ಜಿಲ್ಲಾ ವಕ್ಫ್ ಸಲಹಾ ಸಮಿತಿಗಳಿಗೆ ಸದಸ್ಯರ ನೇಮಕ: ಆದೇಶ ರದ್ದುಗೊಳಿಸಿದ ಹೈಕೋರ್ಟ್

Update: 2019-12-09 16:46 GMT

ಬೆಂಗಳೂರು, ಡಿ.9: ಬೆಂಗಳೂರನ್ನು ಉತ್ತರ ಮತ್ತು ದಕ್ಷಿಣ ಜಿಲ್ಲೆಗಳಾಗಿ ವಿಂಗಡಿಸಿ ಜಿಲ್ಲಾ ವಕ್ಫ್ ಸಲಹಾ ಸಮಿತಿಗಳಿಗೆ ಸದಸ್ಯರನ್ನು ನೇಮಕ ಮಾಡಿ ಸರಕಾರ ಹೊರಡಿಸಿದ್ದ ಆದೇಶವನ್ನು ಎತ್ತಿಹಿಡಿದ ಏಕಸದಸ್ಯ ನ್ಯಾಯಪೀಠದ ಆದೇಶವನ್ನು ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ರದ್ದುಗೊಳಿಸಿದೆ.

ಈ ಕುರಿತು ಕರ್ನಾಟಕ ವಕ್ಫ್ ಸಂರಕ್ಷಣೆ ಜಂಟಿ ಕ್ರಿಯಾ ಸಮಿತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ಈ ಆದೇಶ ನೀಡಿದೆ. ಬೆಂಗಳೂರು ಜಿಲ್ಲಾ ವಕ್ಫ್ ಮಂಡಳಿಗೆ 2011ರಿಂದ 2016ರವರೆಗೆ 5 ವರ್ಷ ಕಾಲ ಸರಕಾರ ಆಡಳಿತಾಧಿಕಾರಿಯನ್ನು ನೇಮಕ ಮಾಡಿತ್ತು. 2016ರಲ್ಲಿ ಹೊಸ ವಕ್ಫ್ ಸಮಿತಿ ನೇಮಕ ಮಾಡುವ ಬದಲು ಮತ್ತೆ ಆಡಳಿತಾಧಿಕಾರಿಯನ್ನು ನೇಮಕ ಮಾಡಿತ್ತು. ಆಡಳಿತಾಧಿಕಾರಿಯು ಬೆಂಗಳೂರು ವಕ್ಫ್ ಮಂಡಳಿಯನ್ನು ಉತ್ತರ ಹಾಗೂ ದಕ್ಷಿಣ ಜಿಲ್ಲೆಗಳಾಗಿ ವಿಂಗಡಿಸಿ ಸಲಹಾ ಸಮಿತಿಗೆ ಸದಸ್ಯರನ್ನು ನೇಮಕ ಮಾಡಿತ್ತು. ವಕ್ಫ್ ಕಾಯ್ದೆ-1995ರ ಅನ್ವಯ ವಕ್ಫ್ ಮಂಡಳಿಗೆ ಆಡಳಿತಾಧಿಕಾರಿಯನ್ನು ನೇಮಕ ಮಾಡಲು ಬರುವುದಿಲ್ಲ. ಆದರೆ ಕಾಯ್ದೆಗೆ ವಿರುದ್ಧವಾಗಿ ಆಡಳಿತಾಧಿಕಾರಿ ನೇಮಕ ಮಾಡಲಾಗಿದೆ. ಸ್ವಾಯತ್ತ ಸಂಸ್ಥೆಯಾಗಿರುವ ವಕ್ಫ್ ಮಂಡಳಿಗೆ ಸದಸ್ಯರನ್ನೊಳಗೊಂಡ ಮಂಡಳಿ ರಚಿಸುವ ಬದಲು ರಾಜ್ಯ ಸರಕಾರ ವಕ್ಫ್ ಮಂಡಳಿಯನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳಲು ಆಡಳಿತಾಧಿಕಾರಿಯನ್ನು ನೇಮಕ ಮಾಡಿದೆ ಎಂದು ಆರೋಪಿಸಿ ಕರ್ನಾಟಕ ವಕ್ಫ್ ಸಂರಕ್ಷಣೆ ಜಂಟಿ ಕ್ರಿಯಾ ಸಮಿತಿ ವಿಭಾಗೀಯ ನ್ಯಾಯಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು. ವಕೀಲರ ವಾದ ಆಲಿಸಿದ ವಿಭಾಗೀಯ ನ್ಯಾಯಪೀಠವು ಏಕಸದಸ್ಯ ನ್ಯಾಯಪೀಠ ಆದೇಶವನ್ನು ರದ್ದುಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News