"ಅತ್ಯಾಚಾರ ಆರೋಪಿಗಳು ನಮ್ಮ ಬಂದೂಕುಗಳನ್ನು ಸೆಳೆದು ದಾಳಿ ನಡೆಸಿದರು"

Update: 2019-12-06 12:21 GMT

ಹೈದರಾಬಾದ್ : ಹೈದರಾಬಾದ್ ಪಶುವೈದ್ಯೆಯ ಸಾಮೂಹಿಕ ಅತ್ಯಾಚಾರಗೈದು ಆಕೆಯನ್ನು ಸುಟ್ಟು ಹಾಕಿ ಹತ್ಯೆಗೈದ ಪ್ರಕರಣದ ನಾಲ್ವರು ಆರೋಪಿಗಳನ್ನು ಎನ್‍ ಕೌಂಟರ್‍ ನಲ್ಲಿ ಕೊಂದ ಪ್ರಕರಣ ಕುರಿತಂತೆ ಮಾನವ ಹಕ್ಕು ಆಯೋಗ  ವ್ಯಕ್ತಪಡಿಸಿರುವ ಸಂಶಯಗಳ ಕುರಿತಂತೆ ಪ್ರತಿಕ್ರಿಯಿಸಲು ಹೈದರಾಬಾದ್ ಪೊಲೀಸ್ ಆಯುಕ್ತ ವಿ ಸಿ ಸಜ್ಜನ್ನರ್ ನಿರಾಕರಿಸಿದ್ದಾರೆ.

"ಕಾನೂನು ತನ್ನ ಕರ್ತವ್ಯವನ್ನು ಮಾಡಿದೆ ಎಂದಷ್ಟೇ ನಾನು ಹೇಳಬಲ್ಲೆ. ಈ ಪ್ರಕರಣವನ್ನು ಗಣನೆಗೆ ತೆಗೆದುಕೊಳ್ಳುವ ಸರಕಾರ, ರಾಷ್ಟ್ರೀಯ ಮಾನವ ಹಕ್ಕು ಆಯೋಗ ಎಲ್ಲರಿಗೂ ನಾವು ಉತ್ತರಿಸುತ್ತೇವೆ'' ಎಂದು ಅವರು ಹೇಳಿಕೊಂಡರು.

ಘಟನೆಯ ಕುರಿತಂತೆ ವಿವರಿಸಿದ ಅವರು "ತನಿಖೆಯ ಭಾಗವಾಗಿ ಅವರನ್ನು ಅಪರಾಧ ನಡೆಸಿದ ಸ್ಥಳಕ್ಕೆ ಕರೆದುಕೊಂಡು ಬರಲಾಗಿತ್ತು. ಅಲ್ಲಿ  ಸಂತ್ರಸ್ತೆಯ ಮೊಬೈಲ್ ಫೋನ್, ವಾಚು ಹಾಗೂ ಪವರ್ ಬ್ಯಾಂಕ್ ಇತ್ತು. ಆರೋಪಿಗಳು ಪೊಲೀಸರ ಮೇಲೆ ಬೆತ್ತಗಳಿಂದ ದಾಳಿ ನಡೆಸಿದರು. ನಮ್ಮ ಕೈಯ್ಯಲ್ಲಿದ್ದ ಶಸ್ತ್ರ (ಬಂದೂಕು) ಸೆಳೆದು ಪೊಲೀಸರತ್ತ ಗುಂಡು ಹಾರಿಸಲು ಆರಂಭಿಸಿದರು.   ಶರಣಾಗಿ ಎಂದು ಅಧಿಕಾರಿಗಳು ಎಚ್ಚರಿಸಿದ ಹೊರತಾಗಿಯೂ ಅವರು ಗುಂಡು ಹಾರಿಸುವುದನ್ನು ಮುಂದುವರಿಸಿದ್ದರು. ನಂತರ ನಾವು ಪ್ರತಿ ದಾಳಿ ನಡೆಸಿದಾಗ ಅವರು ಹತರಾದರು. ಎಲ್ಲವೂ  10-15 ನಿಮಿಷಗಳಲ್ಲಿ ಮುಗಿದು ಹೋಗಿತ್ತು'' ಎಂದು ಅವರು ಹೇಳಿದರು.

ಆರೋಪಿಗಳ ಜತೆ ಹತ್ತು ಪೊಲೀಸರಿದ್ದರು ಅವರಲ್ಲಿ ಇಬ್ಬರಿಗೆ ಗಂಭೀರ ಗಾಯಗಳುಂಟಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ತಿಳಿಸಿದರು,.

"ಆರೋಪಿಗಳಿಗೆ ಅಪರಾಧದ ಹಿನ್ನೆಲೆಯಿದೆ. ಅತ್ಯಾಚಾರ ಮತ್ತು ಜೀವಂತ ಸುಟ್ಟ ಪ್ರಕರಣಗಳು ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ನಡೆದಿವೆ. ಇಂತಹ ಘಟನೆಗಳಲ್ಲೂ ಅವರ ಕೈವಾಡದ ಶಂಕೆಯಿದೆ'' ಎಂದು ಅವರು ಹೇಳಿಕೊಂಡರು.

ಈ ಎನ್‍ ಕೌಂಟರ್ ಪ್ರಕರಣವನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡಿದೆ. ಘಟನೆಯ ತನಿಖೆ ನಡೆಸಲು ತಕ್ಷಣ ಸ್ಥಳಕ್ಕೆ ತಂಡವೊಂದನ್ನು ಕಳುಹಿಸುವಂತೆ ಆಯೋಗ ಪೊಲೀಸ್ ಮಹಾನಿರ್ದೇಶಕರು (ತನಿಖೆ) ಅವರಿಗೆ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News