ಕಡಿಮೆ ಬೆಲೆಗೆ ಈರುಳ್ಳಿ ಮಾರುತ್ತಿದ್ದ ಕಾಂಗ್ರೆಸ್ ನಾಯಕನ ಬೆರಳನ್ನೇ ಕಚ್ಚಿದ ಭೂಪ!

Update: 2019-12-07 09:58 GMT

ಡೆಹ್ರಾಡೂನ್: ಏರುತ್ತಿರುವ ಈರುಳ್ಳಿ ಬೆಲೆಗಳ ವಿರುದ್ಧ ಪ್ರತಿಭಟಿಸುವ ಸಲುವಾಗಿ ಕಡಿಮೆ ಬೆಲೆಗೆ ಈರುಳ್ಳಿ ಮಾರುತ್ತಿದ್ದ ಉತ್ತರಾಖಂಡದ ಕಾಂಗ್ರೆಸ್ ನಾಯಕರೊಬ್ಬರ ಬೆರಳಿನ ತುದಿಯನ್ನು ಬಿಜೆಪಿ ಬೆಂಬಲಿಗನೆಂದು ಹೇಳಲಾದ ವ್ಯಕ್ತಿಯೊಬ್ಬ ಕಚ್ಚಿದ್ದಾನೆ ಎಂದು ಆರೋಪಿಸಲಾಗಿದೆ. ಆದರೆ ಆರೋಪಿಗೂ ಪಕ್ಷಕ್ಕೂ ಸಂಬಂಧವಿಲ್ಲವೆಂದು ಬಿಜೆಪಿ ಹೇಳಿದೆ.

ಕಾಂಗ್ರೆಸ್ ಕಾರ್ಯಕರ್ತರು ಈರುಳ್ಳಿ ಬೆಲೆ ವಿಚಾರದಲ್ಲಿ ಪ್ರತಿಭಟಿಸುತ್ತಿರುವ ಸಂದರ್ಭ ವಿರೋಧಿಸಿದ ಮನೀಶ್ ಬಿಷ್ಟ್ ಎಂಬಾತನನ್ನು ಸಮಾಧಾನಿಸಲು ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಂದನ್ ಮೆಹ್ರಾ ಯತ್ನಿಸುತ್ತಿದ್ದಾಗ ಆತ ಅವರ ಬೆರಳನ್ನು ತನ್ನ ಕೈಯ್ಯಲ್ಲಿ ಹಿಡಿದು ಅದರ ತುದಿಯನ್ನು ಕಚ್ಚಿದ್ದಾನೆ ಎಂದು ದೂರಲಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು ಆರೋಪಿಯನ್ನು ಬಂಧಿಸಲಾಗಿದೆ.

ಆರೋಪಿ  ಘೋಷಣೆಗಳನ್ನು ಕೂಗುತ್ತಿದ್ದನಲ್ಲದೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಮಹಿಳಾ ಕಾಂಗ್ರೆಸ್ ಸದಸ್ಯರ ಜತೆ ಅನುಚಿತವಾಗಿ ವರ್ತಿಸಿದ್ದನೆಂದು ಕಾಂಗ್ರೆಸ್ ಸೇವಾ ದಳ ಉಪಾಧ್ಯಕ್ಷ ರಮೇಶ್ ಗೋಸ್ವಾಮಿ ಆರೋಪಿಸಿದ್ದಾರೆ. ಪ್ರತಿಭಟನಾಕಾರರು ನಗರದ ಬುದ್ಧಾ ಪಾರ್ಕ್ ಪ್ರದೇಶದಲ್ಲಿ ಈರುಳ್ಳಿಯನ್ನು ಕೆಜಿಗೆ ರೂ 30ರಂತೆ ಮಾರಾಟ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ.

ಘಟನೆಯ ವೀಡಿಯೋ ಕೂಡ ಹರಿದಾಡುತ್ತಿದ್ದು ಆದರೆ ವೀಡಿಯೋದಲ್ಲಿ ಘಟನಾವಳಿಗಳು ಸ್ಪಷ್ಟವಾಗಿ ಗೋಚರವಾಗುತ್ತಿಲ್ಲ. ಆದರೆ ಆರೋಪಿಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಪ್ರದೀಪ್ ಬಿಷ್ಟ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News