ಸಂವಿಧಾನದ ಆಶಯಗಳು ಸಮ ಸಮಾಜ ನಿರ್ಮಿಸುತ್ತದೆ: ಎಚ್.ಎನ್.ನಾಗಮೋಹನ್‌ ದಾಸ್

Update: 2019-12-05 17:01 GMT

ಬೆಂಗಳೂರು, ಡಿ.5: ಸಂವಿಧಾನದ ಓದಿನಿಂದ ನಾವು ಎದುರಿಸುತ್ತಿರುವ ಸವಾಲುಗಳನ್ನು ಹಿಮ್ಮೆಟಿಸಬಹುದು. ಭಾರತೀಯರೆಲ್ಲರೂ ಶಾಂತಿಯಿಂದ, ನೆಮ್ಮದಿಯಿಂದ ಜೀವಿಸಿ ದೇಶವನ್ನು ಪ್ರಗತಿಯತ್ತ ಮುನ್ನಡೆಸಿ ಒಂದು ಸಮ ಸಮಾಜ ಕಟ್ಟಬಹುದು ಎಂದು ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಹೇಳಿದ್ದಾರೆ.

ಗುರುವಾರ ನಗರದ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಧನ್ವಂತರಿ ಸಭಾಂಗಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರಚಾರ ಅಭಿಯಾನ ಭಾಗವಾಗಿ ಆಯೋಜಿಸಿದ್ದ ಸಂವಿಧಾನ ಓದು ಒಂದು ದಿನದ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ದೇಶದ ಪ್ರತಿ ಪ್ರಜೆಯೂ ಹುಟ್ಟಿದಾಗಿನಿಂದ ಸಾಯುವವರೆಗೂ ಕಾನೂನುಗಳ ನಿಯಂತ್ರಣಕ್ಕೊಳಪಟ್ಟಿದ್ದು, ಈ ಕಾನೂನುಗಳ ತಾಯಿ ಸಂವಿಧಾನವಾಗಿದೆ. ದೇಶದಲ್ಲಿ ಸಂವಿಧಾನದ ಅಡಿಯಲ್ಲಿಯೇ ಶೈಕ್ಷಣಿಕ ವ್ಯವಸ್ಥೆ ಕಾರ್ಯನಿರ್ವಹಿಸುತ್ತಿದೆ. ಆದರೆ ಕಾನೂನಿನ ಸಾಕ್ಷರತೆಯನ್ನು ನೀಡುತ್ತಿಲ್ಲ. ಸಂವಿಧಾನದ ಬಗೆಗಿನ ಶಿಕ್ಷ ಣ ವಿದ್ಯಾರ್ಥಿಗಳಿಗೆ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ನಮ್ಮ ಸಂವಿಧಾನವನ್ನು ಯಾವುದೇ ಭಾಷೆಯಲ್ಲಿ ಹತ್ತು ಬಾರಿ ಓದಿದರೂ ಬೇಗನೆ ಅರ್ಥವಾಗುವುದಿಲ್ಲ. ಕಾರಣ, ಅದೊಂದು ಕಥೆಯಲ್ಲ, ಕಾದಂಬರಿಯಲ್ಲ ಅಥವಾ ಕವಿತೆಯಲ್ಲ. ಅದೊಂದು ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಕಾರ್ಯಕ್ರಮ. ಸಂವಿಧಾನ ಅರ್ಥವಾಗಲು ಅದರ ಹಿನ್ನೆಲೆ, ಪ್ರಸ್ತುತತೆ ತಿಳಿದಿರಬೇಕು ಎಂದು ನಾಗಮೋಹನ್‌ ದಾಸ್ ಹೇಳಿದರು.

ದೇಶ ಸ್ವಾತಂತ್ರಗಳಿಸಿದ ಸಂದರ್ಭ ದೇಶದ ಸಾಕ್ಷರತೆ ಶೇ.20ರಷ್ಟಿತ್ತು. ಪ್ರಸಕ್ತ ಶೇ.80ರಷ್ಟಿದೆ. ಶೇ.90ರಷ್ಟಿದ್ದ ಬಡತನ ಪ್ರಸಕ್ತ ಶೇ.21ರಷ್ಟಿದೆ. ಅಲ್ಲದೇ ಉದ್ಯೊಗ, ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ, ಕೃಷಿ, ಕೈಗಾರಿಕೆ, ವಸತಿ ಮತ್ತಿತರ ಕ್ಷೇತ್ರಗಳಲ್ಲಿ ಸಾಕಷ್ಟು ಪ್ರಗತಿಕಂಡಿದೆ. ಜಾತಿ ವ್ಯವಸ್ಥೆ, ಅಸ್ಪೃಶ್ಯತಾ ಆಚರಣೆಯಂತಹ ಘಟನೆಗಳಿಗೆ ಕಾನೂನು ಶಿಕ್ಷೆ ವಿಧಿಸುತ್ತಿದೆ. ಇದಕ್ಕೆ ಮೂಲ ಕಾರಣವೇ ಸಂವಿಧಾನವಾಗಿದೆ ಎಂದರು.

ನಮ್ಮ ಸಂವಿಧಾನದ ವಿಶಿಷ್ಟತೆಯಿಂದ ಕೂಡಿದ್ದು, ಭಾರತವಿಂದು ಸುಭದ್ರ ಹಾಗೂ ವೈವಿಧ್ಯಮಯವಾಗಿ ಬೆಳೆಯಲು ಸಾಧ್ಯವಾಗಿದೆ. ನಮ್ಮ ಸಂವಿಧಾನ ಇಡೀ ಪ್ರಪಂಚದ ಗಮನವನ್ನು ಸೆಳೆದಿರುವುದು ಹೆಮ್ಮೆಯ ಸಂಗತಿ. 199 ರಾಷ್ಟ್ರಗಳಲ್ಲಿ 190 ರಾಷ್ಟ್ರಗಳು ಸಂವಿಧಾನ ಹೊಂದಿದೆ. ಅವರವರ ಸಂವಿಧಾನದ ಆಶಯಗಳನ್ನು ಎಲ್ಲರೂ ಒಪ್ಪಿಕೊಂಡು, ಅದರಂತೆ ಅನುಸರಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.

ಭಾರತೀಯರಾದ ನಾವುಗಳು ಇನ್ನೂ ಸಂವಿಧಾನವನ್ನು ಸಂಪೂರ್ಣವಾಗಿ ಓದಿಲ್ಲ. ಅದನ್ನು ಸಮಗ್ರವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗಿಲ್ಲ ಎಂದ ಅವರು, ಎಲ್ಲರೂ ತಪ್ಪದೇ ಸಂವಿಧಾನ ಓದಬೇಕು. ಅದು ನಮಗೆಲ್ಲರಿಗೂ ಬೇಕಾದ ಜ್ಞಾನದ ಭಂಡಾರವಾಗಿದೆ ಎಂದು ನುಡಿದರು.

ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ಸಚ್ಚಿದಾನಂದ ಮಾತನಾಡಿ, ನಮ್ಮಲ್ಲಿರುವ ರಾಮಾಯಣ, ಭಗವದ್ಗೀತೆ, ಬೈಬಲ್, ಕುರಾನ್‌ನಂತಹ ಧರ್ಮಗ್ರಂಥಗಳಿಗಿಂದಲೂ ಶ್ರೇಷ್ಠವಾದುದು ನಮ್ಮ ಸಂವಿಧಾನವಾಗಿದೆ. ದೇಶದ ಕಾನೂನು, ನ್ಯಾಯ ವ್ಯವಸ್ಥೆ, ನಿಯಮಗಳು ಇಂದಿಗೂ ಗಟ್ಟಿಯಾಗಿ ಉಳಿಯಲು ಸಂವಿಧಾನವೇ ಮೂಲಾಧಾರವಾಗಿದೆ ಎಂದರು.

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ರಾಷ್ಟ್ರಪಿತ ಮಹಾತ್ಮಗಾಂಧಿ, ನೆಹರೂ ನಮಗೆ ದಾರಿದೀಪಗಳಾಗಬೇಕು ಎಂದ ಅವರು, ನಮ್ಮ ಸಂವಿಧಾನ ಧ್ವನಿಯಿಲ್ಲದವರಿಗೆ ಧ್ವನಿಯಾಗುವ ಮೂಲಕ ಅವರ ಹಕ್ಕುಗಳನ್ನು ನೀಡಿದೆ. ಇಂತಹ ಸಂವಿಧಾನ ನೀಡಿದ ಅಂಬೇಡ್ಕರ್‌ಗೆ ಎಲ್ಲರೂ ಋಣಿಯಾಗಿರಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿವಿಯ ಕುಲಸಚಿವ(ಮೌಲ್ಯಮಾಪನ) ಡಾ.ಕೆ.ಬಿ.ಲಿಂಗೇಗೌಡ, ಹಣಕಾಸು ಅಧಿಕಾರಿ ಜೋಹರಾ ಜಬೀನ್, ಡಾ.ಗಣನಾಥ ಶೆಟ್ಟಿ, ಅಭಿಯಾನದ ಸಂಚಾಲಕ ಡಾ.ವಿಠ್ಠಲ್ ಭಂಡಾರಿ, ಡಾ.ಬಿ.ವಸಂತಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News