‘ಅನರ್ಹರಿಗೆ ಸಚಿವ ಸ್ಥಾನ'ದ ಬಗ್ಗೆ ಸ್ಪಷ್ಟನೆ ನೀಡಿದ ಸಚಿವ ಈಶ್ವರಪ್ಪ

Update: 2019-12-06 12:34 GMT

ಬೆಂಗಳೂರು, ಡಿ. 6: ಉಪಚುನಾವಣೆಯಲ್ಲಿ ಅನರ್ಹ ಶಾಸಕರು ಗೆಲುವು ಸಾಧಿಸಿದರೆ ಮಾತ್ರ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಇಂದಿಲ್ಲಿ ತಿಳಿಸಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅನರ್ಹ ಶಾಸಕರು ಒಂದು ವೇಳೆ ಸೋಲನ್ನಪ್ಪಿದರೆ ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡಿ ಸಚಿವ ಸ್ಥಾನ ನೀಡುವ ಆಲೋಚನೆ ಪಕ್ಷದಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದರು.

ಮೊದಲೇ ಅನರ್ಹ ಶಾಸಕರಿಗೆ ಮೇಲ್ಮನೆ ಸದಸ್ಯ ಸ್ಥಾನದ ಮೂಲಕ ಸಚಿವ ಸ್ಥಾನದ ಭರವಸೆ ನೀಡಿದ್ದೆವು. ಆದರೆ, ಅವರು ಶಾಸಕರಾಗಿಯೇ ಸಚಿವರಾಗುತ್ತೇವೆ ಎಂದು ಹೇಳಿದರು. ಹೀಗಾಗಿ ಉಪಚುನಾವಣೆಯಲ್ಲಿ ಬಿಜೆಪಿ ಅವರಿಗೆ ಟಿಕೆಟ್ ನೀಡಿದ್ದು, ಗೆಲುವು ಸಾಧಿಸಿದರೆ ಸಚಿವ ಸ್ಥಾನ ನಿಶ್ಚಿತ ಎಂದರು.

ಅನರ್ಹ ಶಾಸಕರು ರಾಜೀನಾಮೆ ನೀಡಿದ್ದರಿಂದಲೇ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣ. ಹೀಗಾಗಿ ಅವರಿಗೆ ಕೊಟ್ಟಿರುವ ಮಾತಿನಂತೆ ನಡೆದುಕೊಳ್ಳಬೇಕು ಎಂದ ಅವರು, ಹದಿನೈದು ಮಂದಿ ಶಾಸಕರಾಗಿ ಆಯ್ಕೆಯಾದರೂ, ಎಲ್ಲರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

ಬಹುಮತದ ನಿರೀಕ್ಷೆ: ಉಪಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಬರಲಿದ್ದು, ಯಾವ ರಾಜಕೀಯ ಲೆಕ್ಕಾಚಾರಗಳು ನಡೆಯುವುದಿಲ್ಲ. ಜನತೆ ಅಭಿವೃದ್ಧಿ ಪರವಾದ ಸರಕಾರಕ್ಕೆ ಮತ ಹಾಕುವುದರಲ್ಲಿ ಸಂಶಯವಿಲ್ಲ. ಡಿ.9ರ ಫಲಿತಾಂಶದಿಂದ ಬಿಜೆಪಿಗೆ ಸ್ಪಷ್ಟ ಜನಾದೇಶ ಸಿಗಲಿದೆ ಎಂದು ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಎಲ್ಲರಿಗೂ ಐಶ್ವರ್ಯ ರೈ ಬೇಕು!

ವಯಸ್ಸಿಗೆ ಬಂದವರಿಗೆ ನಟಿ ಐಶ್ವರ್ಯ ರೈ ಅವರೇ ಬೇಕು ಎಂದು ಕೇಳುತ್ತಾರೆ. ಆದರೆ, ಆಕೆ ಒಬ್ಬಳೆ ಇರುವುದು. ಎಲ್ಲರೂ ಉಪಮುಖ್ಯಮಂತ್ರಿ ಹುದ್ದೆಯೇ ಬೇಕು ಎಂದು ಅಪೇಕ್ಷೆ ಪಡುತ್ತಾರೆ. ಆದರೆ ಅವರಿಗೆ ಸಿಗಬೇಕು. ಉಪಚುನಾವಣೆಯಲ್ಲಿ ಗೆದ್ದ ಅನರ್ಹರಿಗೆ ಯಾವ ಸ್ಥಾನ ನೀಡಬೇಕೆಂದು ಬಿಎಸ್‌ವೈ ತೀರ್ಮಾನಿಸಲಿದ್ದಾರೆ’

-ಕೆ.ಎಸ್.ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News