ಜ್ಞಾನದ ವಿರೋಧಕ್ಕೆ ಪ್ರಭುತ್ವವೇ ನೇತೃತ್ವ: ಡಾ.ರಹಮತ್ ತರೀಕೆರೆ

Update: 2019-12-08 15:19 GMT

ಬೆಂಗಳೂರು, ಡಿ.8: ದೇಶದಲ್ಲಿ ಬುದ್ಧಿ, ಜ್ಞಾನ ಹಾಗೂ ಬೌದ್ಧಿಕ ವಿರೋಧಿತನಗಳು ಪ್ರಭುತ್ವಗಳ ನೇತೃತ್ವದಲ್ಲೇ ನಡೆಯುತ್ತಿವೆ ಎಂದು ಹಿರಿಯ ಸಂಶೋಧಕ ಡಾ.ರಹಮತ್ ತರೀಕೆರೆ ಆತಂಕ ವ್ಯಕ್ತಪಡಿಸಿದ್ದಾರೆ.

ರವಿವಾರ ಆಕೃತಿ ಪ್ರಕಾಶನ ನಗರದ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಆಯೋಜಿಸಿದ್ದ ಲೇಖಕ ಸುಭಾಷ್ ರಾಜಮಾನೆ ಅನುವಾದಿಸಿರುವ ‘ಮುಳುಗದಿರಲಿ ಬದುಕು’ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ವಿವಿಗಳ ಅನುದಾನ ಕಡಿತ ಹಾಗೂ ಅಭಿವ್ಯಕ್ತಿ ಸ್ವಾತಂತ್ರವನ್ನ ಇಲ್ಲವಾಗಿಸುವ ಪ್ರಕ್ರಿಯೆ ನೋಡಿದರೆ ಭಾರತ ಎತ್ತ ಸಾಗುತ್ತಿದೆ ಎಂಬುದಕ್ಕೆ ಸ್ಪಷ್ಟ ನಿದರ್ಶನ ಎಂದು ತಿಳಿಸಿದರು.

ಯುವ ತಲೆಮಾರು ಸ್ವಂತ ಆಲೋಚನೆಯನ್ನು ಕಳೆದುಕೊಂಡು ಭಾರತವನ್ನು ತುಚ್ಚವಾದದ ಕಡೆಗೆ ಕರೆದೊಯ್ಯುತ್ತಿದ್ದಾರೆ. ನಾನು ದೇಶದ ಹಲವು ಪ್ರದೇಶಗಳಲ್ಲಿ ಸುತ್ತಿ, ಸಂವಾದ ನಡೆಸಿದ್ದೇನೆ. ಆದರೆ, ಇತ್ತೀಚಿನ ದಿನಗಳಲ್ಲಿ ಯುವ ತಲೆಮಾರಿನಲ್ಲಿ ಬೆಳೆಯುತ್ತಿರುವ ವಿವೇಕ ಶೂನ್ಯತೆ ದೇಶದ ಏಕತೆ, ಬಹುತ್ವಕ್ಕೆ ಅಪಾಯಕಾರಿ ಎಂದು ಎಂದು ಅವರು ಹೇಳಿದರು.

ಭಾರತದಂತಹ ಶ್ರೇಣಿಕೃತ ವ್ಯವಸ್ಥೆಯಲ್ಲಿ ಯಾವುದೇ ಒಂದು ಘಟನೆಯ ಹಿಂದೆ ಸತ್ಯಕ್ಕೆ ಒಂದು ಆಯಾಮ ಇರುವುದಿಲ್ಲ. ಕಳ್ಳತನ ಅನೈತಿಕತೆಯೇ ಎಂಬುದು ಪ್ರಶ್ನೆಯಾಗುತ್ತದೆ. ಇವೆಲ್ಲವುಗಳನ್ನು ವಿಸ್ತೃತವಾದ ಚರ್ಚೆಗಳ ಮೂಲಕ ಮಾತ್ರ ಕಂಡುಕೊಳ್ಳಲು ಸಾಧ್ಯ. ಆದರೆ, ಇವತ್ತಿನ ವ್ಯವಸ್ಥೆಯಲ್ಲಿ ಪ್ರಶ್ನೆ, ಚರ್ಚೆ ಮಾಡುವುದಕ್ಕೆ ಮುಕ್ತ ವಾತಾವರಣವೇ ಇಲ್ಲವಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಸಮಾಜಕ್ಕೆ ಬುದ್ದಿ, ಜ್ಞಾನ ಹಾಗೂ ವಿವೇಕಗಳು ಎಷ್ಟು ಮುಖ್ಯ ಎಂಬುದನ್ನು ತತ್ವ ಶಾಸ್ತ್ರದ ಅಧ್ಯಯನದಿಂದ ತಿಳಿಯಲು ಸಾಧ್ಯ. ಇವತ್ತು ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ ಕುಂಠಿತಗೊಳ್ಳುತ್ತಿರುವ ಸಂದರ್ಭದಲ್ಲಿ ರಾಜಮಾನೆ ಅನುವಾದಿಸಿರುವ ‘ಮುಳುಗದಿರಲಿ ಬದುಕು’ ಇಂತಹ ತತ್ವಶಾಸ್ತ್ರೀಯ ಕೃತಿಗಳು ಹೆಚ್ಚು ಬರಬೇಕಾಗಿದೆ. ಅವು ಓದುಗರಿಗೆ ತಲುಪಬೇಕಾಗಿದೆ ಎಂದು ಅವರು ಹೇಳಿದರು.

ನಾಟಕಕಾರ ಕೆ.ವೈ.ನಾರಾಯಣಸ್ವಾಮಿ ಮಾತನಾಡಿ, ಇವತ್ತು ರಾಜ್ಯದ ಯವ ವಿಶ್ವವಿದ್ಯಾಲಯಗಳಲ್ಲೂ ತತ್ವಶಾಸ್ತ್ರದ ವಿಭಾಗ ಇಲ್ಲವಾಗಿದೆ. ಈ ತತ್ವಶಾಸ್ತ್ರದಿಂದ ಯಾರಿಗೂ ಲಾಭಯಿಲ್ಲವೆಂದು ನಮ್ಮ ಶಿಕ್ಷಣ ಇಲಾಖೆಯ ಅಧಿಕಾರಿಗಳು ತೀರ್ಮಾನಕ್ಕೆ ಬಂದಿದ್ದಾರೆ. ಆದರೆ, ದಶಕಗಳ ಹಿಂದೆ ಕುವೆಂಪು ಮೈಸೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದಾಗ ತತ್ವಶಾಸ್ತ್ರಕ್ಕೆ ಸಂಬಂಧಿಸಿದ ಹಲವು ಪುಸ್ತಕಗಳನ್ನು ಪ್ರಕಟಿಸಿದ್ದರೆಂದು ನೆನಪು ಮಾಡಿಕೊಂಡರು.

ಕಾರ್ಯಕ್ರಮದಲ್ಲಿ ಲೇಖಕ ಸುಭಾಷ್ ರಾಜಮಾನ, ಹಿರಿಯ ಕವಿ ಮೂಡ್ನಾಕೂಡು ಚಿನ್ನಸ್ವಾಮಿ, ಆಕೃತಿ ಪ್ರಕಶನದ ಗುರು ಮತ್ತಿತರರು ಉಪಸ್ಥಿತರಿದ್ದರು.

‘ನಾವು ಪಾಶ್ಚಾತ್ಯದಿಂದ ಕಾವ್ಯ, ಕತೆ, ಕಾದಂಬರಿ ಸೇರಿದಂತೆ ಎಲ್ಲ ರೀತಿಯ ಸಾಹಿತ್ಯವನ್ನು ಬರಮಾಡಿಕೊಂಡಿದ್ದೇವೆ. ಆದರೆ, ನಮ್ಮದೇ ಪಕ್ಕದ ಶ್ರೀಲಂಕಾ, ಬರ್ಮಾ, ಬಾಂಗ್ಲಾದೇಶ ದೇಶದ ಸಾಹಿತ್ಯದ ಕುರಿತು ಅಜ್ಞಾನಿಗಳಾಗಿದ್ದೇವೆ. ಹಾಗೆ ನೋಡಿದರೆ ಭಾರತಕ್ಕೆ ಆಫ್ರಿಕಾ ದೇಶದ ಸಾಹಿತ್ಯ ಹೆಚ್ಚು ಪ್ರಸ್ತುತವಾಗುತ್ತವೆ. ಅಲ್ಲಿನ ಹೆಸರುಗಳನ್ನು ತೆಗೆದು ಭಾರತದ ಹೆಸರನ್ನು ಸೇರಿಸಿದರೆ ನಮ್ಮದೇ ಸಾಹಿತ್ಯವಾಗುತ್ತದೆ. ಇವತ್ತಿನ ದೇಶ ಎದುರಿಸುತ್ತಿರುವ ಬಿಕ್ಕುಟ್ಟುಗಳು ಪ್ಯಾಲಿಸ್ತೇನಿ ಸೇರಿದಂತೆ ಆಫ್ರಿಕಾದ ದೇಶಗಳ ಸನ್ನಿವೇಶಗಳಿಗೆ ಹೋಲಿಸಬಹುದಾಗಿದೆ. ಹೀಗಾಗಿ ಅಲ್ಲಿ ನಡೆಯುತ್ತಿರುವ ಸಾಹಿತ್ಯ ಸೇರಿದಂತೆ ಮತ್ತಿತರ ಚಟುವಟಿಕೆಗಳನ್ನು ನಾವು ಗಂಭೀರವಾಗಿ ನೋಡಬೇಕಿದೆ

-ಡಾ.ರಹಮತ್ ತರೀಕೆರೆ, ಹಿರಿಯ ಸಂಶೋಧಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News