ಉಪಚುನಾವಣೆಯಲ್ಲಿ ಭರ್ಜರಿ ಗೆಲುವಿನ ಬಗ್ಗೆ ಸಿಎಂ ಯಡಿಯೂರಪ್ಪ ಹೇಳಿದ್ದೇನು ?

Update: 2019-12-09 14:21 GMT

ಬೆಂಗಳೂರು, ಡಿ. 9: ವಿಪಕ್ಷ ಕಾಂಗ್ರೆಸ್-ಜೆಡಿಎಸ್ ಬಗ್ಗೆ ಟೀಕೆ ಮಾಡುತ್ತಾ ಸಮಯ ವ್ಯರ್ಥ ಮಾಡದೆ, ಇನ್ನು ರಾಜ್ಯದ ಅಭಿವೃದ್ಧಿ ಹಾಗೂ ಪಕ್ಷ ಸಂಘಟನೆ ಕುರಿತು ಆಲೋಚನೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಇಂದಿಲ್ಲಿ ತಿಳಿಸಿದ್ದಾರೆ.

ಸೋಮವಾರ ಹದಿನೈದು ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶದ ಬಳಿಕ ಬಿಜೆಪಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್-ಜೆಡಿಎಸ್ ಮಾಡುವುದರಿಂದ ನಮಗೆ ಲಾಭವಿಲ್ಲ. ಉಪಚುನಾವಣೆ ಸೋಲಿನ ಹೊಣೆಹೊತ್ತು ಅವರು ರಾಜೀನಾಮೆ ನೀಡುತ್ತಿದ್ದಾರೆ. ಅದು ಅವರ ಪಕ್ಷದ ಆಂತರಿಕ ವಿಷಯ ಅದರ ಬಗ್ಗೆ ನಾವು ತಲೆಕಡಿಸಿಕೊಳ್ಳಬೇಕಿಲ್ಲ ಎಂದರು.

ರಾಜ್ಯದ ಜನತೆ ಕೂತಲ್ಲಿ, ನಿಂತಲ್ಲಿ ರಾಜ್ಯದ ಅಭಿವೃದ್ಧಿಯ ಬಗ್ಗೆ ಮಾತನಾಡಬೇಕು. ಆ ರೀತಿಯಲ್ಲಿ ಕರ್ನಾಟಕ ರಾಜ್ಯವನ್ನು ದೇಶದಲ್ಲೆ ಮಾದರಿ ರಾಜ್ಯವನ್ನಾಗಿ ಅಭಿವೃದ್ಧಿ ಮಾಡಬೇಕು. ಆ ನಿಟ್ಟಿನಲ್ಲಿ ಸಂಪುಟ ಸಹೋದ್ಯೋಗಿಗಳು ಗಮನ ನೀಡಬೇಕು ಎಂದು ಯಡಿಯೂರಪ್ಪ ಸೂಚಿಸಿದರು.

ಖುದ್ದು ಪ್ರಧಾನಿ ಮೋದಿಯವರು ಈ ಉಪಚುನಾವಣೆ ಫಲಿತಾಂಶ ಏನಾಗುತ್ತದೆ ಎಂದು ಕಾತರದಿಂದ ಕಾಯುತ್ತಿದ್ದರು. ಫಲಿತಾಂಶವನ್ನು ನೋಡಿ ಅವರು ಬಹಳ ಸಂತೋಷವಾಗಿರುವುದು ಅವರ ಮಾತುಗಳಿಂದಲೇ ಎಲ್ಲರಿಗೂ ತಿಳಿದಿದೆ ಎಂದು ಯಡಿಯೂರಪ್ಪ ತಿಳಿಸಿದರು.

ಪಕ್ಷದ ಎಲ್ಲರ ಸಾಮೂಹಿಕ ನೇತೃತ್ವವೇ ಈ ಉಪಚುನಾವಣೆಯ ದೊಡ್ಡ ಗೆಲುವಿಗೆ ಕಾರಣ. ಉತ್ತರ ಕರ್ನಾಟಕ ಭಾಗದಲ್ಲಿ ಏಳಕ್ಕೆ ಏಳೂ ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಇದೀಗ ವಿಪಕ್ಷಗಳ ಮುಖಂಡರು ಅಲ್ಲಿಗೆ ಹೋಗಲು ಅವರಿಗೆ ಮುಖವಿಲ್ಲ ಎಂದು ಯಡಿಯೂರಪ್ಪ ವಾಗ್ದಾಳಿ ನಡೆಸಿದರು.

ಬೆಂಗಳೂರು ನಗರದ ಮೂರು ಕ್ಷೇತ್ರಗಳಲ್ಲಿ ದೊಡ್ಡ ಅಂತರದಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲವು ದಾಖಲಿಸಿದ್ದಾರೆ. ರಾಜ್ಯ ರಾಜಧಾನಿ ಬೆಂಗಳೂರಿನ ಬಗ್ಗೆ ಇಡೀ ದೇಶದ ಗಮನವಿದೆ. ಇನ್ನು 3 ತಿಂಗಳಲ್ಲಿ ಇಲ್ಲಿನ ಸ್ಥಿತಿ ಸಂಪೂರ್ಣ ಬದಲಾಗಬೇಕು ಎಂದು ಯಡಿಯೂರಪ್ಪ ಅಪೇಕ್ಷೆಪಟ್ಟರು.

ಬಿಬಿಎಂಪಿ ಸದಸ್ಯರ ನೆರವಿನಿಂದ ನಗರದ ಅಭಿವೃದ್ಧಿಗೆ ಎಲ್ಲರೂ ಪ್ರಾಮಾಣಿಕ ಪ್ರಯತ್ನ ನಡೆಸಬೇಕು ಎಂದ ಯಡಿಯೂರಪ್ಪ, ಫೆಬ್ರವರಿಯಲ್ಲಿ ಬಜೆಟ್ ಮಂಡನೆ ಮಾಡಲಿದ್ದು, ಕೃಷಿ, ನೀರಾವರಿಗೆ, ನಿರುದ್ಯೋಗ ನಿವಾರಣೆ ಹಾಗೂ ಕೈಗಾರಿಕೆಗೆ ಒತ್ತು ನೀಡುವ ಮೂಲಕ ಅಭಿವೃದ್ಧಿಗೆ ಆಸ್ಥೆ ವಹಿಸಬೇಕು ಎಂದರು.

ಪಕ್ಷದಿಂದ ದೂರವಿದ್ದ ಹಲವು ಸಮುದಾಯಗಳು ಉಪಚುನಾವಣೆಯಲ್ಲಿ ಬೆಂಬಲ ನೀಡಿದ್ದು, ಅವರ ಸಹಕಾರದಿಂದ ಮುಂದಿನ ಮೂರುವರೆ ವರ್ಷ ಪಕ್ಷದ ಸದೃಢ ಸಂಘಟನೆಯ ಮೂಲಕ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ 150 ಸ್ಥಾನಗಳನ್ನು ಗೆಲ್ಲುವ ನಿಟ್ಟಿನಲ್ಲಿ ಈಗಿನಿಂದಲೇ ಎಲ್ಲರೂ ಶ್ರಮಿಸಬೇಕು ಎಂದು ಕರೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News