜಿಗೆ 100 ರೂ. ದಾಟಿದೆ..

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News