ಉಪಚುನಾವಣೆ: ಬೆಂಗಳೂರಿನಲ್ಲಿ ಬಿಜೆಪಿ ಮೇಲುಗೈ, ಒಂದು ಕ್ಷೇತ್ರಕ್ಕೆ ಸೀಮಿತವಾದ 'ಕೈ'

Update: 2019-12-09 12:32 GMT

ಬೆಂಗಳೂರು, ಡಿ.9: ನಗರದ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಅನರ್ಹ ಶಾಸಕರು ಚುನಾಯಿತರಾಗಿದ್ದರೆ, ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ.

ಮಹಾಲಕ್ಷ್ಮಿ ಲೇಔಟ್, ಯಶವಂತಪುರ, ಕೆ.ಆರ್.ಪುರಂನಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದವರು ವಿಜೇತರಾಗಿದ್ದಾರೆ. ಶಿವಾಜಿನಗರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ರಿಝ್ವಾನ್ ಅರ್ಷದ್ ಚುನಾಯಿತರಾಗಿದ್ದಾರೆ.

ಕಾರ್ಯಕರ್ತರ ಸಂಭ್ರಮ: ನಾಲ್ಕು ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳು ಮುನ್ನಡೆ ಕಾಯ್ದುಕೊಂಡಿರುವಾಗಲೇ, ಅವರ ಕಾರ್ಯಕರ್ತರು ಘೋಷಣೆಗಳನ್ನು ಕೂಗಿ ಸಂತಸ ವ್ಯಕ್ತಪಡಿಸಿದರು. ಅಂತಿಮ ಸುತ್ತಿನ ಮತ ಎಣಿಕೆ ವೇಳೆಗೆ ವಿಜೇತ ಅಭ್ಯರ್ಥಿಗಳ ಕಾರ್ಯಕರ್ತರು ಪಟಾಕಿಗಳನ್ನು ಸಿಡಿಸಿ, ಸಿಹಿ ಹಂಚಿ ಸಂಭ್ರಮ ವ್ಯಕ್ತಪಡಿಸಿದರು.

ಎಲ್ಲೆಲ್ಲೂ ರಾರಾಜಿಸಿದ ಪಕ್ಷಗಳ ಧ್ವಜಗಳು: ಉಪ ಚುನಾವಣೆಯ ಮತ ಎಣಿಕೆ ಕೇಂದ್ರಗಳ ಸುತ್ತಮುತ್ತ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿತ್ತು. ಅದರಾಚೆಗೆ ಜಮಾಯಿಸಿದ್ದ ಎಲ್ಲ ಪಕ್ಷಗಳ ಕಾರ್ಯಕರ್ತರ ಕೈಯಲ್ಲಿ ಪಕ್ಷಗಳ ಧ್ವಜಗಳು ರಾರಾಜಿಸುತ್ತಿದ್ದವು. ಕಳೆದ ಚುನಾವಣೆ ವೇಳೆ ಕಾಂಗ್ರೆಸ್-ಜೆಡಿಎಸ್ ಬಾವುಟಗಳು ಹಿಡಿದಿದ್ದವರು ಈ ಬಾರಿ ಬಿಜೆಪಿ ಬಾವುಟಗಳನ್ನು ಹಿಡಿದುಕೊಂಡಿದ್ದರು.

ಬಿಜೆಪಿ ಕಚೇರಿಯಲ್ಲಿ ಸಂಭ್ರಮ: ಪಕ್ಷವು ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ನಗರದ ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯ ಮುಂದೆ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಚುನಾವಣಾ ಉಸ್ತುವಾರಿ ಅರವಿಂದ ಲಿಂಬಾವಳಿ ನೇತೃತ್ವದಲ್ಲಿ ನೂರಾರು ಅಭಿಮಾನಿಗಳು, ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಚುನಾವಣಾ ಫಲಿತಾಂಶಕ್ಕಾಗಿಯೇ ಬೆಳಗ್ಗೆ 7 ಗಂಟೆಯಿಂದಲೇ ಕಾಯುತ್ತಿದ್ದ ಅಭಿಮಾನಿಗಳು ಮಧ್ಯಾಹ್ನದ ವೇಳೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಪ್ರಧಾನಿ ಮೋದಿ, ಅಮಿತ್ ಶಾ, ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ನಾಯಕರಿಗೆ ಜೈಕಾರ ಕೂಗುತ್ತಾ ಸಂಭ್ರಮಿಸಿದರು.

ಕೈಕೊಟ್ಟ ಕರೆಂಟ್

ಯಶವಂತಪುರ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕೇಂದ್ರದಲ್ಲಿ ವಿದ್ಯುತ್ ಕೈ ಕೊಟ್ಟಿತು. ಸ್ಟ್ರಾಂಗ್ ರೂಂ ಓಪನ್ ಮಾಡುವ ವೇಳೆ ಕೆಲ ನಿಮಿಷಗಳ ಕಾಲ ವಿದ್ಯುತ್ ವ್ಯತ್ಯಯಗೊಂಡಿತ್ತು. ಮತ ಎಣಿಕೆ ಕೇಂದ್ರದಲ್ಲಿ ಕೈ ಕೊಟ್ಟ ವಿದ್ಯುತ್, ಲೋಡ್ ಹೆಚ್ಚಾಗಿ ವಿದ್ಯುತ್ ಸಂಪರ್ಕ ಸಿಗದೇ ಅಧಿಕಾರಿಗಳು ಪರಿತಪಿಸಿದರು. ಕೂಡಲೇ ಸ್ಥಳಕ್ಕಾಗಮಿಸಿದ ಬೆಸ್ಕಾಂ ಸಿಬ್ಬಂದಿ ಸಮಸ್ಯೆ ಸರಿಪಡಿಸಿದರು. ವಿದ್ಯುತ್ ವ್ಯತ್ಯಯದಿಂದ ಎಣಿಕೆ ಕಾರ್ಯಕ್ಕೆ ಕೆಲ ಸಮಯ ತಡೆಯುಂಟಾಯಿತು.

ಕ್ಷೇತ್ರದ ಜನತೆ ನನ್ನ ಗೆಲುವಿಗೆ ಶ್ರಮಿಸಿದ್ದಾರೆ. ನನ್ನನ್ನು ಅನರ್ಹ ಎಂಬ ಹಣೆಪಟ್ಟಿಯಿಂದ ತೆಗೆದು ಹಾಕಿ, ಅರ್ಹರೆಂದು ತೀರ್ಮಾನ ಕೊಟ್ಟಿದ್ದಾರೆ. ನನ್ನ ಗೆಲುವಿಗೆ ಶ್ರಮಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ. ನಾನು ಮಂತ್ರಿಯಾಗುತ್ತೇನೆ ಎಂದು ಎಲ್ಲಿಯೂ ಮತಯಾಚನೆ ಮಾಡಿಲ್ಲ. ಕ್ಷೇತ್ರದ ಅಭಿವೃದ್ಧಿಗಾಗಿ ಕೆಲಸ ಮಾಡುವೆ.

-ಎಸ್.ಟಿ.ಸೋಮಶೇಖರ್, ಯಶವಂತಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ

ಮೂರು ಬಾರಿ ಕ್ಷೇತ್ರದಲ್ಲಿ ಜಯಗಳಿಸಲು ಮತದಾರರು ಸಹಕರಿಸಿದ್ದಾರೆ. ಕ್ಷೇತ್ರದಲ್ಲಿ ಅನರ್ಹರೆಂದು ಹೇಳುತ್ತಿದ್ದವರಿಗೆ ಈ ಜಯದ ಮೂಲಕ ನಾನು ಮಾಡಿರುವ ಕೆಲಸಗಳು ಏನು ಎಂಬುದನ್ನು ತಿಳಿಸಿದ್ದಾರೆ. ಕ್ಷೇತ್ರದಲ್ಲಿ ನಾನು ಮಾಡಿರುವ ಅಭಿವೃದ್ಧಿ ಕೆಲಸಗಳೇ ನನ್ನ ಗೆಲುವಿಗೆ ಶ್ರೀರಕ್ಷೆಯಾಗಿದೆ.

-ಕೆ.ಗೋಪಾಲಯ್ಯ, ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ

ಶಿವಾಜಿನಗರ ಉಪ ಚುನಾವಣೆಯಲ್ಲಿ ನನ್ನಿಂದ ತಪ್ಪಾಗಿದೆ. ಕ್ಷೇತ್ರದ ಮತದಾರರನ್ನ ತಲುಪುವಲ್ಲಿ ನಾನು ವಿಫಲನಾಗಿದ್ದಾನೆ. ಈ ಉಪ ಚುನಾವಣೆಯಲ್ಲಿ ಶಿವಾಜಿನಗರದ ಜನರ ಪ್ರೀತಿ, ಆಶೀರ್ವಾದ ನನಗೆ ಸಿಕ್ಕಿದೆ. ಇಲ್ಲಿನ ಮತದಾರರ ಜೊತೆ ನನ್ನ ಒಡನಾಟ ಇದೇ ರೀತಿ ಮುಂದುವರಿಯುತ್ತದೆ.

-ತನ್ವೀರ್ ಅಹಮದ್ ವುಲ್ಲಾ, ಶಿವಾಜಿನಗರ ಜೆಡಿಎಸ್ ಪರಾಜಿತ ಅಭ್ಯರ್ಥಿ

ಗೆದ್ದ ಅಭ್ಯರ್ಥಿಗಳು:

ಶಿವಾಜಿನಗರ- ರಿಝ್ವಾನ್ ಅರ್ಷದ್(ಕಾಂಗ್ರೆಸ್)

ಮಹಾಲಕ್ಷ್ಮಿ ಲೇಔಟ್-ಕೆ.ಗೋಪಾಲಯ್ಯ(ಬಿಜೆಪಿ)

ಯಶವಂತಪುರ-ಎಸ್.ಟಿ.ಸೋಮಶೇಖರ್(ಬಿಜೆಪಿ)

ಕೆ.ಆರ್.ಪುರಂ-ಭೈರತಿ ಬಸವರಾಜ್(ಬಿಜೆಪಿ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News