ರಾಜ್ಯ ಕಾಂಗ್ರೆಸ್ ನಲ್ಲಿ ಹೊಸ 'ಮುಸ್ಲಿಂ ನಾಯಕ' ರಿಝ್ವಾನ್ ಅರ್ಷದ್

Update: 2019-12-09 12:20 GMT
ಫೈಲ್ ಫೋಟೋ

ಉಪಚುನಾವಣೆಯಲ್ಲಿ ಭಾರೀ ಮುಖಭಂಗ ಎದುರಿಸಿರುವ ಕಾಂಗ್ರೆಸ್ ಬೆಂಗಳೂರಿನಲ್ಲಿ ಗೆದ್ದ ಏಕೈಕ ಕ್ಷೇತ್ರ ಶಿವಾಜಿನಗರ. ಈ ಕ್ಷೇತ್ರದಲ್ಲಿ ಜಿದ್ದಾಜಿದ್ದಿನ ಹೋರಾಟದಲ್ಲಿ ಕರ್ನಾಟಕ ಕಾಂಗ್ರೆಸ್ ನ 'ಯುವ ನಾಯಕ' ರಿಝ್ವಾನ್ ಅರ್ಷದ್ ಭರ್ಜರಿಯಾಗಿ ಜಯಿಸಿದ್ದಾರೆ. ಈ ಮೂಲಕ ರಾಜಧಾನಿಯಲ್ಲಿ ಪಕ್ಷದ ಮಾನ ಉಳಿಸಿದ್ದು ಮಾತ್ರವಲ್ಲದೆ ರಾಜ್ಯ ಕಾಂಗ್ರೆಸ್ ನ ಹೊಸ 'ಮುಸ್ಲಿಂ ನಾಯಕ'ನಾಗಿ ಹೊರಹೊಮ್ಮಿದ್ದಾರೆ ಎಂದು ರಾಜಕೀಯ ವಲಯಗಳಲ್ಲಿ ವಿಶ್ಲೇಷಿಸಲಾಗುತ್ತಿದೆ. 

ರಿಝ್ವಾನ್ ಅರ್ಷದ್ ಗೆ ಈ ಬಾರಿ ಶಿವಾಜಿನಗರ ಸುಲಭದ ತುತ್ತಾಗಿರಲಿಲ್ಲ. ಮುಸ್ಲಿಂ ಬಾಹುಳ್ಯ ಹಾಗು ಕಾಂಗ್ರೆಸ್ ಭದ್ರಕೋಟೆ ಎಂಬ ಹಣೆಪಟ್ಟಿ ಇದ್ದರೂ ರಿಝ್ವಾನ್ ಗೆ ಕ್ಷೇತ್ರದಲ್ಲಿ ಪಕ್ಷದೊಳಗಿಂದಲೇ ಭಾರೀ ವಿರೋಧ ಎದುರಿಸಬೇಕಾಗಿತ್ತು. ಅವರು ಸ್ಥಳೀಯರಲ್ಲ ಎಂಬುದು ಈ ವಿರೋಧಕ್ಕೆ ಪ್ರಮುಖ ಕಾರಣವಾಗಿತ್ತು. ರೋಷನ್ ಬೇಗ್ ಕಣಕ್ಕಿಳಿಯದಿದ್ದರೂ ಈ ಕ್ಷೇತ್ರದಲ್ಲಿ ಹಲವು ಬಾರಿ ಗೆದ್ದು ಕ್ಷೇತ್ರದ ನರನಾಡಿ ಬಲ್ಲವರಾಗಿದ್ದರು, ಕ್ಷೇತ್ರದ ಮೇಲೆ ಅವರಿಗೆ ಬಿಗಿ ಹಿಡಿತವಿತ್ತು ಎಂಬುದನ್ನು ಅವರ ವಿರೋಧಿಗಳೂ ಒಪ್ಪುತ್ತಿದ್ದರು. ಸಾಲದ್ದಕ್ಕೆ ಬೇಗ್ ಬೆಂಬಲಿತ ಕಾರ್ಪೊರೇಟರ್ ಗಳಿಂದಲೂ ರಿಝ್ವಾನ್ ವಿರೋಧ ಎದುರಿಸಿದ್ದರು. ಬಿಜೆಪಿ ಕೂಡ ಮಾಜಿ ಕಾರ್ಪೊರೇಟರ್ ಸರವಣ ಅವರಿಗೆ ಟಿಕೆಟ್ ನೀಡಿ ತಮಿಳು ಮತಗಳನ್ನು ಸೆಳೆಯಲು ಯೋಜನೆ ರೂಪಿಸಿತ್ತು. ಎಸ್.ಡಿ.ಪಿ.ಐ ಭರ್ಜರಿ ಪ್ರಚಾರ ನಡೆಸಿತ್ತು. ಕಣದಲ್ಲಿದ್ದ 19 ಅಭ್ಯರ್ಥಿಗಳ ಪೈಕಿ 11 ಮಂದಿ ಮುಸ್ಲಿಮರು. ರೋಷನ್ ಬೇಗ್ ಬಿಜೆಪಿ ಟಿಕೆಟ್ ಪಡೆಯುವಲ್ಲಿ ವಿಫಲವಾದರೂ ಆ ಪಕ್ಷವನ್ನು ಗೆಲ್ಲಿಸುವ ಪಣ ತೊಟ್ಟಿದ್ದರು. ಇವೆಲ್ಲವೂ ರಿಝ್ವಾನ್ ಅರ್ಷದ್ ಪಾಲಿಗೆ ಬಹುದೊಡ್ಡ ಸವಾಲಾಗಿದ್ದವು. ಸ್ವಪಕ್ಷೀಯರ ಒಳಜಗಳದಿಂದ ರಿಝ್ವಾನ್ ಸೋಲಬೇಕಾಗುತ್ತೆ ಎಂದೇ ಹೇಳಲಾಗುತ್ತಿತ್ತು. 

ಆದರೆ ಎಲ್ಲ ವಿರೋಧಗಳನ್ನು ಬದಿಗೆ ಸರಿಸಿ ಕ್ಷೇತ್ರದ ಮತದಾರರ ಮನಗೆಲ್ಲುವಲ್ಲಿ ರಿಝ್ವಾನ್ ಯಶಸ್ವಿಯಾಗಿದ್ದಾರೆ. 13 ಸಾವಿರಕ್ಕೂ ಹೆಚ್ಚು ಮತಗಳ  ಅಂತರದಿಂದ ಭರ್ಜರಿಯಾಗಿ ಜಯಿಸಿ ಮೊದಲ ಬಾರಿ ಚುನಾಯಿತ ಶಾಸಕರಾಗಿದ್ದಾರೆ. ಆ ಮೂಲಕ ರಾಜ್ಯ ಕಾಂಗ್ರೆಸ್ ನ ಹೊಸ ಮುಸ್ಲಿಂ ಮಾಸ್ ಲೀಡರ್ ಆಗಿ ಮೂಡಿಬಂದಿದ್ದಾರೆ. ರಾಜ್ಯ ಹಾಗು ರಾಷ್ಟ್ರ ಕಾಂಗ್ರೆಸ್ ನಾಯಕರ ನಡುವೆ ಮೊದಲೇ ಪ್ರಭಾವಿಯಾಗಿದ್ದ ರಿಝ್ವಾನ್ ಅರ್ಷದ್ ಈಗ ಅಧಿಕೃತವಾಗಿ ಜನನಾಯಕನಾಗಿ ವಿಧಾನಸಭೆ ಪ್ರವೇಶಿಸಲಿದ್ದಾರೆ. ಅಲ್ಲಿಗೆ ಶಿವಾಜಿನಗರದ ಮೇಲಿನ ರೋಷನ್ ಬೇಗ ಹಿಡಿತ ಕಳಚಿದೆ. ರಾಹುಲ್ ಗಾಂಧಿ ಸಹಿತ ಪಕ್ಷದ ಪ್ರಮುಖ ನಾಯಕರ ಬೆಂಬಲವೂ ಗಟ್ಟಿ ಇರುವ  ರಿಝ್ವಾನ್ ಅರ್ಷದ್ ಚುನಾವಣೆಯಲ್ಲಿ ಗೆಲ್ಲಲಿಲ್ಲ ಎಂಬ ಏಕೈಕ ಕೊರತೆ ನೀಗಿಸಿಕೊಂಡಿದ್ದಾರೆ. ಹಾಗಾಗಿ  ಬೆಂಗಳೂರಿನ ಹಾಗು ರಾಜ್ಯದ ಭವಿಷ್ಯದ  ಮುಸ್ಲಿಂ ನಾಯಕನಾಗಿ ಅವರು ಕಾಂಗ್ರೆಸ್ ನಲ್ಲಿ ಮುಂದಿನ ದಿನಗಳಲ್ಲಿ ಮಿಂಚುವುದು ಖಚಿತ ಎನ್ನುತ್ತವೆ ಕಾಂಗ್ರೆಸ್ ಮೂಲಗಳು.

ಕೇಂದ್ರ ಸಚಿವರಾಗಿ, ರಾಜ್ಯಸಭೆ ಉಪಸಭಾಪತಿಯಾಗಿ ಮಿಂಚಿದ್ದ ಕೆ.ರಹ್ಮಾನ್ ಖಾನ್ ಈಗ ಕಾಂಗ್ರೆಸ್ ನಲ್ಲಿ ಮೊದಲಿನಷ್ಟು ಪ್ರಭಾವಿಯಾಗಿಲ್ಲ. ಅಮಾನತ್ ಬ್ಯಾಂಕ್ ಮುಳುಗಿದ ಬಗ್ಗೆ ಅವರ ವಿರುದ್ಧ ಆರೋಪ ಕೇಳಿಬಂದಿವೆ. ಇನ್ನು ಬಿಜೆಪಿಗೆ ಸಹಕರಿಸಿದರೂ ಆ ಪಕ್ಷವೇ ಟಿಕೆಟ್ ನೀಡಲು ಹಿಂಜರಿದ ರೋಷನ್ ಬೇಗ್ ವಿರುದ್ಧ ಐಎಂಎ ಹಗರಣದ ಆರೋಪಗಳಿವೆ. ಝಮೀರ್ ಅಹ್ಮದ್ ಖಾನ್ ಅವರು ಈಗ ಸಿದ್ದರಾಮಯ್ಯ ಆಪ್ತ ವಲಯದಲ್ಲಿದ್ದು ಪಕ್ಷದಲ್ಲಿ ಪ್ರಭಾವಿಯಾಗಿದ್ದರೂ ಅವರ ವಿರುದ್ಧವೂ ಐಎಂಎ ಆರೋಪ ಕೇಳಿಬಂದಿದೆ. ಇದು ಅವರಿಗೆ ಮುಂದಿನ ದಿನಗಳಲ್ಲಿ ಹಿನ್ನಡೆಗೆ ಕಾರಣವಾಗುವ ಸಾಧ್ಯತೆ ಇದೆ. ಹಾಗಾಗಿ ಬೆಂಗಳೂರು ಮುಸ್ಲಿಮರು ಒಪ್ಪುವ ಮುಂದಿನ ನಾಯಕನಾಗಿ ಬೆಳೆಯುವ ಉಜ್ವಲ ಅವಕಾಶ ಈಗ 40 ವರ್ಷ ವಯಸ್ಸಿನ ರಿಝ್ವಾನ್ ಅರ್ಷದ್ ಗೆ ಇದೆ.  

ಎರಡು ಬಾರಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ರಿಝ್ವಾನ್ ಅರ್ಷದ್ ಸೋತಿದ್ದರು. ಆದರೆ ಎರಡೂ ಬಾರಿ ಮೋದಿ ಅಲೆಯಿಂದಾಗಿಯೇ ಅವರು ಸೋಲಬೇಕಾಯಿತು ಎಂದು ಹೆಚ್ಚಿನವರ ಅಭಿಪ್ರಾಯ. ಅದರಲ್ಲೂ ಆಗಿನ ಇತರ ಪರಾಜಿತ ಕಾಂಗ್ರೆಸ್ ಅಭ್ಯರ್ಥಿಗಳಿಗಿಂತ ಕಡಿಮೆ ಅಂತರದಲ್ಲಿ ಅವರು ಸೋತಿದ್ದರು. ಮೈಸೂರು ಮೂಲದ ರಿಝ್ವಾನ್ ಎನ್.ಎಸ್.ಯು.ಐ ಮೂಲಕ ರಾಜಕೀಯಕ್ಕೆ ಬಂದವರು. ಎನ್.ಎಸ್.ಯು.ಐ ರಾಜ್ಯ ಹಾಗು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದವರು. ರಾಜ್ಯ ಯುವ ಕಾಂಗ್ರೆಸ್ ಹಾಗು ರಾಷ್ಟ್ರೀಯ ಯುವ ಕಾಂಗ್ರೆಸ್ ನಲ್ಲೂ ಕ್ರಮವಾಗಿ ಉಪಾಧ್ಯಕ್ಷ ಹಾಗು ಕಾರ್ಯದರ್ಶಿಯಾಗಿ ದುಡಿದವರು. ಯುವಕಾಂಗ್ರೆಸ್ ಗೆ ಚುನಾವಣೆ ಮೂಲಕ ಭರ್ಜರಿಯಾಗಿ ಗೆದ್ದು ಮೊದಲ ಬಾರಿ ರಾಜ್ಯ ಅಧ್ಯಕ್ಷರಾದವರು. ಮತ್ತೆ ಎರಡನೇ ಬಾರಿ ಭರ್ಜರಿ ಬಹುಮತದಿಂದ ಗೆದ್ದವರು. 2016 ರಲ್ಲಿ ವಿಧಾನ ಪರಿಷತ್ ಗೆ ಆಯ್ಕೆಯಾಗಿದ್ದರು. ಈಗ ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆ ಪ್ರವೇಶಿಸುತ್ತಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News