ಭಾರತದ ಪತ್ರಕರ್ತರು, ಕಾರ್ಯಕರ್ತರ ವಿರುದ್ಧ ಇ-ಮೇಲ್ ಮೂಲಕವೂ ಗೂಢಚರ್ಯೆ !

Update: 2019-12-05 17:28 GMT

ಮುಂಬೈ, ಡಿ.5: ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾನವಹಕ್ಕು ಕಾರ್ಯಕರ್ತರು ಹಾಗೂ ಪತ್ರಕರ್ತರ ವಿರುದ್ಧ ಇ-ಮೇಲ್ ಮೂಲಕವೂ ಗೂಢಚರ್ಯೆ ನಡೆಸಿರುವುದು ಇದೀಗ ಬೆಳಕಿಗೆ ಬಂದಿದೆ.

  ಇಸ್ರೇಲ್‌ನ ಸ್ಪೈವೇರ್ ಪೆಗಾಸಸ್ ಮೂಲಕ ಭಾರತದಲ್ಲಿ ಪತ್ರಕರ್ತರ ಹಾಗೂ ಮಾನವಹಕ್ಕುಗಳ ಪರವಾಗಿ ಹೋರಾಟ ನಡೆಸುವವರ ಚಟುವಟಿಕೆಯ ಮೇಲೆ ಕಳ್ಳಗಣ್ಣು ಇಟ್ಟಿರುವ ಪ್ರಕರಣ ಹಸಿರಾಗಿರುವಂತೆಯೇ ಸುಸಂಘಟಿತ, ಪ್ರಭಾವಶಾಲಿಯಾಗಿ ವಿನ್ಯಾಸಗೊಳಿಸಿರುವ ಮತ್ತೊಂದು ಡಿಜಿಟಲ್ ದಾಳಿಯ ಮಾಹಿತಿ ದೊರಕಿದೆ.

ಇಂತಹ ದುರುದ್ದೇಶದ ಇ-ಮೇಲ್‌ಗಳನ್ನು 2019ರ ಸೆಪ್ಟೆಂಬರ್- ಅಕ್ಟೋಬರ್ ನಡುವೆ ಕಳುಹಿಸಲಾಗಿದೆ ಎಂದು ‘ದಿ ವೈರ್’ ಸುದ್ದಿಸಂಸ್ಥೆ ವರದಿ ಮಾಡಿದೆ. ಇಂತಹ ಹಲವು ಇ-ಮೇಲ್‌ಗಳನ್ನು ತಾನು ಮಾನವ ಹಕ್ಕುಗಳ ಸಂಘಟನೆ ‘ಆ್ಯಮ್ನೆಸ್ಟಿ ಇಂಟರ್‌ನ್ಯಾಷನಲ್’ಗೆ ಕಳಿಸಿದ್ದು ಅವರ ಪರಿಶೀಲನೆಯ ಬಳಿಕ ಚಕಿತಗೊಳಿಸುವ ಅಂಶಗಳು ಬೆಳಕಿಗೆ ಬಂದಿವೆ ಎಂದು ಸುದ್ದಿಸಂಸ್ಥೆ ತಿಳಿಸಿದೆ. ಪತ್ರಕರ್ತರು ಹಾಗೂ ಕಾರ್ಯಕರ್ತರ ಮೇಲೆ ಕಳ್ಳಗಣ್ಣು ಇಡಲೆಂದೇ ಈ ಇ-ಮೇಲ್‌ಗಳನ್ನು ವಿಶಿಷ್ಟವಾಗಿ ರೂಪಿಸಲಾಗಿದೆ ಎಂದು ಬರ್ಲಿನ್‌ನಲ್ಲಿರುವ ಆ್ಯಮ್ನೆಸ್ಟಿ ಇಂಟರ್‌ನ್ಯಾಷನಲ್ ಸಂಸ್ಥೆಯ ಡಿಜಿಟಲ್ ತಂಡ ಮಾಹಿತಿ ನೀಡಿದೆ.

    ‘ರಿಮೈಂಡರ್ ಸಮನ್ಸ್ ಫಾರ್ ರಯಟಿಂಗ್ ಕೇಸ್’, ‘ಪುಣೆ ಎಸ್‌ಎಚ್‌ಒ ಸೆಕ್ಷುವಲಿ ಅಬ್ಯೂಸ್ ಜರ್ನಲಿಸ್ಟ್’, ‘ರಿ: ಸಮನ್ಸ್ ನೋಟಿಸ್ ಫಾರ್ ರಯಟಿಂಗ್ ಕೇಸ್ ಸಿಆರ್. 24/2018’ ಮುಂತಾದ ಕುತೂಹಲ ಹುಟ್ಟಿಸುವ ಶೀರ್ಷಿಕೆಯೊಂದಿಗೆ ಉದ್ದೇಶಿತ ವ್ಯಕ್ತಿಗಳಿಗೆ ಈ ಇ-ಮೇಲ್‌ಗಳು ರವಾನೆಯಾಗುತ್ತವೆ. ಇದಕ್ಕೆ ಒಂದು ಲಿಂಕ್ ನೀಡಲಾಗುತ್ತದೆ ಮತ್ತು ಡೌನ್‌ಲೋಡ್ ಮಾಡಿ ಸಂಪೂರ್ಣ ವಿವರ ತಿಳಿದುಕೊಳ್ಳುವಂತೆ ಸೂಚಿಸಲಾಗುತ್ತದೆ.

ತಿಳಿಸಲಾದ ಲಿಂಕ್ ಕ್ಲಿಕ್ ಮಾಡಿ ಡೌನ್‌ಲೋಡ್ ಮಾಡಿದೊಡನೆ ಅಲ್ಲಿರುವ ಮಾಲ್‌ವೇರ್(ಕಳ್ಳ ಸಾಫ್ಟ್ ವೇರ್) ಆ ವ್ಯಕ್ತಿಗಳ ಕಂಪ್ಯೂಟರ್/ಮೊಬೈಲ್‌ನೊಳಗೆ ಸೇರಿಕೊಳ್ಳುತ್ತದೆ. ಇದು ಆ ವ್ಯಕ್ತಿಗಳ ಗಮನಕ್ಕೆ ಬರುವುದಿಲ್ಲ. ನಂತರ ಇವರ ಕಂಪ್ಯೂಟರ್/ಮೊಬೈಲ್‌ನಲ್ಲಿ ನಿರ್ವಹಿಸುವ ಎಲ್ಲಾ ಚಟುವಟಿಕೆಗಳೂ ಇ-ಮೇಲ್ ಕಳುಹಿಸಿದ ವ್ಯಕ್ತಿಗೆ ರವಾನೆಯಾಗುತ್ತವೆ. ಕಂಪ್ಯೂಟರ್/ಮೊಬೈಲ್‌ನ ಸ್ಕ್ರೀನ್‌ಶಾಟ್ ಕೂಡಾ ರವಾನೆಯಾಗುತ್ತದೆ ಎಂದು ಆ್ಯಮ್ನೆಸ್ಟಿಯ ತಂತ್ರಜ್ಞರು ತಿಳಿಸಿದ್ದಾರೆ.

    ಇಂತಹ ಮಾಹಿತಿ ಕದಿಯುವ ಇ-ಮೇಲ್‌ನ ದಾಳಿಗೆ ಒಳಗಾದವರಲ್ಲಿ ದಿಲ್ಲಿ ವಿವಿಯ ಇಂಗ್ಲಿಷ್ ವಿಭಾಗದ ಪ್ರೊಫೆಸರ್ ಪ್ರೇಮ್‌ಕುಮಾರ್ ವಿಜಯನ್ ಕೂಡಾ ಒಬ್ಬರು. ಈ ವರ್ಷದ ಅಕ್ಟೋಬರ್ 26ರಂದು ಅವರಿಗೆ ಜೆನ್ನಿಫರ್ ಗೋನ್ಸಾಲೆಸ್ ಎಂಬವರಿಂದ ‘ಸಮನ್ಸ್ ನೋಟಿಸ್ ಫಾರ್ ರಯಟಿಂಗ್ ಕೇಸ್ ಸಿಆರ್. 24/2018’ ಎಂಬ ಸಬ್ಜೆಕ್ಟ್‌ ಲೈನ್ ಹೊಂದಿರುವ ಒಂದು ಇ-ಮೇಲ್ ಸಂದೇಶ ಬಂದಿದೆ. ಇ-ಮೇಲ್‌ನ ಜೊತೆಗೆ ಕಡತವನ್ನು ಲಗತ್ತಿಸಲಾಗಿದೆ ಎಂದು ತಿಳಿಸಲಾಗಿತ್ತು. ಛತ್ತೀಸ್‌ಗಢದ ಬಸ್ತಾರ್ ಪ್ರದೇಶದ ಜಗದಾಲ್‌ಪುರ ಸೆಷನ್ಸ್ ಕೋರ್ಟ್‌ನ ಪಬ್ಲಿಕ್ ಪ್ರಾಸಿಕ್ಯೂಟರ್ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ಇದಕ್ಕೆ ಸಹಿ ಹಾಕಿದ್ದ.

  ಜೀವಮಾನದಲ್ಲೇ ಛತ್ತೀಸ್‌ಗಢಕ್ಕೆ ಭೇಟಿ ನೀಡಿರದ ತಾನು ಇ-ಮೇಲ್ ನೋಡಿ ಗೊಂದಲಕ್ಕೆ ಒಳಗಾದೆ ಎಂದು ವಿಜಯನ್ ತಿಳಿಸಿದ್ದಾರೆ. ಈ ಇ-ಮೇಲ್ ತಪ್ಪಿ ತನ್ನ ವಿಳಾಸಕ್ಕೆ ಬಂದಿದೆಯೇ ಎಂದು ವಿಜಯನ್ ಸಂದೇಶ ಕಳುಹಿಸಿದ್ದಾರೆ. ಹೌದು. ಜಗದಾಲ್‌ಪುರ ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾಗಲಿದ್ದು ಹೆಚ್ಚಿನ ವಿವರವನ್ನು ಇಮೇಲ್‌ಗೆ ಲಗತ್ತಿಸಿದ ನೋಟಿಸ್‌ನಲ್ಲಿ ತಿಳಿಸಿದ್ದೇವೆ ಎಂಬ ಉತ್ತರ ಬಂದಿದೆ.

   ಬಳಿಕ ವಿಜಯನ್ ತನ್ನ ಕಂಪ್ಯೂಟರ್ ಮತ್ತು ಮೊಬೈಲ್ ಪೋನ್‌ನಲ್ಲಿ ಲಿಂಕ್ ಕ್ಲಿಕ್ ಮಾಡಿದ್ದಾರೆ. ಆದರೆ ಫೋಲ್ಡರ್‌ನಲ್ಲಿ ಸಹಿ ಹಾಕದ, ಲೆಟರ್‌ಹೆಡ್ ಹೊಂದಿರದ ವಾರಂಟ್ ನೋಟಿಸ್ ಇತ್ತು. ಇತರ ಫೈಲ್‌ಗಳು ಸಂಪೂರ್ಣ ಓಪನ್ ಆಗಲಿಲ್ಲ. ಆದ್ದರಿಂದ ಸಂಶಯಗೊಂಡು, ಗುರುತುಪತ್ರ ದೃಢೀಕರಿಸುವಂತೆ ಇ-ಮೇಲ್ ಕಳುಹಿಸಿದ ವ್ಯಕ್ತಿಗೆ ಸಂದೇಶ ಕಳುಹಿಸಿದ್ದಾರೆ . ಆಗ ಬಂದ ಉತ್ತರ - ಓರ್ವ ಸರಕಾರಿ ನೌಕರನಾಗಿರುವ ಹಿನ್ನೆಲೆಯಲ್ಲಿ ಈ ರೀತಿ ಮಾಡುವಂತಿಲ್ಲ. ದಯವಿಟ್ಟು ಇನ್ನಷ್ಟು ಬೆದರಿಕೆ ಸಂದೇಶ ಕಳುಹಿಸಬೇಡಿ ’ ಎಂದಾಗಿತ್ತು.

  ಇಂತಹುದೇ ಇ-ಮೇಲ್‌ಗಳು ಛತ್ತೀಸ್‌ಗಢದ ದಲಿತ ಹಕ್ಕುಗಳ ಕಾರ್ಯಕರ್ತ ಡಿಗ್ರೀಪ್ರಸಾದ್ ಚೌಹಾಣ್, ಜಗದಾಲ್‌ಪುರ ಕಾನೂನು ನೆರವು ತಂಡದ ಅಧಿಕೃತ ಇ-ಮೇಲ್ ಐಡಿಗೆ, ತಂಡದ ವಕೀಲೆ ಇಶಾ ಖಂಡೇಲ್‌ವಾಲ್‌ಗೆ, ನಾಗಪುರ ಮೂಲದ ಮಾನವಹಕ್ಕು ಸಂಘಟನೆಯ ವಕೀಲ ನಿಹಾಲ್‌ಸಿಂಗ್ ರಾಥೋಡ್, ಕೋಲ್ಕತಾ ಮೂಲದ ಅಣು ಸಂಬಂಧಿ ಜೀವಶಾಸ್ತ್ರಜ್ಞ ಪಾರ್ಥೊಸಾರಥಿ ರೇ ಹಾಗೂ ಮುಂಬೈ ಮೂಲದ ಪತ್ರಕರ್ತರಿಗೂ ಬಂದಿದೆ ಎಂದು ಸುದ್ದಿಸಂಸ್ಥೆ ತಿಳಿಸಿದೆ.

ಇವರಲ್ಲಿ ಹೆಚ್ಚಿನವರು ಈ ಹಿಂದೆಯೂ ಸೈಬರ್ ದಾಳಿಗೆ ಒಳಗಾಗಿದ್ದು ಇಂತಹ ಸೈಬರ್ ದಾಳಿಯ ಹಿಂದಿರುವ ಕಾರಣ ತಮಗೆ ಸ್ಪಷ್ಟವಾಗಿದೆ ಎಂದಿದ್ದಾರೆ.

ಒಬ್ಬನೇ ವ್ಯಕ್ತಿಯ ಖಾತೆಯಿಂದ ಇ-ಮೇಲ್ ಸಂದೇಶ ಬರುತ್ತಿರುವುದು ಸ್ಪಷ್ಟವಾಗಿದೆ. ಫೈಲ್ ಹಂಚಿಕೊಳ್ಳುವ ಸಾಧನವನ್ನು(ಗೂಗಲ್ ಡ್ರೈವ್, ಡ್ರಾಪ್‌ಬಾಕ್ಸ್ ಇತ್ಯಾದಿ) ಹೋಲುವಂತೆ ಇ-ಮೇಲ್‌ನಲ್ಲಿರುವ ಸಬ್ಜೆಕ್ಟ್ ಲೈನ್ ವಿನ್ಯಾಸಗೊಳಿಸಲಾಗಿದೆ ಎಂದು ಆ್ಯಮ್ನೆಸ್ಟಿ ತಂತ್ರಜ್ಞರು ಎಚ್ಚರಿಕೆ ನೀಡಿದ್ದಾರೆ.

ಸೈಬರ್ ದಾಳಿಯ ಸೂತ್ರಧಾರ ಪತ್ತೆಯಾಗಿಲ್ಲ

ಈ ಸೈಬರ್ ದಾಳಿಯ ಹಿಂದೆ ಯಾರ ಕೈವಾಡವಿದೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಸ್ಪಷ್ಟವಾಗಿಲ್ಲ. ಆದರೆ ಎನ್‌ಎಸ್‌ಒ ತಂಡ ಅಥವಾ ಪೆಗಾಸಸ್‌ನ ಪಾತ್ರ ಇರುವ ಸಾಧ್ಯತೆಯನ್ನು ತಳ್ಳಿಹಾಕಿರುವಾಗಿ ಆ್ಯಮ್ನೆಸ್ಟಿ ತಂತ್ರಜ್ಞರು ತಿಳಿಸಿದ್ದಾರೆ. ಇಂತಹ ಇ-ಮೇಲ್‌ಗಳು ದುರುದ್ದೇಶಪೂರಿತ ಲಿಂಕ್‌ಗಳನ್ನು ಹೊಂದಿದ್ದು ಇದನ್ನು ಡೌನ್‌ಲೋಡ್ ಮಾಡಿಕೊಂಡವರ ವೈಯಕ್ತಿಕ ಮಾಹಿತಿಗಳನ್ನು ಕದಿಯಲಾಗುತ್ತಿದೆ. ಈ ರೀತಿಯ ಸೈಬರ್ ದಾಳಿಗೆ ಒಳಗಾದವರು ಈ ಸಂದೇಶಗಳನ್ನು share@amnesty.tech ಗೆ ಫಾರ್ವಡ್ ಮಾಡುವಂತೆ ಅವರು ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News