ಮತದಾನ ಕೇಂದ್ರಕ್ಕೆ ಕಲ್ಲೆಸೆತ: ಪೊಲೀಸ್ ಗೋಲಿಬಾರಿಗೆ ಓರ್ವ ಬಲಿ

Update: 2019-12-07 10:01 GMT

ರಾಂಚಿ : ಜಾರ್ಖಂಡ್‍ನ ಸಿಸೈ ವಿಧಾನಸಭಾ ಕ್ಷೇತ್ರದ ಗುಮ್ಲಾ ಜಿಲ್ಲೆಯ ಬಧ್ನಿ ಗ್ರಾಮದ ಮತದಾನ ಬೂತ್  ಒಂದರತ್ತ ಶನಿವಾರ  ಕಲ್ಲೆಸೆಯುತ್ತಿದ್ದ ಗುಂಪೊಂದನ್ನು ನಿಯಂತ್ರಿಸಲು ಪೊಲೀಸರು ಗುಂಡು ಹಾರಿಸಿದ ಪರಿಣಾಮ ಓರ್ವ ಗ್ರಾಮಸ್ಥ ಮೃತಪಟ್ಟು ಇತರ ಇಬ್ಬರು ಗಾಯಗೊಂಡಿದ್ದಾರೆ.

ಕಲ್ಲೆಸೆತ ಘಟನೆಯಲ್ಲಿ ಸಿಸೈ ಪೊಲೀಸ್ ಠಾಣಾಧಿಕಾರಿ, ಇಬ್ಬರು ಕಾನ್‍ಸ್ಟೇಬಲ್‍ಗಳು ಹಾಗೂ ಓರ್ವ ಪತ್ರಕರ್ತ ಸೇರಿದಂತೆ ಎಂಟು ಮಂದಿ ಗಾಯಗೊಂಡಿದ್ದಾರೆ.

ಕಲ್ಲೆಸೆಯುತ್ತಿದ್ದ ಉದ್ರಿಕ್ತ ಜನರು ಅಲ್ಲಿ ಭದ್ರತೆಗಾಗಿ ನಿಯೋಜಿಸಲ್ಪಟ್ಟಿದ್ದ ಕ್ಷಿಪ್ರ ಕಾರ್ಯಾಚರಣೆ ಪಡೆಯ ಸಿಬ್ಬಂದಿಯ ಶಸ್ತ್ರಗಳನ್ನು ಸೆಳೆಯಲು ಯತ್ನಿಸಿದ ನಂತರ ಪೊಲೀಸರು ಗುಂಡು ಹಾರಿಸಿದ್ದರು. ಘಟನೆಯಲ್ಲಿ ಗಾಯಗೊಂಡ ಇಬ್ಬರು ಅಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯ ಈ ಬೂತ್‍ನಲ್ಲಿ ಮತದಾನ ಸ್ಥಗಿತಗೊಳಿಸಲಾಗಿದೆ. ಮರು ಮತದಾನ ನಡೆಯುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.

ಎರಡೂ ಪಕ್ಷಗಳ ಕಾರ್ಯಕರ್ತರು ಪರಸ್ಪರ ಜಗಳವಾಡಿಕೊಂಡಾಗ ಪೊಲೀಸರು ಹಸ್ತಕ್ಷೇಪ ನಡೆಸಿದರೂ ಜನರು ಪೊಲೀಸರ ಜತೆಗೆ ಜಗಳಕ್ಕೆ ನಿಂತರೆನ್ನಲಾಗಿದೆ. ಆಗ ಕೆಲವರು ಪೊಲೀಸರ ಶಸ್ತ್ರಗಳನ್ನು ಸೆಳೆದು ಕಲ್ಲುಗಳೆನ್ನೆಸೆಯಲು ಆರಂಭಿಸಿದ್ದರು.

ಸ್ಥಳದಲ್ಲಿ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News