ಬೆಂಗಳೂರು: ಸಿಐಐ ಎಕ್ಸ್‌ಕಾನ್-2019ಗೆ ನಾಳೆ ಕೇಂದ್ರ ಸಚಿವ ಗಡ್ಕರಿ ಚಾಲನೆ

Update: 2019-12-09 17:34 GMT

ಬೆಂಗಳೂರು, ಡಿ. 9: ದಕ್ಷಿಣ ಏಷ್ಯಾದ ಅತ್ಯಂತ ದೊಡ್ಡ ನಿರ್ಮಾಣ ಉಪಕರಣಗಳ ಮಾರಾಟ ಮೇಳದ 10ನೆ ಆವೃತ್ತಿ ಸಿಐಐ ಎಕ್ಸ್‌ಕಾನ್-2019ನ್ನು ನಾಳೆ(ಡಿ.10) ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಹಾಗೂ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ ಇಲಾಖೆ ಸಚಿವ ನಿತಿನ್ ಗಡ್ಕರಿ ಚಾಲನೆ ನೀಡಲಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಿಐಐ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳದ ಅಧ್ಯಕ್ಷ ಪಿನ್ ಸೋಂಧಿ, 21 ದೇಶಗಳ 1250ಕ್ಕೂ ಹೆಚ್ಚಿನ ಪ್ರದರ್ಶಕರು ಸಿಐಐ ಎಕ್ಸ್‌ಕಾನ್ 2019ರಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸ್ಮಾರ್ಟ್ ಐ-ಟೆಕ್-ನೆಕ್ಸ್ಟ್‌ಜೆನ್ ಇಂಡಿಯಾ75 ತಿರುಳಿನೊಂದಿಗೆ ಈ ಪ್ರದರ್ಶನ ಕಟ್ಟಡ ನಿರ್ಮಾಣ ಉಪಕರಣಗಳ ಕ್ಷೇತ್ರದಲ್ಲಿ ಇತ್ತೀಚಿನ ನವೀನತೆಗಳು ಮತ್ತು ಅಭಿವೃದ್ಧಿ ಅಲ್ಲದೆ, ತಂತ್ರಜ್ಞಾನ ಉನ್ನತೀಕರಣಗಳನ್ನು ಪ್ರದರ್ಶಿಸಲು ವೇದಿಕೆಯಾಗಲಿದೆ ಎಂದು ಅವರು ತಿಳಿಸಿದರು.

ಸಿಐಐ ಎಕ್ಸ್‌ಕಾನ್ 2019ರ ಚಾಲನಾ ಸಮಿತಿ ಸದಸ್ಯ ಸಂದೀಪ್ ಸಿಂಗ್ ಮಾತನಾಡಿ, ‘3 ಲಕ್ಷ ಚದರ ಮೀಟರ್‌ಗಳಿಗೂ ಹೆಚ್ಚಿನ ಪ್ರದರ್ಶನ ಪ್ರದೇಶ, 21 ದೇಶಗಳ 390ಕ್ಕೂ ಹೆಚ್ಚಿನ ಸಾಗರೋತ್ತರ ಕಂಪೆನಿಗಳಲ್ಲದೆ, 1250ಕ್ಕೂ ಹೆಚ್ಚಿನ ಪ್ರದರ್ಶಕರು ಈ ಪ್ರದರ್ಶನದಲ್ಲಿ ಭಾಗವಹಿಸಲಿದ್ದಾರೆ. ಡಿ.10ರಿಂದ 5 ದಿನಗಳ ಈ ಪ್ರದರ್ಶನ 70 ಸಾವಿರಕ್ಕೂ ಹೆಚ್ಚಿನ ಭಾರತ ಮತ್ತು ವಿದೇಶಗಳ ಉದ್ಯಮಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಹೇಳಿದರು.

ಸಿಐಐ ಕರ್ನಾಟಕ ರಾಜಾಧ್ಯಕ್ಷ ಅಮನ್‌ಚೌಧರಿ ಮಾತನಾಡಿ, ಎರಡು ದಶಕಗಳಲ್ಲಿ ಎಕ್ಸ್‌ಕಾನ್ ಉಪಕ್ರಮವು ಬೆಂಗಳೂರು ಭಾರತದ ಕಟ್ಟಡ ನಿರ್ಮಾಣ ಉಪಕರಣಗಳ ರಾಜಧಾನಿಯಾಗಿ ಹೊರಹೊಮ್ಮಲು ನೆರವಾಗಿದೆ ಎಂದು ಇದೇ ವೇಳೆ ತಿಳಿಸಿದರು.

ಎಕ್ಸ್‌ಕಾನ್‌ನೊಂದಿಗೆ ಸಿಐಐ ರಕ್ಷಣೆ ಮತ್ತು ಅರೆಸೈನಿಕ, ಎಂಎಸ್‌ಎಂಇ ಉದ್ಯಮ, ಹಸಿರು ಕಟ್ಟಡಗಳು, ಸ್ಮಾರ್ಟ್ ನಗರಗಳು, ನಗರಾಭಿವೃದ್ಧಿ, ಸಾರಿಗೆ ಸೇರಿ ಇನ್ನಿತರ ವಿಷಯಗಳ ಬಗ್ಗೆ ವಿಚಾರ ಸಂಕಿರಣ ನಡೆಯಲಿವೆ ಎಂದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News