ಕನ್ನಡ ಭಾಷಾನೀತಿ ಅನುಷ್ಠಾನದಲ್ಲಿ ಖಜಾನೆ ಇಲಾಖೆ ನಿರ್ಲಕ್ಷ್ಯ: ಟಿ.ಎಸ್ ನಾಗಾಭರಣ

Update: 2019-12-09 17:37 GMT

ಬೆಂಗಳೂರು, ಡಿ.9: ಆಡಳಿತದಲ್ಲಿ ಕನ್ನಡ ಭಾಷಾನೀತಿ ಅನುಷ್ಠಾನದಲ್ಲಿ ಖಜಾನೆ ಇಲಾಖೆ ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಟಿ.ಎಸ್. ನಾಗಾಭರಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸೋಮವಾರ ಖಜಾನೆಯ ಕೇಂದ್ರ ಕಚೇರಿಯಲ್ಲಿ ಕನ್ನಡ ಭಾಷಾನೀತಿ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಖಜಾನೆ ಇಲಾಖೆಯ ಅಂತರ್ಜಾಲದಲ್ಲಿ ಕನ್ನಡ ಭಾಷೆಯನ್ನು ಪ್ರಧಾನ ಭಾಷೆಯಾಗಿ ಬಳಸಿ, ಇಂಗ್ಲಿಷನ್ನು ಆಯ್ಕೆ ಭಾಷೆಯನ್ನಾಗಿ ಬಳಕೆ ಮಾಡಿಕೊಳ್ಳುವ ಅವಕಾಶ ಕಲ್ಪಿಸಿದೆ. ಆದರೆ, ಇಲಾಖೆಯ ಅಂತರ್ಜಾಲವು ಸಂಪೂರ್ಣವಾಗಿ ಆಂಗ್ಲಮಯವಾಗಿದ್ದು, ಇದು ಕನ್ನಡ ಭಾಷಾ ನೀತಿಗೆ ವಿರುದ್ಧವಾಗಿದೆ ಎಂದು ತಿಳಿಸಿದರು..

ನಿರಂತವಾಗಿ ಕನ್ನಡ ಭಾಷಾ ನೀತಿಯನ್ನು ಉಲ್ಲಂಘಿಸುತ್ತಿರುವ ಅಧಿಕಾರಿಗಳನ್ನೆ ಹೊಣೆಗಾರರನ್ನಾಗಿ ಮಾಡಿ ಅವರ ವಿರುದ್ಧ ಕಾರಣ ಕೇಳಿ ತಿಳಿವಳಿಕೆ ಪತ್ರ ನೀಡಲು ಸೂಚಿಸಿದ ಅವರು, ಅಂತರ್ಜಾಲದಲ್ಲಿನ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಕೆಲಸ ತ್ವರಿತವಾಗಿ ಮಾಡುವಂತೆ ಅವರು ಸೂಚಿಸಿದರು.

ಅಂತರ್ಜಾಲ ತಾಣ ಅಭಿವೃದ್ಧಿ ಪಡಿಸುವ ಸಂದರ್ಭದಲ್ಲಿ ಕನ್ನಡವನ್ನು ಪ್ರಧಾನವಾಗಿ ಬಳಸುವಂತೆ ಸಾಫ್ಟ್‌ವೇರ್ ಸಂಸ್ಥೆಗೆ ಸಮರ್ಪಕ ಮಾಹಿತಿ ನೀಡದ ಕಾರಣ ಇಂತಹ ತಪ್ಪುಗಳಿಗೆ ಅವಕಾಶ ಮಾಡಿಕೊಟ್ಟಂತಾಗಿದೆ. ಇದು ಅಧಿಕಾರಿಗಳ ಬೇಜವಾಬ್ದಾರಿಯನ್ನು ತೋರುತ್ತದೆ. ಮುಂದೆ ಇಂತಹ ತಪ್ಪುಗಳಿಗೆ ಎಡೆಮಾಡಿಕೊಡದಂತೆ ಎಚ್ಚರ ವಹಿಸುವಂತೆ ಸೂಚಿಸಿದರು.

ಖಜಾನೆ ಇಲಾಖೆಯ ಆಯುಕ್ತ ಉಜ್ವಲ್ ಕುಮಾರ್ ಘೋಷ್, ಅಪರ ನಿರ್ದೇಶಕ ಹನುಮಂತಪ್ಪ, ಜಂಟಿ ನಿರ್ದೇಶಕ ರಾಜೇಗೌಡ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News