ಭಾರತದ ಮಾರುಕಟ್ಟೆಗಳಿಗೆ ಮುಕ್ತ ಪ್ರವೇಶಕ್ಕೆ ಪರಿತಪಿಸುತ್ತಿರುವ ವಿದೇಶಗಳು: ಜೈನ್ ಮೆಹ್ತಾ

Update: 2019-12-07 18:01 GMT

ಬೆಂಗಳೂರು, ಡಿ.7: ಯುರೋಪ್ ಸೇರಿದಂತೆ ಅಂತಾರಾಷ್ಟ್ರೀಯ ಮಾರುಕಟ್ಟೆಗಳ ಒಕ್ಕೂಟಗಳು ತಮ್ಮ ಹಾಲಿನ ಉತ್ಪನ್ನಗಳನ್ನು ಭಾರತದಲ್ಲಿನ ಮಾರುಕಟ್ಟೆಗೆ ಮುಕ್ತವಾಗಿ ಪ್ರವೇಶಿಸುವ ಮೂಲಕ ಹಣಗಳಿಸಲು ಪರಿತಪಿಸುತ್ತಿದ್ದು, ಕೇಂದ್ರ ಸರಕಾರ ಅದಕ್ಕೆ ಅವಕಾಶ ನೀಡಬಾರದು ಎಂದು ಗುಜರಾತ್‌ನ ಆನಂದ್ ಡೈರಿ ಮುಖ್ಯಸ್ಥ ಜೈನ್ ಮೆಹ್ತಾ ಹೇಳಿದ್ದಾರೆ.

ಶನಿವಾರ ನಗರದ ಅರಮನೆ ರಸ್ತೆಯಲ್ಲಿನ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಆಯೋಜಿಸಿದ್ದ ‘ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ’ (ಆರ್‌ಸಿಇಪಿ) ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ‘ಹಾಲಿನ ಉತ್ಪನ್ನದ ಮೇಲೆ ಆರ್‌ಸಿಇಪಿ ಪರಿಣಾಮ’ ಕುರಿತು ಅವರು ಮಾತನಾಡಿದರು.

ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾದಂತ ಪುಟ್ಟ ದೇಶಗಳು ಅಲ್ಲಿನ ಬೇಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಡೈರಿ ಉತ್ಪನ್ನವನ್ನು ಉತ್ಪಾದಿಸುತ್ತಿವೆ. ಆ ಹಿನ್ನೆಲೆಯಲ್ಲಿ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದದ ಮೂಲಕ ಭಾರತದ ಮಾರುಕಟ್ಟೆ ಒಳಪ್ರವೇಶಿಸಲು ತುದಿಗಾಲಿನಲ್ಲಿ ನಿಂತಿವೆ. ಕೇಂದ್ರ ಸರಕಾರ ಒಪ್ಪಿಗೆ ನೀಡಬಾರದು ಎಂದು ಅವರು ಒತ್ತಾಯಿಸಿದರು.

ಕೇಂದ್ರ ಸರಕಾರ ಸಹಿ ಹಾಕಲು ಮುಂದಾಗಿರುವ ಆರ್‌ಸಿಇಪಿ ಒಪ್ಪಂದ ರೈತರ ಬದುಕನ್ನೇ ಕಸಿಯಲಿದೆ. ಇದರಿಂದಾಗಿ, ಸರಕಾರ ರೈತರಿಗೆ ಮಾರಕವಾದ ಒಪ್ಪಂದವನ್ನು ಕೈಬಿಡಬೇಕು ಎಂದ ಅವರು, ದೇಶದ ಹಾಲು ಉತ್ಪಾದನೆಗೆ ಸಂಬಂಧಿಸಿದಂತೆ ಕೇಂದ್ರ ಸರಕಾರ ತಪ್ಪು ಮಾಹಿತಿ ನೀಡುತ್ತಿದೆ ಎಂದರು.

ಕೃಷಿ ಕ್ಷೇತ್ರದಿಂದ ದೇಶದ ಜಿಡಿಪಿ ಶೇ.18 ರಷ್ಟು ಆದಾಯ ಸಂದಾಯವಾಗುತ್ತದೆ. ಅದರಲ್ಲಿ ಶೇ.30 ರಷ್ಟು ಹೈನುಗಾರಿಕೆಯಿಂದಲೇ ಸಿಗುತ್ತಿದೆ. ಭಾರತದಲ್ಲಿ ಪ್ರತಿ ವರ್ಷ ಶೇ.2 ರಿಂದ 3ರಷ್ಟು ಹಾಲು ಉತ್ಪಾದನೆ ಅಧಿಕವಾಗುತ್ತಿದೆ. ಮುಂದಿನ ಐದತ್ತು ವರ್ಷದಲ್ಲಿ ಹೈನುಗಾರಿಕೆ ಕ್ಷೇತ್ರದಲ್ಲಿ ಭಾರತದಲ್ಲಿ 13 ದಶಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಹೇಳಿದರು.

ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಮಾತನಾಡಿ, ಇಂದಿನ ನಮ್ಮ ರೈತರು ನೈತಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ದಿವಾಳಿತನವನ್ನು ಎದುರಿಸುತ್ತಿದ್ದಾರೆ. ಅಧಿಕಾರಕ್ಕೆ ಬರುವ ಸರಕಾರಗಳು ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ತೋರಿಸುತ್ತಿಲ್ಲ ಎಂದು ಆಪಾದಿಸಿದರು.

ರೈತರಿಗೆ ಬೆಂಬಲ ಬೆಲೆ ಸೇರಿದಂತೆ ಹಲವು ಅಂಶಗಳನ್ನು ಪ್ರಸ್ತಾಪಿಸಿರುವ ಸ್ವಾಮಿನಾಥನ್ ಆಯೋಗ ಜಾರಿಗೆ 15 ವರ್ಷ ತೆಗೆದುಕೊಳ್ಳುತ್ತದೆ. ಆದರೆ ಕೆಲವು ಮಸೂದೆಯನ್ನು ಚರ್ಚೆ ಮಾಡದೆ ಒಂದೇ ದಿನದಲ್ಲಿ ಅಂಗೀಕಾರ ಮಾಡುತ್ತದೆ. ಇಂತಹ ಸರಕಾರಗಳಿಂದ ಏನು ನಿರೀಕ್ಷಿಸುವುದು ಸಾಧ್ಯ. ರೈತರಿಗೆ ಶಾಶ್ವತ ಪರಿಹಾರ ಬೇಕು ಹೊರತು, ಕ್ಷಣಿಕದ್ದಲ್ಲ ಎಂದರು.

ಯಾವುದೇ ಅಂತರ್‌ರಾಷ್ಟ್ರೀಯ ಮಟ್ಟದ ಒಪ್ಪಂದವಾಗುವಾಗ ರೈತರಿಗೂ ಆ ಬಗ್ಗೆ ಮನವರಿಕೆ ಮಾಡಬೇಕು. ಆದರೆ ನಮ್ಮನ್ನಾಳುವ ಯಾವ ಸರಕಾರಗಳು ಆ ಕೆಲಸ ಮಾಡುತ್ತಿಲ್ಲ. ರೈತರಿಗೆ ಸರಕಾರ ಸಬ್ಸಿಡಿ ನೀಡುವ ಬದಲು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಲಿ ಎಂದು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟ ರಾಜ್ಯ ರೈತಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ, ಆರ್ಥಿಕ ತಜ್ಞ ದೇವೇಂದ್ರ ಶರ್ಮಾ, ಹಿರಿಯ ರಂಗಕರ್ಮಿ ಪ್ರಸನ್ನ, ರೈತ ಮುಖಂಡ ಬಸವರಾಜು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಅಡಿಕೆ ಬೆಳೆಗಾರರ ಮೇಲೆ ತೂಗುಗತ್ತಿ

ಆರ್‌ಸಿಇಪಿಗೆ ಪ್ರಧಾನಿ ಸಹಿ ಹಾಕಿದ್ದರೆ ಅದು ಅಡಿಕೆ ಬೆಳೆಗಾರರ ಮೇಲೆಯೂ ತೀವ್ರ ಪ್ರಭಾವ ಬೀರುತ್ತಿತ್ತು. ಚೀನಾ ಈಗಾಗಲೇ ಭಾರತದ ಮಾರುಕಟ್ಟೆಗೆ ಲಗ್ಗೆ ಇಡಲು ತಯಾರಿದೆ. ಸಣ್ಣ ಜಾಗ ನೀಡಿದರೂ, ಅದು ವ್ಯಾಪಕವಾಗಿ ಹರಡಿಕೊಳ್ಳಲಿದೆ. ಬಹುರಾಷ್ಟ್ರೀಯ ಕಂಪನಿಗಳು ಈಗಾಗಲೇ ಅಡಿಕೆ ಸೇವನೆಯಿಂದ ಕ್ಯಾನ್ಸರ್ ಬರುತ್ತಿದೆ ಎಂದು ಸುಳ್ಳು ಪ್ರಮಾಣ ಪತ್ರ ಸೃಷ್ಟಿಸಿಕೊಂಡು ಸುಪ್ರೀಂ ಕೋರ್ಟ್ ಮೆಟ್ಟಿಲೇರಿವೆ. ಹೀಗಾಗಿ, ಕೋರ್ಟ್ ತೂಗುಗತ್ತಿ ಅಡಿಕೆ ಬೆಳೆಗಾರರ ಮೇಲೆ ಇದೆ.

-ಅರಗ ಜ್ಞಾನೇಂದ್ರ, ತೀರ್ಥಹಳ್ಳಿ ಕ್ಷೇತ್ರದ ಶಾಸಕ ಹಾಗೂ ಕರ್ನಾಟಕ ಅಡಿಕೆ ಕಾರ್ಯಪಡೆಯ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News