ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಖಾತೆ ತೆರೆದದ್ದೇ ನಮ್ಮ ಗೆಲುವು: ಡಾ.ಅಶ್ವಥ್ ನಾರಾಯಣ

Update: 2019-12-09 13:01 GMT

ಬೆಂಗಳೂರು, ಡಿ. 9: ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿಗೆ ಖಾತೆ ತೆರೆಯಲಾಗದು ಎಂಬ ಮಾತಿತ್ತು. ಅದನ್ನು ನಮ್ಮ ಸರಕಾರ ಅಳಿಸಿ ಹಾಕಿದೆ. ಸಿಎಂ ಯಡಿಯೂರಪ್ಪ ನಾಯಕತ್ವದಲ್ಲಿ ಮಂಡ್ಯಕ್ಕೆ ಒಬ್ಬ ಪ್ರತಿನಿಧಿ ಸಿಕ್ಕಿದ್ದಾರೆಂದು ಉಪಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ ಪ್ರತಿಕ್ರಿಯಿಸಿದ್ದಾರೆ.

ಸೋಮವಾರ ಫಲಿತಾಂಶದ ಬಳಿಕ ಪ್ರತಿಕ್ರಿಯೆ ನೀಡಿದ ಅವರು, ಕೆ.ಆರ್.ಪೇಟೆ ಜನರ ಆಶೀರ್ವಾದಿಂದ ನಾರಾಯಣಗೌಡ ಈ ಅಗ್ನಿ ಪರೀಕ್ಷೆ ಗೆದ್ದು ಬಂದಿದ್ದಾರೆ. ಕ್ಷೇತ್ರದಲ್ಲಿ ಜನರ ವಿಶ್ವಾಸ ಗಳಿಸಿ, ಗೆಲುವಿನ ನಗೆ ಬೀರಿದ್ದಾರೆ. ಮಂಡ್ಯಕ್ಕೆ ಈ ಸರಕಾರದಲ್ಲಿ ಪಾಲಿರಬೇಕು. ಮಂಡ್ಯ ಎಲ್ಲ ರೀತಿಯಲ್ಲಿ ಅಭಿವೃದ್ಧಿ ಆಗಬೇಕು ಎಂದರು.

ಯಾವುದೋ ಒಂದು ಕುಟುಂಬ ಅಥವಾ ವ್ಯಕ್ತಿಗೆ ಸೀಮಿತವಾಗಿರಬಹುದು. ಕ್ಷೇತ್ರದ ಅಭಿವೃದ್ಧಿಯೇ ಮುಖ್ಯ ವಿಷಯವಾಗಬೇಕು ಎಂಬ ಅಭಿಪ್ರಾಯವನ್ನು ಜನರ ಮುಂದಿಟ್ಟಿದ್ದೆವು. ಜನ ಅದಕ್ಕೆ ಪೂರಕವಾಗಿ ಸ್ಪಂದಿಸಿದ್ದಾರೆ. ನಮ್ಮನ್ನು ಬೆಂಬಲಿಸಿ ಕೈ ಹಿಡಿದ ಮಂಡ್ಯದ ಜನರಿಗೆ ಧನ್ಯವಾದ ಸಲ್ಲಿಸುವೆ ಎಂದು ಹೇಳಿದರು.

ಕೆ.ಆರ್.ಪೇಟೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ನಾರಾಯಣಗೌಡ ಅಂದು ಕೈಗೊಂಡ ದಿಟ್ಟ ನಿರ್ಣಯ ನಿಜಕ್ಕೂ ಅಚ್ಚರಿ ಮೂಡಿಸಿತ್ತು. ಕೆ.ಆರ್.ಪೇಟೆಯಲ್ಲಿ ಇಂಥ ನಿರ್ಣಯ ಕೈಗೊಳ್ಳುವುದು ಆತ್ಮಹತ್ಯೆ ಮಾಡಿಕೊಂಡಂತೆ ಎಂದು ಹಲವರು ವಿಶ್ಲೇಷಿಸಿದ್ದರು. ಆದರೆ, ಇಂಥ ಮಾತುಗಳಿಗೆ ಕಿವಿಗೊಡದೇ ದಿಟ್ಟ ನಿರ್ಧಾರ ಕೈಗೊಂಡರು. ನಮ್ಮ ಪಕ್ಷ, ನಮ್ಮ ಸರಕಾರ ಅವರಿಗೆ ಸಂಪೂರ್ಣ ಬೆಂಬಲ ಕೊಟ್ಟು, ಗೆಲುವಿಗೆ ಸಹಕರಿಸಿತು ಎಂದರು. ಮುಖ್ಯಮಂತ್ರಿ ಕೆ.ಆರ್.ಪೇಟೆ ಕ್ಷೇತ್ರಕ್ಕೆ ಸೇರಿದವರು. ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರ ಸತ್ಕಾರ್ಯಗಳನ್ನು ಗಮನದಲ್ಲಿಟ್ಟುಕೊಂಡು ಜನ ಅವರ ಕೈಹಿಡಿದು ಬೆಂಬಲಿಸಿದ್ದಾರೆ. ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಕ್ಷೇತ್ರದ ಹೆಮ್ಮೆಯ ಪುತ್ರ ಯಡಿಯೂರಪ್ಪ ಅವರಿಗೆ ಜನ ಇನ್ನೂ ಹೆಚ್ಚಿನ ಮಾನ್ಯತೆ, ಗೌರವ ತಂದುಕೊಟ್ಟಿದ್ದಾರೆ ಎಂದು ಅಶ್ವತ್ಥ ನಾರಾಯಣ್ ತಿಳಿಸಿದರು.

ಹದಿನೈದು ಕ್ಷೇತ್ರಗಳ ಉಪಚುನಾವಣೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರಕಾರವನ್ನು ಮೆಚ್ಚಿ ಜನ ಮನ್ನಣೆ ನೀಡಿ, ಬಿಜೆಪಿ ಅಭ್ಯರ್ಥಿಗಳಿಗೆ ಮತ ನೀಡುವ ಮೂಲಕ ಆಶೀರ್ವಾದ ಮಾಡಿದ್ದಾರೆ. ಆಯ್ಕೆಯಾದ ಎಲ್ಲ ಶಾಸಕರಿಗೆ ಅಭಿನಂದನೆಗಳು. ಗೆಲುವಿಗೆ ಶ್ರಮಿಸಿದ ಪಕ್ಷದ ಕಾರ್ಯಕರ್ತರಿಗೆ ಆಭಾರಿ’

-ಗೋವಿಂದ ಕಾರಜೋಳ, ಉಪಮುಖ್ಯಮಂತ್ರಿ

‘ಇದೊಂದು ಅಸಹ್ಯ ಸರಕಾರ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಮೂದಲಿಸಿದ್ದ ಮಾತಿಗೆ ಸಹಮತ ವ್ಯಕ್ತಪಡಿಸುವಂತೆ ರಾಜ್ಯದ 15 ಕ್ಷೇತ್ರಗಳ ಪ್ರಜ್ಞಾವಂತ ಮತದಾರರು ‘ಪವಿತ್ರ’ ಮತ್ತು ‘ಸುಭದ್ರ’ ಸರಕಾರಕ್ಕೆ ಮುದ್ರೆ ಒತ್ತಿರುವುದಕ್ಕೆ ಮನದಾಳದ ಅಭಿನಂದನೆಗಳು’

-ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News