ಈ ರಾಜ್ಯ ಹೆದ್ದಾರಿಯಲ್ಲಿ ಟೋಲ್ ಸಂಗ್ರಹಿಸದಂತೆ ಹೈಕೋರ್ಟ್ ಆದೇಶ

Update: 2019-12-09 17:52 GMT

ಬೆಂಗಳೂರು, ಡಿ.9: ಬೆಂಗಳೂರು-ದೊಡ್ಡಬಳ್ಳಾಪುರ ರಾಜ್ಯ ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ಮಾಡದಂತೆ ಹೈಕೋರ್ಟ್ ಆದೇಶ ನೀಡಿ, ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.

ಸೋಮವಾರ ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರವಿ ಮಳೀಮಠ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ. ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳ ನಿಯಮದ ವಿರುದ್ಧ ರಸ್ತೆ ನಿರ್ಮಾಣ ಕಾಮಗಾರಿ ಕನಿಷ್ಠ ಶೇ.70ರಷ್ಟು ಪೂರ್ಣಗೊಳ್ಳದ ಹೊರತು ಆ ರಸ್ತೆಯಲ್ಲಿ ಪ್ರಯಾಣಿಸುವ ವಾಹನ ಸವಾರರಿಂದ ಟೋಲ್ ಸಂಗ್ರಹಿಸುವಂತಿಲ್ಲ. ಹಾಗೆಯೇ, ಬೆಂಗಳೂರು-ದೊಡ್ಡಬಳ್ಳಾಪುರ ರಾಜ್ಯ ಹೆದ್ದಾರಿ ಕಾಮಗಾರಿ ಶೇ.100ರಷ್ಟು ಪೂರ್ಣಗೊಳ್ಳದೆ ಟೋಲ್ ಸಂಗ್ರಹಿಸುವಂತಿಲ್ಲ ಎಂಬುದಾಗಿ ಸರಕಾರ ಮತ್ತು ಗುತ್ತಿಗೆದಾರನ ಮಧ್ಯೆ ಒಪ್ಪಂದ ಏರ್ಪಟ್ಟಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಅಲ್ಲದೆ, ಈ ಬಗ್ಗೆ ಪ್ರಶ್ನಿಸಿದ ಸಾರ್ವಜನಿಕರನ್ನು ಟೋಲ್ ಸಿಬ್ಬಂದಿ ಅಸಂವಿಧಾನಿಕ ಪದಗಳಿಂದ ನಿಂದಿಸಿ ದೌರ್ಜನ್ಯ ಎಸಗುತ್ತಿದ್ದಾರೆ. ಪೊಲೀಸರಿಗೆ ದೂರು ನೀಡಿದರೂ ಪ್ರಯೋಜನವಾಗುತ್ತಿಲ್ಲ. ಟೋಲ್ ಸಂಗ್ರಹಿಸಿದಂತೆ ನಿರ್ದೇಶಿಸಲು ಸಂಬಂಧಪಟ್ಟ ಪ್ರಾಧಿಕಾರಕ್ಕೆ ಮನವಿ ಪತ್ರ ಸಲ್ಲಿಸಿದರೂ ಪರಿಗಣಿಸಿಲ್ಲ. ರಸ್ತೆ ಪೂರ್ಣಗೊಂಡ ನಂತರ ಟೋಲ್ ಸಂಗ್ರಹಣೆ ಮಾಡುವುದಕ್ಕೆ ನಮ್ಮ ವಿರೋಧವಿಲ್ಲ. ಅದಕ್ಕೂ ಮುನ್ನವೇ ಹಾಗೂ ಸೂಕ್ತ ಮೂಲ ಸೌಕರ್ಯ, ಸಂಚಾರಿ ನಿಯಮ ಸೂಚನಾ ಫಲಕ ಅಳವಡಿಸದೆ ಟೋಲ್ ಸಂಗ್ರಹ ಮಾಡುತ್ತಿರುವುದು ಕಾನೂನು ಬಾಹಿರವಾಗಿದೆ ಎಂದು ಅರ್ಜಿದಾರರು ದೂರಿದ್ದು, ರಸ್ತೆ ಕಾಮಗಾರಿ ಪೂರ್ಣಗೊಳ್ಳುವರೆಗೂ ಟೋಲ್ ಸಂಗ್ರಹಿಸದಂತೆ ಸರಕಾರ ಹಾಗೂ ಗುತ್ತಿಗೆದಾರರಿಗೆ ನಿರ್ದೇಶಿಸಬೇಕು ಎಂದು ಕೋರಿದ್ದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು ಬೆಂಗಳೂರು-ದೊಡ್ಡಬಳ್ಳಾಪುರ ರಾಜ್ಯ ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ಮಾಡದಂತೆ ಹೈಕೋರ್ಟ್ ಆದೇಶ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News