ಕನ್ನಡ ಬಿಗ್ ಬಾಸ್ ನಲ್ಲಿ ಇಂದು ರಾತ್ರಿ ಸಲ್ಮಾನ್ ಖಾನ್- ಕಿಚ್ಚ ಸುದೀಪ್ ಜುಗಲ್ ಬಂದಿ

Update: 2019-12-08 11:17 GMT

ಬೆಂಗಳೂರು : ಇಂದು ರಾತ್ರಿ 9 ಗಂಟೆಗೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿರುವ ಬಿಗ್ ಬಾಸ್ ಕನ್ನಡದ 'ವಾರದ ಕತೆ ಕಿಚ್ಚನ್ ಜೊತೆ' ಕಾರ್ಯಕ್ರಮದಲ್ಲಿ ಹಿಂದಿ ಬಿಗ್ ಬಾಸ್ ನಿರೂಪಕ ಸಲ್ಮಾನ್ ಖಾನ್ ಜೊತೆ ಕಿಚ್ಚ ಸುದೀಪ್ ಮುಖಾಮುಖಿಯಾಗಲಿದ್ದಾರೆ.

ಹೌದು. ಈ ಇಬ್ಬರೂ ಮೇರು ನಟರು “ದಬಾಂಗ್ 3” ಎಂಬ ಹಿಂದಿ ಚಿತ್ರದಲ್ಲಿ ನಟಿಸುತ್ತಿರುವುದು ಈಗಾಗಲೇ ಎಲ್ಲರಿಗೂ ತಿಳಿದಿರುವ ವಿಚಾರ. ಇದೇ ತಿಂಗಳು ಈ ಚಿತ್ರ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಚಾರಕ್ಕಾಗಿ ಇಡೀ 'ಬಿಗ್ ಬಾಸ್ 3' ಚಿತ್ರತಂಡ ಶುಕ್ರವಾರ ಹಿಂದಿ ಬಿಗ್ ಬಾಸ್ ಗೆ ತೆರಳಿದೆ.

ಈ ಚಿತ್ರದ ನಾಯಕ ಹಾಗು ಖಳನಾಯರಿಬ್ಬರೂ ಬಿಗ್ ಬಾಸ್ ನಿರೂಪಕರು. ಸಲ್ಮಾನ್ ಖಾನ್ ಹಿಂದಿ ಬಿಗ್ ಬಾಸ್ ನಿರೂಪಿಸಿದರೆ ಕಿಚ್ಚ ಸುದೀಪ್ ಕನ್ನಡ ಬಿಗ್ ಬಾಸ್ ನಿರೂಪಕ. ಹಾಗಾಗಿ ಇಬ್ಬರೂ ಜೊತೆಯಾಗಿ ಬಿಗ್ ಬಾಸ್ ಕಾರ್ಯಕ್ರಮ ದಲ್ಲಿ ಭಾಗವಹಿಸಲು ಸಾಧ್ಯವಿಲ್ಲ. ಏಕೆಂದರೆ ವಾರಾಂತ್ಯ ಕಾರ್ಯಕ್ರಮದಲ್ಲಿ ಇಬ್ಬರೂ ಬಿಗ್ ಬಾಸ್ ಚಿತ್ರೀಕರಣದಲ್ಲಿ ಇರುತ್ತಾರೆ. 

ಹಾಗಾಗಿ ಹಿಂದಿ ಬಿಗ್ ಬಾಸ್ ಗೆ “ದಬಾಂಗ್ 3” ಚಿತ್ರ ತಂಡ ತೆರಳಿದಾಗಿ ಅದರಲ್ಲಿ ಸುದೀಪ್ ಇರಲ್ಲಲಿ. ಇಷ್ಟಕ್ಕೆ ಸುಮ್ಮನಾಗದ ಸಲ್ಮಾನ್ ಖಾನ್ ಅಲ್ಲಿಂದಲೇ ಸ್ಕೈಪ್ ಮೂಲಕ ಸುದೀಪ್ ರಿಗೆ ಕರೆ ಮಾಡಿ ಕನ್ನಡ ಬಿಗ್ ಬಾಸ್ ಗೆ ಕನೆಕ್ಟ್ ಆಗಿದ್ದಾರೆ. ಅಲ್ಲಿ ಸಲ್ಮಾನ್ ಖಾನ್ ಜೊತೆಗೆ ಚಿತ್ರದ ನಿರ್ದೇಶಕ ಪ್ರಭುದೇವ, ನಾಯಕಿ ಸೋನಾಕ್ಷಿ ಸಿನ್ಹಾ, ಇನ್ನೊಬ್ಬ ನಟಿ ಸಾಯಿ ಇದ್ದರು.

ಕಿಚ್ಚ ಸುದೀಪ್ ಜೊತೆ ಸಂಪರ್ಕ ಸಾಧ್ಯವಾದ ನಂತರ ನಡೆದದ್ದು ಮಾತ್ರ ಪ್ಯೂರ್ ಫನ್. ಸಲ್ಮಾನ್ ಅವರ ಬಗ್ಗೆ ಸುದೀಪ್ ಅವರಿಗೆ ಹಾಗೂ ಸುದೀಪ್ ಅವರ ಬಗ್ಗೆ ಸಲ್ಮಾನ್ ಖಾನ್ ರಿಗೆ ಪರಸ್ಪರ ಇರುವ ಗೌರವ ಅಲ್ಲಿ ಕಾಣಲು ಸಾಧ್ಯವಾಯಿತು. ಕನ್ನಡ ಬಿಗ್ ಬಾಸ್ ಬಗ್ಗೆಯು ತಿಳಿದುಕೊಳ್ಳಲು ಸಲ್ಮಾನ್ ಖಾನ್ ಅವರಿಗೆ ಕುತೂಹಲ ಇತ್ತು. ನಾಮಿನೇಟ್ ಆಗಿರುವ ಸ್ಪರ್ಧಿಗಳಿಗೆ ನಾವು ಹಿಂದಿಯಲ್ಲಿ ಹೀಗೆ  ಹೇಳುತ್ತೇವೆ, ನೀವು ಕನ್ನಡದಲ್ಲಿ ಏನು ಹೇಳುತ್ತೀರಿ ಎಂದು ಕಿಚ್ಚಾ ಅವರನ್ನು ಸಲ್ಮಾನ್ ಕೇಳಿದರು. ಸದೀಪ್ ಕನ್ನಡದಲ್ಲಿ ಹೇಳಿಕೊಟ್ಟರೆ ಒಂದೇ ಟೇಕ್ ನಲ್ಲಿ ಅದನ್ನು ಸಲ್ಮಾನ್ ಹೇಳಿದರು.

ಅವರಿಬ್ಬರ ಮಧ್ಯೆ ನಡೆದ ಕೆಲವು ಸಂಭಾಷಣೆಗಳು ಹೀಗಿವೆ

ಸಲ್ಮಾನ್ : ಇಲ್ಲಿ ನಾವು ಹೇಳುತ್ತೇವೆ - “ಬಿಗ್ ಬಾಸ್ ಚಾಹತೇ ಹೇ” ಇದನ್ನು ನೀವು ಏನಂತೀರಿ ?”

ಸುದೀಪ್: ಬಿಗ್ ಬಾಸ್ ಅಪೇಕ್ಷಿಸುತ್ತಾರೆ.

ಸಲ್ಮಾನ್ : ನಿಯಮ್ ಉಲ್ಲಂಘನ್ ?

ಸುದೀಪ್: ನಿಯಮ ಉಲ್ಲಂಘನೆ ಸರ್.

ಸಲ್ಮಾನ್ : ಆ ಮೇಲೆ ಕೆಲವು ಬಾರಿ ಬಿಗ್ ಬಾಸ್ ಯಾರಾನ್ನಾದರು ಮನೆಯಿಂದ ಹೊರಗೆ ಹಾಕಬೇಕಾದರೆ ಏನು ಹೇಳುತ್ತಾರೆ?  

ಸದೀಪ್: ಹೊರಗೆ ಹಾಕೋದು.

ಇವೆಲ್ಲವನ್ನೂ ಸದೀಪ್ ಹೇಳಿದಂತೆ ಸಲ್ಮಾನ್ ಖಾನ್ ರಿಪೀಟ್ ಮಾಡುತ್ತಾರೆ. "ಇಷ್ಟೇನಾ ? ಹಾಗಾದರೆ ನಾನು ಕನ್ನಡ ಬಿಗ್ ಬಾಸ್ ನಡೆಸಿಕೊಡಬಹುದು ಏನಂತೀರಾ” ಎಂದು ಸುದೀಪ್ ಅವರನ್ನು ಕೇಳುತ್ತಾರೆ. “ಬಹಳ ಒಳ್ಳೆಯದು ಖಂಡಿತವಾಗಿಯೂ ಬನ್ನಿ ಸಾರ್. ನಮ್ಮ ಕೆಳವು ಕಂಟೆಸ್ಟೆಂಟ್ ಗಳಿಗೆ ನಿಮ್ಮ ಅವಶ್ಯಕತೆ ಇದೆ ಸಾರ್ ಎನ್ನುತ್ತಾರೆ ಸುದೀಪ್.

ಸುದೀಪ್ ಅವರ ಹಿಂದಿ ಭಾಷೆಯ ಬಗ್ಗೆಯೂ ಸಲ್ಮಾನ್ ಖಾನ್ ಮುಕ್ತಕಂಠದಿಂದ ಶ್ಲಾಘಿಸಿದರು. ಪ್ರಭುದೇವಾ ಅವರಿಗಿಂತಲೂ ಉತ್ತಮವಾಗಿ ಹಿಂದಿ ಮಾತನಾಡುತ್ತೀರಿ ಎನ್ನುವ ಮೂಲಕ ಪ್ರಭುದೇವಾ ಅವರ ಕಾಲೆಳೆದರು. ನೀವಿಬ್ಬರೂ ಜೊತೆಯಾಗಿ ಇನ್ನೂ ಸಿನೆಮಾಗಳನ್ನು ಮಾಡಬೇಕು ಎಂಬ ಮಾತುಗಳು ಚಿತ್ರ ತಂಡದಿಂದ ಬಂತು. ಈ ವೇಳೆ ಸುದೀಪ್ "ಈಗಷ್ಟೇ ಶುರು ಮಾಡಿದ್ದೇವೆ. ಇನ್ನು ಮಾಡುತ್ತೇವೆ ಎಂದರು.

ದಕ್ಷಿಣ ಭಾರತದಲ್ಲಿ ನೀವು ಇಷ್ಟು ದೊಡ್ಡ ಸ್ಟಾರ್ ಆದರೂ 'ದಬಾಂಗ್ 3' ಯಲ್ಲಿ ಖಳ ನಟನ ಪಾತ್ರ ಮಾಡಿದ್ದೀರಲ್ಲಾ ಎಂಬ ಪ್ರಶ್ನೆಗೆ "ಎಲ್ಲಿ ನಾಯಕ ಆಗಬಾರದು ಎಂದು ನನಗೆ ಚೆನ್ನಾಗಿ ಗೊತ್ತಿದೆ. ಸಲ್ಮಾನ್ ಖಾನ್ ಅವರಂಥ ನಟರ ಮುಂದೆ ಖಳ ನಟನಾಗುವುದು ದೊಡ್ಡ ಸಾಧನೆಯೇ. ನನಗೆ ಇದು ತುಂಬಾ ಖುಷಿ ಕೊಟ್ಟಿದೆ. ನನ್ನನ್ನು ಚಿತ್ರತಂಡದವರು ಹೀರೋ ನಂತೆಯೇ ನೋಡಿಕೊಂಡರು ಎಂದು ಸುದೀಪ್ ಹೇಳಿದರು.

ಈ ಇಬ್ಬರು ದಿಗ್ಗಜರ ನಡುವೆ ನಡೆದ ಅತ್ಯಂತ ಮನೋರಂಜಕ ಬಿಗ್ ಬಾಸ್ ಎಪಿಸೋಡ್ ಇಂದು ರಾತ್ರಿ 9 ಗಂಟೆಗೆ ಕಲರ್ಸ್ ಕನ್ನಡದಲ್ಲಿ  ಪ್ರಸಾರವಾಗಲಿದೆ. ಆ ಮೇಲೆ ವೂಟ್ ನಲ್ಲಿ ಯಾವಾಗಬೇಕಾದರೂ ಎಷ್ಟು ಸಾರಿ ಬೇಕಾದರೂ ನೋಡಬಹುದು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News