ಪ್ರಧಾನಿ ಕಚೇರಿಯ ಅತಿಯಾದ ಅಧಿಕಾರ ಕೇಂದ್ರೀಕರಣ ದೇಶದ ಈ ಸ್ಥಿತಿಗೆ ಕಾರಣ: ರಘುರಾಮ ರಾಜನ್

Update: 2019-12-08 14:43 GMT

ಹೊಸದಿಲ್ಲಿ,ಡಿ.8: ಭಾರತವು ಇಂದು ಆರ್ಥಿಕ ಹಿಂಜರಿತದ ನಡುವಿನಲ್ಲಿದೆ ಮತ್ತು ಪ್ರಧಾನಿ ಕಚೇರಿಯಲ್ಲಿ ಅತಿಯಾದ ಅಧಿಕಾರ ಕೇಂದ್ರೀಕರಣವು ಈ ಸ್ಥಿತಿಗೆ ಕಾರಣವಾಗಿದೆ ಎಂದು ಮಾಜಿ ಆರ್‌ ಬಿಐ ಗವರ್ನರ್ ರಘುರಾಮ ರಾಜನ್ ಅವರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಬಂಡವಾಳ ವ್ಯವಸ್ಥೆಯ ಉದಾರೀಕರಣಕ್ಕೆ ಮತ್ತು ಭೂಮಿ ಹಾಗೂ ಕಾರ್ಮಿಕ ಕ್ಷೇತ್ರಗಳಲ್ಲಿ ಸುಧಾರಣೆಗಳಾಗಬೇಕು, ಹೂಡಿಕೆಯನ್ನು ಮತ್ತು ಬೆಳವಣಿಗೆಯನ್ನು ಉತ್ತೇಜಿಸಬೇಕು ಎಂದು ಆಂಗ್ಲ ನಿಯತಕಾಲಿಕವೊಂದರಲ್ಲಿ ಬರೆದಿರುವ ಲೇಖನದಲ್ಲಿ ಕರೆ ನೀಡಿರುವ ರಾಜನ್,ಪೈಪೋಟಿಯನ್ನು ಉತ್ತೇಜಿಸಲು ಮತ್ತು ಆಂತರಿಕ ದಕ್ಷತೆಯನ್ನು ಹೆಚ್ಚಿಸಲು ಮುಕ್ತ ವ್ಯಾಪಾರ ಒಪ್ಪಂದಗಳೊಂದಿಗೆ ಕೈಜೋಡಿಸುವಂತೆ ಭಾರತ ಸರಕಾರಕ್ಕೆ ಸಲಹೆ ನೀಡಿದ್ದಾರೆ.

ಏನು ತಪ್ಪಾಗಿದೆ ಎನ್ನುವುದನ್ನು ತಿಳಿದುಕೊಳ್ಳಲು ನಾವು ಹಾಲಿ ಸರಕಾರದ ಕೇಂದ್ರೀಕೃತ ಅಧಿಕಾರ ಸ್ವರೂಪದಿಂದ ಆರಂಭಿಸುವ ಅಗತ್ಯವಿದೆ. ಕೇವಲ ನೀತಿ ನಿರ್ಧಾರಗಳು ಮಾತ್ರವಲ್ಲ,ಹೊಸ ಪರಿಕಲ್ಪನೆಗಳು ಮತ್ತು ಯೋಜನೆಗಳೂ ಪ್ರಧಾನಿ ನರೇಂದ್ರ ಮೋದಿ ಅವರ ಸುತ್ತ ಇರುವ ವ್ಯಕ್ತಿಗಳ ಸಣ್ಣ ತಂಡ ಮತ್ತು ಪ್ರಧಾನಿ ಕಚೇರಿಯಿಂದಲೇ ಹೊರಹೊಮ್ಮುತ್ತವೆ. ಇದು ಪಕ್ಷದ ರಾಜಕೀಯ ಮತ್ತು ಸಾಮಾಜಿಕ ಅಜೆಂಡಾಕ್ಕೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ ಮತ್ತು ಅವು ಉತ್ತಮವಾಗಿ ನಿರ್ಧರಿಸಲ್ಪಡುತ್ತಿವೆ ಮತ್ತು ಈ ಎಲ್ಲ ವ್ಯಕ್ತಿಗಳು ತಮ್ಮ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿದವರೇ ಆಗಿದ್ದಾರೆ. ಆದರೆ ಉನ್ನತ ಮಟ್ಟದಲ್ಲಿ ಸುಸಂಬದ್ಧ ಅಭಿವ್ಯಕ್ತಿ ಕಾರ್ಯಸೂಚಿಯ ಕೊರತೆಯಿದೆ ಮತ್ತು ರಾಜ್ಯ ಮಟ್ಟಕ್ಕಿಂತ ರಾಷ್ಟ್ರೀಯ ಮಟ್ಟದಲ್ಲಿ ಆರ್ಥಿಕತೆ ಹೇಗೆ ಕೆಲಸ ಮಾಡುತ್ತದೆ ಎಂಬ ಬಗ್ಗೆ ಕಡಿಮೆ ಜ್ಞಾನವಿದೆ ಎಂದು ರಾಜನ್ ಹೇಳಿದ್ದಾರೆ.

 ಹಿಂದಿನ ಸರಕಾರಗಳು ಹಿಡಿತವಿಲ್ಲದ ಸಮ್ಮಿಶ್ರ ಕೂಟಗಳಾಗಿದ್ದಿರಬಹುದು,ಆದರೆ ಅವು ನಿರಂತರವಾಗಿ ಆರ್ಥಿಕ ಉದಾರೀಕರಣದ ಮಾರ್ಗವನ್ನೇ ಅನುಸರಿಸಿದ್ದವು ಎಂದಿರುವ ಅವರು,ಅತಿಯಾದ ಕೇಂದ್ರೀಕರಣ,ಅಧಿಕಾರಯುತ ಸಚಿವರ ಅನುಪಸ್ಥಿತಿ ಮತ್ತು ಸುಸಂಗತ ಮಾರ್ಗದರ್ಶಕ ದೂರದೃಷ್ಟಿಯ ಕೊರತೆ ಇವುಗಳಿಂದಾಗಿ ಪ್ರಧಾನಿ ಕಚೇರಿಯು ಗಮನವನ್ನು ಹರಿಸಿದಾಗ ಮಾತ್ರ ಸುಧಾರಣೆ ಪ್ರಯತ್ನಗಳು ಚುರುಕಾಗುತ್ತವೆ ಮತ್ತು ಪ್ರಧಾನಿ ಕಚೇರಿಯು ಇತರ ಜ್ವಲಂತ ವಿಷಯಗಳತ್ತ ಗಮನ ಹರಿಸಿದಾಗ ಚುರುಕನ್ನು ಕಳೆದುಕೊಳ್ಳುತ್ತವೆ ಎಂದು ಲೇಖನದಲ್ಲಿ ಬರೆದಿದ್ದಾರೆ.

ಮೋದಿ ಸರಕಾರವು ‘ಕನಿಷ್ಠ ಸರಕಾರ ಗರಿಷ್ಠ ಆಡಳಿತ ’ಘೋಷಣೆಗೆ ಒತ್ತು ನೀಡಿ ಅಧಿಕಾರಕ್ಕೆ ಬಂದಿದೆ. ಆದರೆ ಈ ಘೋಷಣೆಯನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ ಎಂದಿದ್ದಾರೆ.

 ಸಮಸ್ಯೆಯನ್ನು ಒಪ್ಪಿಕೊಳ್ಳುವುದು ಆರ್ಥಿಕ ಹಿಂಜರಿತವನ್ನು ನಿಭಾಯಿಸುವ ನಿಟ್ಟಿನಲ್ಲಿ ಮೋದಿ ಸರಕಾರದ ಮೊದಲ ಹೆಜ್ಜೆಯಾಗಬೇಕು ಎಂದಿರುವ ಅವರು, ಇದರ ಜೊತೆಗೆ ಪ್ರತಿ ಆಂತರಿಕ ಅಥವಾ ಬಾಹ್ಯ ಟೀಕೆಯನ್ನು ರಾಜಕೀಯ ಪ್ರೇರಿತ ಎಂಬ ಹಣೆಪಟ್ಟಿ ಹಚ್ಚುವುದು ನಿಲ್ಲಬೇಕು. ಸಮಸ್ಯೆಯು ತಾತ್ಕಾಲಿಕವಾಗಿದೆ ಮತ್ತು ಕೆಟ್ಟ ಸುದ್ದಿಗಳು ಹಾಗೂ ಅನುಕೂಲಕರವಲ್ಲದ ಸಮೀಕ್ಷೆಗಳನ್ನು ಮುಚ್ಚಿಡುವುದರಿಂದ ಸಮಸ್ಯೆಯು ನಿವಾರಣೆಯಾಗುತ್ತದೆ ಎಂದು ನಂಬುವುದನ್ನು ಬಿಡಬೇಕು. ಭಾರತವಿಂದು ಆರ್ಥಿಕ ಹಿಂಜರಿತದ ಮಧ್ಯದಲ್ಲಿದ್ದು,ಗ್ರಾಮೀಣ ಪ್ರದೇಶಗಳು ಹತಾಶ ಸ್ಥಿತಿಯಲ್ಲಿವೆ. ದೇಶಿಯ ಉದ್ಯಮ ಕ್ಷೇತ್ರವೂ ಹೂಡಿಕೆಯನ್ನು ಮಾಡುತ್ತಿಲ್ಲ ಮತ್ತು ಹೂಡಿಕೆಯು ಸ್ಥಗಿತಗೊಂಡಿರುವುದು ಏನೋ ದೊಡ್ಡ ತಪ್ಪಾಗಿದೆ ಎನ್ನುವುದರ ಸಂಕೇತವಾಗಿದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News