ಕಾಫಿ ಬೆಳೆಗಾರರಿಗೆ ನರೇಗಾ, ಫಸಲ್‌ ಭೀಮಾ ಸೌಲಭ್ಯ ವಿಸ್ತರಣೆ: ಡಿಸಿಎಂ ಅಶ್ವಥ್ ನಾರಾಯಣ

Update: 2019-12-06 16:17 GMT

ಬೆಂಗಳೂರು, ಡಿ.6: ನರೇಗಾ ಹಾಗೂ ಫಸಲ್‌ ಭೀಮಾ ಯೋಜನೆಯ ಸೌಲಭ್ಯಗಳನ್ನು ಕಾಫಿ ಬೆಳೆಗಾರರಿಗೂ ವಿಸ್ತರಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದೆ ಎಂದು ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ ತಿಳಿಸಿದ್ದಾರೆ.

ಶುಕ್ರವಾರ ಕರ್ನಾಟಕ ಕಾಫಿ ಬೆಳೆಗಾರರ ಒಕ್ಕೂಟ ನಗರದ ಚಿತ್ರಕಲಾ ಪರಿಷತ್‌ನಲ್ಲಿ ಆಯೋಜಿಸಿದ್ದ ಭಾರತದ ಕಾಫಿಯ ಸ್ಥಿತಿಗತಿಗಳ ಕುರಿತ ಪುಸ್ತಕವೊಂದನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ನರೇಗಾ ಯೋಜನೆಯಿಂದ ಹೊಲ, ತೋಟಗಳಿಗೆ ಹೋಗಲು ದಾರಿ, ಕೃಷಿ ಹೊಂಡ ಸೇರಿದಂತೆ ಅನೇಕ ಸೌಲಭ್ಯಗಳನ್ನು ಪಡೆಯಬಹುದಾಗಿದೆ. ಇದನ್ನು ಕಾಫಿ ಬೆಳೆಗಾರರಿಗೂ ಸಿಗುವಂತಾದರೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಕಾಫಿ ಬೆಳೆಗಾರರಿಗೆ ಫಸಲ್‌ ಭೀಮಾ ಯೋಜನೆಯನ್ನು ಜಾರಿ ಮಾಡಲು ಸಿ.ಟಿ.ರವಿ ಆಸಕ್ತಿ ತೋರಿಸಿದ್ದಾರೆ. ಇದು ಸೇರಿದಂತೆ ಕಾಫಿ ಬೆಳೆಗಾರರು ಎದುರಿಸುತ್ತಿರುವ ಎಲ್ಲ ಸಮಸ್ಯೆಗಳನ್ನು ಬಗೆ ಹರಿಸಲು ಸರಕಾರ ಬದ್ದವಾಗಿದ್ದು, ಇವೆಲ್ಲವುಗಳ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರೊಂದಿಗೆ ಚರ್ಚೆ ನಡೆಸಲು ಶೀಘ್ರವೇ ಸಭೆ ಕರೆಯಲಾಗುವುದು ಎಂದು ಅವರು ಹೇಳಿದರು.

ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಮಾತನಾಡಿ, ಹಿಂದಿನ ದಿನಗಳಲ್ಲಿ ಕಾಫಿ ಪ್ಲಾಂಟರ್ಸ್‌ಗಳೆಂದರೆ ಪ್ರತಿಷ್ಠೆಯಾಗಿತ್ತು. ಆದರೆ, ಇವತ್ತು ಲಕ್ಷಾಂತರ ರೂ.ಸಾಲ ಮಾಡಿಕೊಂಡು ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಸಾಮಾನ್ಯ ಬೆಳೆಗಾರರಾಗಿದ್ದಾರೆ. ಹೀಗಾಗಿ ಕಾಫಿ ಪ್ಲಾಂಟರ್ಸ್‌ಗಳನ್ನು ಎಲ್ಲ ಕೃಷಿ ಬೆಳೆಗಾರರಂತೆ ಸಾಮಾನ್ಯ ರೈತರೆಂದು ಭಾವಿಸಬೇಕು. ಹಾಗೂ ಎಲ್ಲ ರೈತ ಸಮುದಾಯಕ್ಕೂ ಸಿಗುವ ಸೌಲಭ್ಯಗಳು ಇವರಿಗೂ ಸಿಗುವಂತಾಗಬೇಕೆಂದು ತಿಳಿಸಿದರು.

ಕರ್ನಾಟಕ ಕಾಫಿ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ತೀರ್ಥ ಮಲ್ಲೇಶ್ ಮಾತನಾಡಿ, ಕಾಫಿ ಬೆಳೆಗಾರರು ಪರಿಸರ ಪರವಾದಂತಹ ಕೃಷಿ ಮಾಡುತ್ತಿದ್ದಾರೆ. ಇದರ ಜೊತೆಗೆ ಸಾವಿರಾರು ಮಂದಿಗೆ ಉದ್ಯೋಗ ನೀಡಿದ್ದಾರೆ. ಹಾಗೂ ದೇಶದ ಆರ್ಥಿಕತೆಗೆ ಬೆನ್ನೆಲುಬಾಗಿಯೂ ಕೆಲಸ ಮಾಡುತ್ತಿದ್ದಾರೆ. ಅಷ್ಟಾಗಿಯೂ ಕಾಫಿ ಬೆಳೆಗಾರರು ಹಲವು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅದನ್ನು ಬಗೆಹರಿಸುವ ನಿಟ್ಟಿನಲ್ಲಿ ಸರಕಾರ ಮುಂದಾಗಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾಫಿ ಮಂಡಳಿ ಅಧ್ಯಕ್ಷ ಎಂ.ಎಸ್.ಬೋಜೇಗೌಡ, ಮಾಜಿ ಸಚಿವೆ ಮೋಟಮ್ಮ, ಕರ್ನಾಟಕ ಚಿತ್ರಕಲಾ ಪರಿಷತ್‌ನ ಅಧ್ಯಕ್ಷ ಬಿ.ಎಲ್.ಶಂಕರ್, ದೇವೇಂದ್ರ ಶರ್ಮ ಮತ್ತಿತರರಿದ್ದರು.

ಕೇವಲ ಕೃಷಿಗಾಗಿ ಸರಕಾರಿ, ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವ ರೈತರ ಜಮೀನನ್ನು ವಶಪಡಿಸಿಕೊಳ್ಳುವಂತಹ ಕಾನೂನನ್ನು ರದ್ದು ಪಡಿಸಲು ಸರಕಾರ ಚಿಂತನೆ ನಡೆಸಿದೆ. ಈ ನಿಟ್ಟಿನಲ್ಲಿ ಮುಂದಿನ ಸದನದಲ್ಲಿ ಇದಕ್ಕೆ ಅನುಮೋದನೆ ಪಡೆಯಲಾಗುವುದು.

-ಸಿ.ಟಿ.ರವಿ, ಪ್ರವಾಸೋದ್ಯಮ ಸಚಿವ

ಹಕ್ಕೊತ್ತಾಯಗಳು

-ಕಾಫಿ ಬೆಳೆಗಾರರ ಸಂಪೂರ್ಣ ಸಾಲ ಮನ್ನಾ ಮಾಡುವುದು.

-ಹೋಬಳಿಗಳಿಗೆ ಒಂದರಂತೆ ವೇರ್‌ಹೌಸ್‌ಗಳನ್ನು ತೆರೆಯುವುದು.

-ಕಾಫಿ ಬೆಳೆಯ ಕುರಿತು ವೈಜ್ಞಾನಿಕ ಸಂಶೋಧನೆ ನಡೆಸುವುದು

-ಡೀಮ್ಡ್ ಫಾರೆಸ್ಟ್‌ನ್ನು ಕಂದಾಯ ಭೂಮಿಯಾಗಿ ಪರಿವರ್ತಿಸುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News