ಜಮ್ಮು ಕಾಶ್ಮೀರ : 24,103 ನೀಟ್ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಕೇವಲ 30 ಕಂಪ್ಯೂಟರ್ ಗಳು !

Update: 2019-12-09 08:18 GMT
ಸಾಂದರ್ಭಿಕ ಚಿತ್ರ

ಜಮ್ಮು : ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದಂದಿನಿಂದ ಅಂತರ್ಜಾಲ ಸಂಪರ್ಕಕ್ಕೆ ಇರುವ ನಿರ್ಬಂಧಗಳ ಹಿನ್ನೆಲೆಯಲ್ಲಿ  ನೀಟ್‍ಗೆ ಅರ್ಜಿ ಸಲ್ಲಿಸಲು ಸಾವಿರಾರು ಅಭ್ಯರ್ಥಿಗಳು ವಸ್ತುಶಃ ಪರದಾಡುವ ಸ್ಥೀತಿ ಎದುರಾಗಿದೆ.  

ಜಮ್ಮು ಕಾಶ್ಮೀರದಲ್ಲಿ ಪ್ರತಿ ವರ್ಷ ಸರಾಸರಿ 24,000 ಅಭ್ಯರ್ಥಿಗಳು ನೀಟ್‍ಗೆ ಹಾಜರಾಗುತ್ತಾರೆ. ಕಳೆದ ವರ್ಷ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳ ಸಂಖ್ಯೆ 24,103 ಆಗಿದ್ದರೆ ಅವರಲ್ಲಿ ಪರೀಕ್ಷೆಗೆ ಹಾಜರಾದವರ ಸಂಖ್ಯೆ 23,038 ಆಗಿದೆ. ನೀಟ್ ಅರ್ಜಿಗಳನ್ನು ಕೇವಲ ಆನ್‍ಲೈನ್ ಮೂಲಕ ಮಾತ್ರ ಸಲ್ಲಿಸಬಹುದಾದದುರಿಂದ ಅಂತರ್ಜಾಲ ಸೇವೆ ಬಾಧಿತವಾಗಿರುವ ಜಮ್ಮು ಕಾಶ್ಮೀರದಲ್ಲಿ ಸಮಸ್ಯೆಯಾಗಿದೆ.

ಶ್ರೀನಗರದ ಟಿಆರ್ ಸಿ ಫೆಸಿಲಿಟೇಶನ್ ಸೆಂಟರ್ ನಲ್ಲಿ ಆಡಳಿತ ವಿಶೇಷವಾಗಿ ವಿದ್ಯಾರ್ಥಿಗಳ ಬಳಕೆಗೆಂದು 30 ಕಂಪ್ಯೂಟರ್ ಗಳನ್ನು ಒದಗಿಸಿದೆ.  ಇದರ ಹೊರತಾಗಿ ವಿವಿಧ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗಳಲ್ಲಿರುವ ಸೆಂಟರುಗಳಲ್ಲೂ ಒಟ್ಟು ಸುಮಾರು 150 ಕಂಪ್ಯೂಟರುಗಳು ಲಭ್ಯವಿವೆ, ಅಂದರೆ ಪ್ರತಿ ಜಿಲ್ಲೆಯಲ್ಲಿ ತಲಾ ಹತ್ತು ಕಂಪ್ಯೂಟರುಗಳಿವೆ. ಆದರೆ ಈ ಕಂಪ್ಯೂಟರುಗಳನ್ನು  ಸರಕಾರಿ ಇಲಾಖೆಗಳು, ಉದ್ಯೋಗಾಕಾಂಕ್ಷಿಗಳು, ವ್ಯಾಪಾರಸ್ಥರು ಮತ್ತಿತರರು ಸದಾ ಬಳಸುತ್ತಲೇ ಇರುವುದರಿಂದ ನೀಟ್ ಆಕಾಂಕ್ಷಿಗಳು ಶ್ರೀನಗರ ಟಿಆರ್  ಸಿಯಲ್ಲಿರುವ 30 ಕಂಪ್ಯೂಟರುಗಳನ್ನೇ ಬಳಸುವ ಅನಿವಾರ್ಯತೆಯಿದೆ.

ಒಬ್ಬರು ಅರ್ಜಿ ತುಂಬಿಸಿ ಸಲ್ಲಿಸಲು ಕನಿಷ್ಠ 10 ನಿಮಿಷಗಳು ಅಗತ್ಯ.  ಒಂದು ಗಂಟೆಯಲ್ಲಿ ಹೆಚ್ಚೆಂದರೆ ಆರು ಅರ್ಜಿಗಳನ್ನು ಸಲ್ಲಿಸಬಹುದು, ನೂರಾರು ಅಭ್ಯರ್ಥಿಗಳು ಸರತಿ ಸಾಲಿನಲ್ಲಿ ನಿಂತಿರುವಾಗ ಗಂಟೆಗಟ್ಟಲೆ ಕಾಯುವ ಅನಿವಾರ್ಯತೆಯಿದೆ ಎಂದು ಅರ್ಜಿದಾರರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News