ಉತ್ತರ ಪ್ರದೇಶ: ಅತ್ಯಾಚಾರ ಪ್ರಕರಣ ಹಿಂಪಡೆಯಲು ನಿರಾಕರಿಸಿದ ಸಂತ್ರಸ್ತೆ ಮೇಲೆ ಆ್ಯಸಿಡ್ ದಾಳಿ

Update: 2019-12-08 05:17 GMT

ಮುಝಫ್ಫರ್ ನಗರ, ಡಿ.8: ಉನ್ನಾವೋದಲ್ಲಿ ಅತ್ಯಾಚಾರ ಸಂತ್ರಸ್ತೆಗೆ ಬೆಂಕಿ ಹಚ್ಚಿದ ಪ್ರಕರಣ ಮಾಸುವ ಮುನ್ನವೇ ಅತ್ಯಾಚಾರ ಸಂತ್ರಸ್ತೆಯೊಬ್ಬರು ನೀಡಿರುವ ಕೇಸನ್ನು ನ್ಯಾಯಾಲಯದಿಂದ ಹಿಂಪಡೆಯದ ಕಾರಣಕ್ಕಾಗಿ ಆಕೆಯ ಮೇಲೆ ನಾಲ್ವರ ತಂಡ ಆ್ಯಸಿಡ್ ಎರಚಿದ ಘಟನೆ ಮುಝಫ್ಫರ್ ನಗರದಲ್ಲಿ ಶನಿವಾರ ನಡೆದಿದೆ.

ಮಹಿಳೆ ಶೇ.30ರಷ್ಟು ಸುಟ್ಟ ಗಾಯಗಳೊಂದಿಗೆ ಮೀರತ್ ನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಲ್ಲಿ ಆಕೆಗೆ ಚಿಕಿತ್ಸೆ ನೀಡಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಾಲ್ವರು ಆರೋಪಿಗಳ ತಂಡ 30ರ ಹರೆಯದ ಸಂತ್ರಸ್ತೆಯ ಮನೆಗೆ ಅಕ್ರಮವಾಗಿ ಪ್ರವೇಶಗೈದು ಆಕೆಗೆ ನ್ಯಾಯಾಲಯದಲ್ಲಿರುವ ಪ್ರಕರಣವನ್ನು ಹಿಂಪಡೆಯುವಂತೆ ಬೆದರಿಸಿದರೆನ್ನಲಾಗಿದೆ. ಆರೋಪಿಗಳ ಮಾತಿಗೆ ಜಗ್ಗದೆ ಇದ್ದಾಗ ಅವರು ಆಕೆಯ ಮೇಲೆ ಆ್ಯಸಿಡ್ ದಾಳಿ ನಡೆಸಿ ಪರಾರಿಯಾದರು ಎಂದು ಶಾಹ್ಪುರ್ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಗಿರಿಜಾ ಶಂಕರ್ ತ್ರಿಪಾಠಿ ತಿಳಿಸಿದ್ದಾರೆ.

ಯುವತಿ ಮೇಲೆ ಆ್ಯಸಿಡ್ ದಾಳಿ ನಡೆಸಿದ ಆರೋಪಿಗಳನ್ನು ಕಸೆರ್ವಾ ಗ್ರಾಮದ ಆರಿಫ್, ಶಾಹ್ನವಾಝ್, ಶರೀಫ್ ಮತ್ತು ಆಬಿದ್ ಎಂದು ಗುರುತಿಸಲಾಗಿದೆ. ಅವರೆಲ್ಲರೂ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ಕೆಲವು ಸಮಯದ ಹಿಂದೆ ನಾಲ್ವರು ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಮಹಿಳೆ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ಮಹಿಳೆ ಈ ಹಿಂದೆ ಪೊಲೀಸರಿಗೆ ದೂರು ನೀಡಿದ್ದರು. ಆದರೆ ಅಲ್ಲಿ ಆಕೆಗೆ ನ್ಯಾಯ ದೊರೆಯದ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು ಎನ್ನಲಾಗಿದೆ

ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 326 ಎ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News