ರಾಜ್ಯದ ಅತ್ಯಂತ ಶ್ರೀಮಂತ ರಾಜಕಾರಣಿ ಎಂಟಿಬಿ ನಾಗರಾಜ್ ರನ್ನು ಮಣಿಸಿದ ಪಕ್ಷೇತರ ಅಭ್ಯರ್ಥಿ

Update: 2019-12-09 11:01 GMT

ಬೆಂಗಳೂರು: ರಾಜ್ಯದ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ 12 ಕ್ಷೇತ್ರಗಳನ್ನು ಗೆದ್ದು ಜಯಭೇರಿ ಬಾರಿಸಿದೆ. ಈ ಚುನಾವಣೆ ಕಾಂಗ್ರೆಸ್ ಗೆ ಭಾರೀ ಹೊಡೆತ ನೀಡಿದ್ದು, ಚುನಾವಣೆಯ ಸೋಲಿನ ಹೊಣೆ ಹೊತ್ತು ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿದ್ದಾರೆ.

ಅನರ್ಹ ಶಾಸಕರ ಭವಿಷ್ಯವನ್ನು ನಿರ್ಧರಿಸುವ ಚುನಾವಣೆ ಇದಾಗಿದ್ದು, ಪ್ರತಿಯೊಬ್ಬರೂ ಗೆಲ್ಲಲೇಬೇಕು ಎನ್ನುವ ಅನಿವಾರ್ಯದಲ್ಲಿದ್ದರು. ಹೆಚ್ಚಿನ ಎಲ್ಲಾ ಅನರ್ಹ ಶಾಸಕರು ತಮ್ಮ ಗೆಲುವಿನ ಪತಾಕೆ ಹಾರಿಸಲು ಯಶಸ್ವಿಯಾಗಿದ್ದರೆ, ಎಚ್. ವಿಶ್ವನಾಥ್ ಮತ್ತು ಎಂಟಿಬಿ ನಾಗರಾಜ್ ಸೋಲನುಭವಿಸಿದ್ದಾರೆ. ಅದರಲ್ಲೂ ಎಂಟಿಬಿ ನಾಗರಾಜ್ ಸೋತದ್ದು ಪಕ್ಷೇತರ ಅಭ್ಯರ್ಥಿಯ ಎದುರು ಎನ್ನುವುದು  ವಿಶೇಷ.

ರಾಜ್ಯದ ಅತ್ಯಂತ ಶ್ರೀಮಂತ ರಾಜಕಾರಣಿಯಾದ ಎಂಟಿಬಿ ನಾಗರಾಜ್ ಪ್ರಭಾವಿ ಕೂಡ. ಇಷ್ಟೇ ಅಲ್ಲದೆ ರಾಜ್ಯದ ಆಡಳಿತಾರೂಢ ಬಿಜೆಪಿ ಸರಕಾರದ ಬೆಂಬಲವೂ ಅವರಿಗಿತ್ತು ಮತ್ತು ಬಿಜೆಪಿ ಅಭ್ಯರ್ಥಿಯಾಗಿ ಅವರು ಕಣಕ್ಕಿಳಿದಿದ್ದರು. ಉಪಚುನಾವಣೆಗಳಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಆಡಳಿತಾರೂಢ ಪಕ್ಷಗಳಿಗೆ ಹೆಚ್ಚಿದ್ದರೂ ಈ ಬಾರಿಯ ಉಪಚುನಾವಣೆಯಲ್ಲಿ ಎಂಟಿಬಿ ಸೋತದ್ದು ವಿಶೇಷವೇ ಸರಿ.

ಅದರಲ್ಲೂ ಆಡಳಿತ ಪಕ್ಷದ ಅಭ್ಯರ್ಥಿ ಸೋತದ್ದು ಪಕ್ಷೇತರ ಅಭ್ಯರ್ಥಿಯ ಎದುರಲ್ಲಿ ಎನ್ನುವುದು ಕೂಡ ಉಲ್ಲೇಖಾರ್ಹ. ಉಪಚುನಾವಣೆಯ ಮತದಾನ ನಡೆದ ಕೆಲ ದಿನಗಳಲ್ಲೇ ತನ್ನ ಸೋಲಿನ ಅರಿವಾದಂತೆ ಎಂಟಿಬಿ ನಾಗರಾಜ್ ಸಿಎಂ ಯಡಿಯೂರಪ್ಪರನ್ನು ಭೇಟಿಯಾಗಿ ಸಂಸದ ಬಚ್ಚೇಗೌಡ ವಿರುದ್ಧ ದೂರು ನೀಡಿದ್ದರು ಎಂದು ವರದಿಯಾಗಿತ್ತು.

ಡಾಲರ್ಸ್‌ ಕಾಲನಿಯಲ್ಲಿನ ಸಿಎಂ ಧವಳಗಿರಿ ನಿವಾಸದಲ್ಲಿ ಬಿಎಸ್‌ವೈ ಅವರನ್ನು ಭೇಟಿ ಮಾಡಿದ ಎಂ.ಟಿ.ಬಿ. ನಾಗರಾಜ್, ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡಗೆ ಸಂಸದ ಬಚ್ಚೇಗೌಡ ಬೆಂಬಲ ನೀಡಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದರು ಎಂದು ವರದಿಯಾಗಿತ್ತು.

ಇದೀಗ ಎಂಟಿಬಿ ನಾಗರಾಜ್ ಸೋಲುಂಡಿದ್ದು, ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಜಯಂಟ್ ಕಿಲ್ಲರ್ ಆಗಿ ಹೊರಹೊಮ್ಮಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News